ಫಿಟ್ನೆಸ್ ಉಳಿಸಿಕೊಳ್ಳಲು ಡಯಟ್ ಫುಡ್‌ಗೆ ದೀಪಿಕಾ-ರಣವೀರ್ ಸುರಿಯುತ್ತಿರುವ ಹಣ ಎಷ್ಟು ಗೊತ್ತೇ?
ಬಾಲಿವುಡ್‌ನ ಸುಂದರ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಬಾಲಿವುಡ್ ರಂಗದಲ್ಲಿನ ಬಹಳ ಸಿರಿವಂತ ದಂಪತಿಗಳಲ್ಲಿಯೂ ಒಂದಾಗಿದ್ದಾರೆ. ಯಾವಾಗಲೂ ಜತೆಯಾಗಿ ಲವಲವಿಕೆಯಿಂದ ಇರುವ ಇಬ್ಬರೂ ತೆರೆಯ ಮೇಲೆ ತಮ್ಮ ದೇಹ ಕೊಂಚವೂ ಮುಕ್ಕಾದಂತೆ ಆರೋಗ್ಯಯುತ ಜೀವನಶೈಲಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ತಮ್ಮ ದೈನಂದಿನ ಊಟದಲ್ಲಿ ಎಲ್ಲವೂ ಸೂಕ್ತ ಪ್ರಮಾಣದಲ್ಲಿಯೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಅವರು ಆಹಾರದ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ಶೂಟಿಂಗ್ ವೇಳೆ ಬಿಡುವಿಲ್ಲದ ಕೆಲಸದಲ್ಲಿ ಅದನ್ನು ಅನುಸರಿಸುವುದು ತುಂಬಾ ಕಷ್ಟ. ಎಲ್ಲ ಸಮಯವೂ ಫಿಟ್ ಆಗಿ ಕಾಣಿಸಿಕೊಳ್ಳಲು ಮತ್ತು ಸಿದ್ಧರಾಗಿರಲು ದೀಪಿಕಾ ಮತ್ತು ರಣವೀರ್ ತಮ್ಮ ದೈನಂದಿನ ಊಟದಲ್ಲಿ ಅಗತ್ಯ ಪೌಷ್ಟಿಕಾಂಶದ ಮಟ್ಟವನ್ನು ನಿಭಾಯಿಸಿಕೊಂಡು ಬರುತ್ತಿದ್ದಾರಂತೆ. ತಮ್ಮ ದೇಹದ ಗುಣಗಳು ಹಾಗೂ ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಅವರು ಊಟದ ಕ್ರಮವನ್ನು ಪಾಲಿಸುತ್ತಿದ್ದಾರೆ. ಮುಂದೆ ಓದಿ...

ರಣವೀರ್ ದಂಪತಿಗೆ ಊಟ ಪೂರೈಕೆ
ವರದಿಗಳ ಪ್ರಕಾರ, ದೀಪಿಕಾ ಮತ್ತು ರಣವೀರ್ ಇಬ್ಬರೂ ಪಿಓಡಿ ಸಪ್ಲೈ (ಪರ್ಸನಲ್ ಆಪ್ಟಿಮೈಸ್ಡ್ ಡಯಟ್ ಸಪ್ಲೈ) ಎಂಬ ಆಹಾರ ಪೂರೈಕೆ ಏಜೆನ್ಸಿಯೊಂದಕ್ಕೆ ಚಂದಾದಾರರಾಗಿದ್ದಾರೆ. ಈ ಸಂಸ್ಥೆಯೇ ದಂಪತಿಯು ತಮ್ಮ ಫಿಟ್ನೆಸ್ ಉಳಿಸಿಕೊಳ್ಳಲು ಅಗತ್ಯವಾದ ಆಹಾರ ಮತ್ತು ಪಥ್ಯದ ಕ್ರಮದ ವ್ಯವಸ್ಥೆಯನ್ನು ಮಾಡುತ್ತಿದೆಯಂತೆ.

ಬಾಲಿವುಡ್ ಟಾಪ್ ಸ್ಟಾರ್‌ಗಳಿಗೆ ಇವರದ್ದೇ ಊಟ
ಪಿಓಡಿ ಸಪ್ಲೈ ಏಜೆನ್ಸಿಯು ಬಾಲಿವುಡ್‌ನ ಟಾಪ್ ಕಲಾವಿದರಾದ ಅಕ್ಷಯ್ ಕುಮಾರ್, ಅನಿಲ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಹಾಗೂ ಅನೇಕರಿಗೆ ಆಹಾರ ಪೂರೈಕೆ ಮಾಡುತ್ತಿದೆ. ಫಿಟ್ನೆಸ್‌ಗೆ ಆದ್ಯತೆ ನೀಡಬೇಕಿರುವ ನಟ ನಟಿಯರು ಶೂಟಿಂಗ್ ಸಂದರ್ಭದಲ್ಲಿ ಆಹಾರದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ಈ ಸಂಸ್ಥೆ ನೆರವಾಗುತ್ತಿದೆ.

