ಸತಿ ಪತಿಯಾದ ದಿಗಂತ್ - ಐಂದ್ರಿತಾ ರೇ

ಕನ್ನಡದ ಕ್ಯೂಟ್ ಜೋಡಿ ಈಗ ಸತಿ ಪತಿಯಾಗಿದ್ದಾರೆ. 'ಮನಸಾರೆ' ಪ್ರೀತಿ ಮಾಡಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈಗ ಮನಸಾರೆ ಮದುವೆಯಾಗಿದ್ದಾರೆ.

ನಿನ್ನೆ ಸಂಜೆ ಈ ಜೋಡಿಯ ವಿವಾಹ ನಡೆದಿದೆ. 6.30ರ ಸುಮಾರಿಗೆ ಇವರ ಮುಹೂರ್ತ ಕಾರ್ಯ ನಡೆದಿದೆ. ಬೆಂಗಳೂರು ಹೊರವಲಯದ ನಂದಿಬೆಟ್ಟದ ಸಮೀಪ ಇರುವ ಡಿಸ್ಕವರಿ ವಿಲೇಜ್ ಎಂಬ ರೆಸಾರ್ಟ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ. ಮದುವೆಯಲ್ಲಿ ಸಂಪ್ರದಾಯ ಉಡುಗೆಗಳಲ್ಲಿ ದಿಗ್ಗಿ ಐಂದ್ರಿತಾ ಮಿಂಚಿದ್ದಾರೆ.

ಹಿಂದೂ ಹಾಗೂ ಬೆಂಗಾಳಿ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ನಡೆಯಿತು. ಕಳೆದ ಎರಡು ದಿನಗಳಿಂದ ಮದುವೆ ಸಂಭ್ರಮ ಪ್ರಾರಂಭ ಆಗಿದ್ದು, ಅರಿಶಿಣ, ಸಂಗೀತ ಕಾರ್ಯಕ್ರಮದ ಬಳಿಕ ಮುಹೂರ್ತ ಸಹ ಅದ್ದೂರಿಯಾಗಿ ನೆರವೇರಿದೆ. ನಟಿ ರಾಗಿಣಿ, ಶಾರ್ಮಿಳಾ ಮಾಂಡ್ರೆ ಸೇರಿದಂತೆ ಸ್ನೇಹಿತರು ಹಾಗೂ ಕುಟುಂಬದವರು ನವ ವಧು ವರನಿಗೆ ಶುಭಾಶಯ ತಿಳಿಸಿದರು.

ಇನ್ನು ಇದೇ ತಿಂಗಳ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿಗೆ ಕನ್ನಡ ಚಿತ್ರರಂಗದ ಅನೇಕರು ಭಾಗಿಯಾಗಿ ನೂತನ ವಧು ವರರಿಗೆ ಶುಭ ಕೋರಲಿದ್ದಾರೆ.

READ SOURCE