27 ವರ್ಷಗಳ ಎವರ್‌ಗ್ರೀನ್ ಸಿನಿಮಾ 'ತಾಲ್' ಸೀಕ್ವೆಲ್; ಐಶ್ವರ್ಯಾ ರೈ, ಅಕ್ಷಯ್ ಖನ್ನಾ, ಅನಿಲ್ ಕಪೂರ್ ಇರ್ತಾರಾ?
1999ರಲ್ಲಿ ಬಾಲಿವುಡ್‌ನಲ್ಲಿ ಮ್ಯೂಸಿಕಲ್ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಸಂಚಲ ಸೃಷ್ಟಿಸಿತ್ತು. ಬಾಲಿವುಡ್‌ನ ಲೆಜೆಂಡರಿ ಡೈರೆಕ್ಟರ್ ಸುಭಾಷ್ ಘಾಯ್ ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಐಶ್ವರ್ಯಾ ರೈ ಬಚ್ಚನ್, ಅಕ್ಷಯ್ ಖನ್ನಾ, ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದುವೇ ಎವರ್‌ಗ್ರೀನ್ ಸಿನಿಮಾ 'ತಾಲ್'. ಇಂದಿಗೂ ಇದು ಸಂಗೀತ ಪ್ರಿಯರು ಹಾಗೂ ಪ್ರೇಮಿಗಳ ಅಚ್ಚು ಮೆಚ್ಚಿನ ಸಿನಿಮಾ.
'ತಾಲ್' (1999) ರಿಲೀಸ್ ಆಗಿ ಸುಮಾರು 27 ವರ್ಷಗಳ ಬಳಿಕ ನಿರ್ದೇಶಕ ಸುಭಾಷ್ ಘಾಯ್ ಈ ಸಿನಿಮಾದ ಸೀಕ್ವೆಲ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದೊಡ್ಡ ದಾಖಲೆ ಬರೆದಿದ್ದ ಸಿನಿಮಾ 'ತಾಲ್ ' ಸೀಕ್ವೆಲ್‌ಗಾಗಿ ಕಥೆಯನ್ನು ಹೆಣೆಯುತ್ತಿರುವುದಾಗಿ ಸುಭಾಷ್ ಘಾಯ್ ಮಿಡ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಒಂದ್ಕಡೆ ಲೆಜೆಂಡರಿ ನಿರ್ದೇಶಕ ಸುಭಾಷ್ ಘಾಯ್, ಇನ್ನೊಂದು ಕಡೆ ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಹಾಗೂ ಅನಿಲ್ ಕಪೂರ್ ಅಂತ ಸ್ಟಾರ್ ನಟರ ಸಮಾಗಮ ಆಗಿತ್ತು. 'ತಾಲ್'ಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, ಎ.ಆರ್. ರೆಹಮಾನ್ ಸಂಗೀತ. ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈಗ 27 ವರ್ಷಗಳ ಬಳಿಕ 'ತಾಲ್ 2'ಗೆ ಮುಹೂರ್ತ ಕೂಡಿ ಬಂದಿದ್ದು, ಈ ದಿಗ್ಗಜರೇ ನಟಿಸುತ್ತಾರಾ? ಸುಭಾಷ್ ಘಾಯ್ ನಿರ್ದೇಶನ ಇರುತ್ತಾ? ಏನೆಲ್ಲ ಬದಲಾವಣೆ ಆಗುತ್ತೆ? ಅನ್ನೋದನ್ನು ಸ್ವತ: ಸುಭಾಷ್ ಘಾಯ್ ರಿವೀಲ್ ಮಾಡಿದ್ದಾರೆ.
'ತಾಲ್' ಭಾರತೀಯ ಚಿತ್ರರಂಗದ ಬೆಸ್ಟ್ ಮ್ಯೂಸಿಕಲ್ ಸಿನಿಮಾಗಳಲ್ಲಿ ಒಂದು. ಸುಭಾಷ್ ಘಾಯ್ ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನೇ ಬರೆದಿತ್ತು. ಹಳ್ಳಿ ಪ್ರತಿಭೆ ಪ್ರೀತಿಯಲ್ಲಿ ಸೋತ ನಂತರ ಹೇಗೆ ಸ್ಟಾರ್ ಗಾಯಕಿಯಾಗಿ ಬದಲಾಗುತ್ತಾಳೆ ಅನ್ನೋದು 'ತಾಲ್' ಸಿನಿಮಾದ ಒನ್‌ಲೈನ್ ಸ್ಟೋರಿಯಾಗಿತ್ತು. ಐಶ್ವರ್ಯಾ ರೈ ಬಚ್ಚನ್, ಅಕ್ಷಯ್ ಖನ್ನ ಹಾಗೂ ಅನಿಲ್ ಕಪೂರ್ ಮೂವರ ಅಭಿನಯ ಸಿನಿಮಾ ದೊಡ್ಡ ಸಕ್ಸಸ್ ತಂದು ಕೊಟ್ಟಿತ್ತು.