ಪ್ಯಾರಿಸ್‌ಗೂ ಕರೆದೊಯ್ದಿದ್ದರು
'ರಣವೀರ್ ಸಿಂಗ್ ಕಳೆದ ಆರು ವರ್ಷಗಳಿಂದ ನಮ್ಮ ಗ್ರಾಹಕರಾಗಿದ್ದಾರೆ. ನಮ್ಮ ಆಹಾರ ಕ್ರಮವನ್ನು ಅವರು ಇಷ್ಟಪಟ್ಟಿದ್ದಾರೆ. ಅದಕ್ಕಾಗಿ 'ಬೇಫಿಕ್ರೆ' ಚಿತ್ರದ ಚಿತ್ರೀಕರಣಕ್ಕಾಗಿ ಪ್ಯಾರಿಸ್‌ಗೆ ತೆರಳಿದ್ದಾಗಲೂ ಅವರೊಂದಿಗೆ ನಾವೂ ಬರಬೇಕೆಂದು ಮನವಿ ಮಾಡಿದ್ದರು. ಅವರು ನಮ್ಮ ಉತ್ಪನ್ನಗಳನ್ನು ಪ್ರಾಮಾಣಿಕವಾಗಿ ನಂಬಿದ್ದಾರೆ. ಹಾಗೆಯೇ ತಾವು ಭೇಟಿಯಾದ ಪ್ರತಿಯೊಬ್ಬರಿಗೂ ನಮ್ಮ ಸಂಸ್ಥೆಯನ್ನು ಶಿಫಾರಸು ಮಾಡುತ್ತಾರೆ. ಶಾರುಖ್ ಖಾನ್ ನಮ್ಮ ಸೇವೆಯನ್ನು ಪಡೆದುಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ' ಎಂದು ಪಿಓಡಿ ಸಂಸ್ಥಾಪಕ ಮೋಹಿತ್ ಶವರ್ಗಾಂವ್ಕರ್ ತಿಳಿಸಿದ್ದಾರೆ.

ತಿಂಗಳಿಗೆ ತಲಾ 90,000 ರೂ.
ರಣವೀರ್ ಸಿಂಗ್ ಮತ್ತು ದೀಪಿಕಾ ಈ ಸಂಸ್ಥೆಯಿಂದ ತಿಂಗಳಿಗೆ ನಾಲ್ಕು ಊಟದ ಯೋಜನೆಯ ಪ್ಲ್ಯಾನ್‌ಗೆ ಚಂದಾದಾರರಾಗಿದ್ದಾರೆ. ಇದಕ್ಕಾಗಿ ಇಬ್ಬರೂ ತಲಾ 90,000 ರೂ. ಪಾವತಿಸುತ್ತಿದ್ದಾರೆ. ಹಾಗೆಯೇ ಹೊಸದಾಗಿ ಒಂದು ಮೀಲ್ ಪಡೆದುಕೊಂಡರೆ ಅದಕ್ಕೆ 10,000 ರೂ. ನೀಡುತ್ತಾರೆ.

ಜತೆಯಲ್ಲಿ ಬಂದರೆ ಹೆಚ್ಚು ಫೀ
ಒಂದು ವೇಳೆ ರಣವೀರ್ ಸಿಂಗ್ ಹೊರಾಂಗಣ ಚಿತ್ರೀಕರಣಕ್ಕೆ ತೆರಳಿದ್ದಾಗ ತಮ್ಮ ಜತೆ ಶೆಫ್ ಕೂಡ ಇರಬೇಕೆಂದು ಬಯಸಿ ಅವರನ್ನು ಕರೆದೊಯ್ದರೆ ಒಂದು ದಿನದ ವೆಚ್ಚ 12,000 ರೂ.ಗೆ ಹೆಚ್ಚುತ್ತದೆ. ಅಂದರೆ ದೀಪಿಕಾ ಮತ್ತು ರಣವೀರ್ ಇಬ್ಬರೂ ತಿಂಗಳಿಗೆ ತಮ್ಮ ಊಟದ ವಹಿವಾಟು ನೋಡಿಕೊಳ್ಳುವವರಿಗೇ ಕನಿಷ್ಠ ಎರಡು ಲಕ್ಷ ರೂ ಖರ್ಚು ಮಾಡುತ್ತಾರೆ.


Click it and Unblock the Notifications











