ಮಗಳಿಂದ ರಣ್‌ಬೀರ್‌ಗೆ 'ಮದ್ರಾಸ್ ಐ' ಸೋಂಕು; 'ರಾಮಾಯಣ' ಈವೆಂಟ್‌ಗೆ ಬರ್ತಾರಾ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿರುವ ಬಹುಕೋಟಿ ವೆಚ್ಚದ ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗ್ತಿದೆ. 4 ನಿಮಿಷ 15 ಸೆಕೆಂಟ್‌ಗಳ ಝಲಕ್ ಬಿಡುಗಡೆ ಆಗಲಿದೆ.
ಜುಲೈ 24ರಂದು ದೆಹಲಿಯಲ್ಲಿ ಕಾರ್ಯಕ್ರಮ ನಡೆಸಿ 'ರಾಮಾಯಣ' ಟ್ರೈಲರ್ ಸಿನಿಮಾ ಟ್ರೈಲರ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಇದೆಲ್ಲದರ ನಡುವೆ ನಟ ರಣ್‌ಬೀರ್ ಕಪೂರ್ 'ಮದ್ರಾಸ್ ಐ'(ಪಿಂಕ್ ಐ) ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಮಗಳು ರಾಹಾಳಿಂದ ರಣ್ಬೀರ್‌ಗೆ ಸೋಂಕು ತಗುಲಿದೆ ಎಂದು ಹೇಳಲಾಗ್ತಿದೆ. ಇತ್ತೀಚೆಗೆ ರಣ್‌ಬೀರ್, ಆಲಿಯಾ ಭಟ್ ಹಾಗೂ ರಾಹಾ ಐ ಕ್ಲಿನಿಕ್‌ಗೆ ಭೇಟಿ ನೀಡಿದ್ದ ವೀಡಿಯೋ ವೈರಲ್ ಆಗಿತ್ತು. ಆಗ ಮೂವರು ಕಣ್ಣಿಗೆ ಗಾಳಿ ಸೋಕದಂತೆ ಕನ್ನಡಕ ಧರಿಸಿದ್ದರು. ndtv.com ವರದಿ ಪ್ರಕಾರ ಮೊದಲು ರಾಹಾಳಿಗೆ ಸೋಂಕು ಕಾಣಿಸಿಕೊಂಡಿತ್ತು. ಆಕೆಯಿಂದ ತಂದೆಗೂ ಬಂದಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಒಂದೇ ವಾರದಲ್ಲಿ 'ಮದ್ರಾಸ್ ಐ' ಕಣ್ಣಿನ ಸಮಸ್ಯೆ ಕಮ್ಮಿ ಆಗುತ್ತದೆ. 'ರಾಮಾಯಣ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಇನ್ನು ಒಂದು ವಾರ ಬಾಕಿಯಿದೆ. ಅಷ್ಟರಲ್ಲಿ ರಣ್‌ಬೀರ್ ಚೇತರಿಸಿಕೊಳ್ಳುತ್ತಾರೆ. ಒಂದು ವೇಳೆ ಸೋಂಕು ಕಮ್ಮಿ ಆಗದೇ ಇದ್ದರೂ ಕನ್ನಡಕ ಧರಿಸಿ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಈಗಾಗಲೇ 'ರಾಮಾಯಣ' ಚಿತ್ರದಲ್ಲಿ ರಾಮನ ಅವತಾರದಲ್ಲಿ ರಣ್‌ಬೀರ್ ಟೀಸರ್ ಬಂದು ಗಮನ ಸೆಳೆದಿದೆ.
ಎರಡು ಟ್ರೈಲರ್ ಸೆನ್ಸಾರ್
ಈಗಾಗಲೇ 'ರಾಮಾಯಣ' ಚಿತ್ರದ ಟ್ರೈಲರ್ ಸೆನ್ಸಾರ್ ಕೆಲಸ ಮುಗಿಸಿದೆ. 4 ನಿಮಿಷಗಳ ಟ್ರೈಲರ್ ಕಟ್ ಮಾಡಲಾಗಿದೆ. ತ್ರಿಡಿ ವರ್ಷನ್ ಕೂಡ ಬಿಡುಗಡೆ ಆಗಲಿದೆ. ಅದು ಕಾಲಾವಧಿ 4 ನಿಮಿಷ 15 ಸೆಕೆಂಡ್ ಇರಲಿದೆ. 5 ಭಾಷೆಗಳಲ್ಲಿ ಟ್ರೈಲರ್ ಬರಲಿದ್ದು ಎಲ್ಲಾ ಭಾಷೆಗಳಲ್ಲಿ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ.
ಯಶ್ ಫ್ಯಾನ್ಸ್ ಕಾತರ
ಈಗಾಗಲೇ 'ರಾಮಾಯಣ' ಚಿತ್ರದ ಎರಡು ಪ್ರೋಮೊಗಳು ಬಂದಿದೆ. ಆದರೆ ರಾಮನಾಗಿ ರಣ್‌ಬೀರ್ ಲುಕ್ ಪಾತ್ರ ರಿವೀಲ್ ಆಗಿದೆ. ಇನ್ನುಳಿದ ಪಾತ್ರಗಳ ದರ್ಶನ ಆಗಿಲ್ಲ. ಪೋಸ್ಟರ್‌ಗಳು ಕೂಡ ಬಿಡುಗಡೆ ಆಗಿಲ್ಲ. ಮುಖ್ಯವಾಗಿ ರಾವಣನಾಗಿ ಯಶ್ ಲುಕ್ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹಿಂದಿನ ಎರಡು ಟೀಸರ್‌ಗಳಲ್ಲಿ ಯಶ್ ಲುಕ್ ರಿವೀಲ್ ಮಾಡದೇ ಚಿತ್ರತಂಡ ಕುತೂಹಲ ಉಳಿಸಿಕೊಂಡಿದೆ. ಎಲ್ಲಾ ನಿರೀಕ್ಷೆಗೆ ಜುಲೈ 24ರಂದು ಬ್ರೇಕ್ ಬೀಳಲಿದೆ. ಯಶ್ ಕೂಡ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗುವ ನಿರೀಕ್ಷೆಯಿದೆ.
ಯಶ್- ನಮಿತ್ ವಿಷನ್
4 ಸಾವಿರ ಕೋಟಿ ಬಜೆಟ್‌ನಲ್ಲಿ ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ನಿರ್ಮಾಪಕ ನಿಮಿತ್ ಮಲ್ಹೋತ್ರಾ ತಿಳಿಸಿದ್ದಾರೆ. ಅವರೊಟ್ಟಿಗೆ ನಟ ಯಶ್ ಕೂಡ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ವರ್ಷ ದೀಪಾವಳಿಗೆ ಮೊದಲ ಭಾಗ ತೆರೆಗೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ 2ನೇ ಭಾಗ ಬಿಡುಗಡೆ ಆಗಲಿದೆ. ಹನುಮಂತನಾಗಿ ಸನ್ನಿ ಡಿಯೋಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ಲಕ್ಷ್ಮಣನಾಗಿ ರವಿ ದುಬೆ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ಕಥೆಯನ್ನು ಹೇಳಲಾಗ್ತಿದೆ. ಹಾಗಾಗಿ ರಾವಣನಾಗಿ ಯಶ್ ಕೆಲವೇ ನಿಮಿಷಗಳು ತೆರೆ ಮೇಲೆ ಬರಲಿದ್ದಾರೆ.


Click it and Unblock the Notifications