'ತಾಲ್' ಸೀಕ್ವೆಲ್ ಅಂದಾಗ ಎಲ್ಲ ಕಣ್ಣು ಈ ಮೂವರ ಮೇಲೆ ಬೀಳುತ್ತದೆ. ಆದರೆ, ಸುಭಾಷ್ ಘಾಯ್ ಇವರು ಯಾರೂ ಸಿನಿಮಾದಲ್ಲಿ ಇರೋದಿಲ್ಲ ಅನ್ನೋದನ್ನು ಕನ್ಫರ್ಮ್ ಮಾಡಿದ್ದಾರೆ. ಸಿನಿಮಾ ಸೀಕ್ವೆಲ್ ಆಗಿದ್ದರೂ, ಐಶ್ವರ್ಯಾ ರೈ, ಅಕ್ಷಯ್ ಖನ್ನ ಹಾಗೂ ಅನಿಲ್ ಕಪೂರ್ ಅವರನ್ನು ಮುಂದುವರೆಸಲು ಸಾಧ್ಯವಿಲ್ಲ. ಅವರಿಗೆ ವಯಸ್ಸಾಗಿದ್ದು, ಹೊಸ ಮುಖಗಳನ್ನು ಈ ಮ್ಯೂಸಿಕಲ್ ಲವ್ ಸ್ಟೋರಿಯಲ್ಲಿ ನೋಡುವುದಕ್ಕೆ ಬಯಸುತ್ತೇನೆ ಎಂದು ಸುಭಾಷ್ ಘಾಯ್ ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಹಾಗೇ ಮುಕ್ತಾ ಆರ್ಟ್ಸ್ ಅತಿಥಿ ಪಾತ್ರಗಳನ್ನು ಕರೆದುಕೊಂಡು ಸಿನಿಮಾ ಮಾಡುವಂತಹ ಗಿಮಿಕ್ ನಡೆಯುವುದಿಲ್ಲ. ಹೀಗಾಗಿ ಐಶ್ವರ್ಯಾ ರೈ ಬಚ್ಚನ್, ಅಕ್ಷಯ್ ಖನ್ನಾ ಹಾಗೂ ಅನಿಲ್ ಕಪೂರ್ 'ತಾಲ್ 2'ನಲ್ಲಿ ಇರುವುದಿಲ್ಲ. ಒಂದು ವೇಳೆ ಸ್ಟಾರ್ ಪವರ್ ಬೇಕು ಅಂತಾದರೆ ಯಾರ ಬಳಿ ಬೇಕಾದರೂ ಕೇಳಿಕೊಳ್ಳಬಹುದು. ಆದರೆ, ಆ ಪಾತ್ರ ನ್ಯಾಯ ಒದಗಿಸಬೇಕು ಎಂದು ಸುಭಾಷ್ ಘಾಯ್ ಹೇಳಿದ್ದಾರೆ.
ಸುಭಾಷ್ ಘಾಯ್ ಕಳೆದ ಕೆಲವು ವರ್ಷಗಳಿಂದ ಈ ಲವ್ ಸ್ಟೋರಿಯನ್ನು ಹೆಣೆಯುತ್ತಿದ್ದಾರೆ. ಈಗಾಗಲೇ ಕಥೆಯನ್ನು ಒಂದು ರೂಪವನ್ನು ಕೊಟ್ಟಿದ್ದಾರೆ. ಆದರೆ, ಅವರು ನಿರ್ದೇಶನ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದಾರೆ. ಉತ್ತಮ ನಿರ್ದೇಶಕರಿಗೆ ನೀಡುತ್ತಿದ್ದು, ಅಕ್ಟೋಬರ್ ವೇಳೆಗೆ 'ತಾಲ್ 2' ಸಿನಿಮಾವನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಬಾಲಿವುಡ್‌ನಲ್ಲಿ ಈ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಮೂಡಿದೆ. ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಹಾಗೂ ಅನಿಲ್ ಕಪೂರ್ ಸ್ಥಾನಕ್ಕೆ ಯಾರು ಬರಬಹುದೆಂದು ಎದುರು ನೋಡಲಾಗುತ್ತಿದೆ.
ಹಾಗಂತ 'ತಾಲ್' ಸೀಕ್ವೆಲ್ ಅಷ್ಟೇ ಅಲ್ಲ, ಸುಷಾಬ್ ಘಾಯ್ ನಿರ್ದೇಶಿಸಿದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕರ್ಮ (1986) ಈ ಸಿನಿಮಾ ಕೂಡ ಸೀಕ್ವೆಲ್ ಆಗುತ್ತಿದೆ ಎಂದು ಸುಭಾಷ್ ಘಾಯ್ ಹೇಳಿದ್ದಾರೆ.


Click it and Unblock the Notifications