ಯುವಕರು ನಾಚುವಂತೆ 81ರ ಇಳಿವಯಸ್ಸಲ್ಲೂ ಪುಶ್-ಅಪ್ ಮಾಡ್ತಾರೆ ಈ ನಟನ ತಾಯಿ: ವೈರಲ್ ವಿಡಿಯೋ
ಸೂಪರ್ ಮಾಡೆಲ್, ಫಿಟ್ನೆಸ್ ವಿಚಾರದಲ್ಲಿ ರೋಲ್ ಮಾಡೆಲ್ ಆಗಿರುವ ನಟ ಮಿಲಿಂದ್ ಸೋಮನ್ ಅವರನ್ನು ಕಂಡು ಅನೇಕರು ಬೆರಗಾಗುತ್ತಾರೆ. ತಲೆಗೂದಲು ನೆರೆದಿದ್ದರೂ 54ರ ಹರೆಯದಲ್ಲಿಯೂ ಮಿಲಿಂದ್ ಸೋಮನ್ ಅವರ ದೇಹ 25ರ ಹರೆಯದವರಂತೆ ಕಾಣಿಸುತ್ತದೆ.
ನಿಮ್ಮ ಬಿಳಿಗೂದಲು ನೋಡಿದಾಗ ಮಾತ್ರವೇ ನಿಮಗೆ ವಯಸ್ಸಾಗಿರುವುದು ಗೊತ್ತಾಗುತ್ತದೆ ಎಂದು ಅನೇಕರು ಕಾಮೆಂಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಿಲಿಂದ್ ಆಗಾಗೆ ತಮ್ಮ ವರ್ಕೌಟ್ ವಿಡಿಯೋಗಳನ್ನು ಹಾಕುತ್ತಿರುತ್ತಾರೆ. ಅವರ ಫಿಟ್ನೆಸ್ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ ಆದರೆ ಇತ್ತೀಚೆಗೆ ಮಿಲಿಂದ್ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಅದನ್ನು ನೋಡಿದವರು ಮೂಗಿನ ಮೇಲೆ ಬೆರಳು ಇಡುವುದು ಖಚಿತ. ಆ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮುಂದೆ ಓದಿ...

15 ಪುಶ್ ಅಪ್!
ಮಿಲಿಂದ್ ಸೋಮನ್ ಅವರ ತಾಯಿ ಉಷಾ ಸೋಮನ್ ಜುಲೈ 3ರಂದು 81ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅಮ್ಮನ ಜನ್ಮದಿನದ ಸಲುವಾಗಿ ಶುಭ ಹಾರೈಸಿದ್ದ ಮಿಲಿಂದ್, ಬೆರಗು ಮೂಡಿಸುವ ವಿಡಿಯೋ ಹಂಚಿಕೊಂಡಿದ್ದರು. 81ರ ಇಳಿ ವಯಸ್ಸಿನಲ್ಲಿಯೂ ಮಿಲಿಂದ್ ತಾಯಿ 15 ಬಾರಿ ಪುಶ್ ಅಪ್ ಮಾಡುತ್ತಾರೆ. ಅದೂ ಸೀರೆ ಉಟ್ಟುಕೊಂಡು.
ಫಿಟ್ನೆಸ್ ಗುಟ್ಟು
3ನೇ ಜುಲೈ 2020. ಲಾಕ್‌ಡೌನ್‌ನಲ್ಲಿ 81ನೇ ಜನ್ಮದಿನದ ಸಂಭ್ರಮ ಆಚರಿಸಿದೆವು. 15 ಪುಶ್‌ಅಪ್‌ಗಳೊಂದಿಗೆ, ಬೆಲ್ಲದ ವೆನಿಲಾ ಬಾದಾಮಿ ಕೇಕ್ ಪಾರ್ಟಿ ಎಂದು ಮಿಲಿಂದ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದಾರೆ. ಅತ್ತೆಯ ಜನ್ಮದಿನಕ್ಕಾಗಿ ಮಿಲಿಂದ್ ಪತ್ನಿ ಅಂಕಿತಾ ಕೊನ್ವಾರ್ ವಿಶೇಷ ಕೇಕ್ ತಯಾರಿಸಿದ್ದರು. ಈ ವಿಡಿಯೋ ಯುವಕರನ್ನೂ ನಾಚಿಸುವಂತೆ ಇದೆ. ನಿಮ್ಮ ಫಿಟ್ನೆಸ್ ಗುಟ್ಟು ಈಗ ಗೊತ್ತಾಯಿತು ಎಂದು ಅನೇಕರು ಮಿಲಿಂದ್‌ಗೆ ತಿಳಿಸಿದ್ದಾರೆ.

ಕಳೆದ ಬಾರಿ ಸ್ಕೂಬಾ ಡೈವಿಂಗ್
ಅತ್ತೆ ಜತೆಗೆ ಜನ್ಮದಿನದ ಸಂಭ್ರಮದ ಫೋಟೊ ಹಾಕಿರುವ ಅಂಕಿತಾ ಅವರ ಬಗ್ಗೆ ಮತ್ತಷ್ಟು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. 81ರಲ್ಲಿಯೂ ಫಿಟ್ ಮತ್ತು ಫ್ಯಾಬುಲಸ್. ಕಳೆದ ವರ್ಷ ಅವರ 80ನೇ ಹುಟ್ಟುಹಬ್ಬದಂದು ಬಾಲಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದರು. ವರ್ಷ ಜಾಂಬಿಯಾದಲ್ಲಿ ಬಂಗೀ ಜಂಪಿಂಗ್ ಮಾಡಬೇಕಿತ್ತು ಎಂದಿದ್ದಾರೆ.

ಮನೆಯಲ್ಲಿ ಸಂಭ್ರಮ
ಜಗತ್ತಿನ ಈಗಿನ ಪರಿಸ್ಥಿತಿಯಲ್ಲಿ ಅವರ ಬಯಕೆ ಈಡೇರಿಸಲು ಸಾಧ್ಯವಾಗದೆ ಇದ್ದರೂ ಸಂತಸದ ಆರೋಗ್ಯಯುತ ಮನೆಯಲ್ಲಿ ಖುಷಿಯಾಗಿ ಅವರ ಜನ್ಮದಿನ ಆಚರಿಸಲು ಸಾಧ್ಯವಾಗಿದೆ ಎಂದು ಅಂಕಿತಾ, ಅತ್ತೆಯ ಜನ್ಮದಿನದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











