ಭೂಗತ ಲೋಕದ ಜೊತೆ ನಗ್ಮಾಗೆ ಲಿಂಕ್ ಇದ್ದಿದ್ದು ನಿಜಾನಾ? ಇದುವರೆಗೂ ಈ ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ ಏಕೆ?
ಒಂದು ಕಾಲದಲ್ಲಿ ನಗ್ಮಾ ದಕ್ಷಿಣ ಭಾರತದ ಟಾಪ್ ಸ್ಟಾರ್ ನಟಿಯರಲ್ಲಿ ಒಬ್ಬರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮಾತ್ರವಲ್ಲ ಹಿಂದಿ ಚಿತ್ರರಂಗದಲ್ಲೂ ನಟಿಸಿ ಪಂಚಭಾಷಾ ತಾರೆಯಾಗಿದ್ರು. ತನ್ನ ಹಾಟ್ ಇಮೇಜ್‌ಗಾಗಿ ಹೆಸರುವಾಸಿಯಾಗಿದ್ದ ಈ ನಟಿ ನಿಧಾನಕ್ಕೆ ತೆರೆಮರೆಗೆ ಸರಿದರು. ಅದೇ ಸಂದರ್ಭದಲ್ಲಿ ನಗ್ಮಾ ಸಹೋದರಿ ಜ್ಯೋತಿಕಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದರು. ಅಷ್ಟರಲ್ಲಿ ನಗ್ಮಾ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವಾದ್ರು.
ಆದರೆ, ನಗ್ಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ ಆಕೆಯ ಸುತ್ತ ಗಾಸಿಪ್‌ಗಳಿಗೇನೂ ಬರವಿರಲಿಲ್ಲ. ಒಮ್ಮೆ ನಟ ಶರತ್ ಕುಮಾರ್ ಮತ್ತು ನಗ್ಮಾ ನಡುವೆ ಏನೋ ನಡೀತಿದೆ ಎನ್ನುವ ಗಾಸಿಪ್ ಸದ್ದು ಮಾಡ್ತಿತ್ತು. ಇನ್ನು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಜೊತೆ ನಗ್ಮಾ ಹೆಸರು ಥಳಕು ಹಾಕಿಕೊಂಡಾಗ ಭಾರೀ ಸಂಚಲನವೇ ಉಂಟಾಗಿತ್ತು. ಈ ಎಲ್ಲಾ ಗಾಸಿಪ್‌ಗಳನ್ನು ನಗ್ಮಾ ನಿರಾಕರಿಸುತ್ತಲೇ ಬಂದಿದ್ದರು.

ಆದರೆ, ಇದೆಲ್ಲಕ್ಕಿಂತ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದು ಮಾತ್ರ ನಗ್ಮಾ ಅಂಡರ್ವರ್ಲ್ಡ್ ಕನೆಕ್ಷನ್. 2005ರಲ್ಲಿ ಹಬ್ಬಿದ್ದ ಈ ಸುದ್ದಿಗೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ ಅನ್ನೋದೇ ಸೋಜಿಗ. ಮುಂಬೈ ಭೂಗತ ಲೋಕದ ಪ್ರಮುಖ ವ್ಯಕ್ತಿಯೊಬ್ಬರೊಂದಿಗೆ ನಗ್ಮಾ ಅನೇಕ ವರ್ಷಗಳ ಕಾಲ ಗೆಳೆತನ ಹೊಂದಿದ್ರು ಎನ್ನುವ ಸುದ್ದಿ ಬಹುಕಾಲದವರಗೆ ಓಡಾಡ್ತಿತ್ತು.
'ರವಿಮಾಮ'ನ ಅರಗಿಣಿ ನಗ್ಮಾ ಜೊತೆ ಅಫೇರ್:"ಹೆಂಡ್ತಿ ಅಂದ್ರೆ ಭಯ.. ಆಕೆಯ ಕಾಲಿಗೂ ಬೀಳ್ತೀನಿ"- ನಟ ರವಿಕಿಶನ್
ನಗ್ಮಾ ಅಭಿಮಾನಿಗಳೇ ಹೇಳೋ ಪ್ರಕಾರ ಇವತ್ತಿನವರಗೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕೇ ಇಲ್ಲ. 2005ನೇ ಇಸವಿಯಲ್ಲಿ ಭೂಗತಲೋಕದೊಂದಿಗೆ ಸಂಬಂಧ ಇರುವ ಅನುಮಾನದ ಮೇಲೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಒಬ್ಬ ಆರೋಪಿ ಜಮಿರುದ್ದಿನ್ ಅನ್ಸಾರಿ ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಆಜ್ಞೆಯ ಮೇರೆಗೆ ತಾನು ನಟಿ ನಗ್ಮಾ ಫ್ಲಾಟ್‌ಗೆ ತೆರಳಿ ಅವರಿಗೆ 10 ಲಕ್ಷ ರೂಪಾಯಿ ತಲುಪಿಸಿದ್ದೆ ಎಂದಿದ್ದ. ಈ ಹಣ ಹವಾಲಾದಿಂದ ಪಡೆದಿದ್ದು ಎಂದೂ ಹೇಳಿದ್ದ.

ಈ ಎಲ್ಲಾ ವಿಚಾರ ದೊಡ್ಡಮಟ್ಟದ ಸುದ್ದಿಯಾಗುವ ವೇಳೆಗೆ ನಗ್ಮಾ ಕಾಂಗ್ರೆಸ್ ಪಾರ್ಟಿ ಸೇರಿಕೊಂಡು ಜಾರ್ಖಂಡ್‌ನಲ್ಲಿ ಪಾರ್ಟಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಗುಸುಗುಸು ಎಂದು ಶುರುವಾದ ಈ ಸುದ್ದಿ ಭಾರಿ ವೇಗ ಪಡೆದುಕೊಳ್ತಿದ್ದಂತೆ ಪ್ರಚಾರದಿಂದ ನಗ್ಮಾರನ್ನು ಹೊರಗಿಡಲಾಯ್ತು. ಆದರೆ, ಈ ಎಲ್ಲಾ ಆರೋಪಗಳು ಮತ್ತು ಮಾಹಿತಿ ಸುಳ್ಳು ಎಂದೇ ನಗ್ಮಾ ಹೇಳುತ್ತಾ ಬಂದಿದ್ದಾರೆ. ತನ್ನ ಹೆಸರು ಕೆಡಿಸಲು ಕಾಣದ ಕೈಗಳು ಮಾಡುತ್ತಿರುವ ಪಿತೂರಿ ಇದು ಎಂದೂ ಆರೋಪಿಸಿದ್ದರು.
ಅಂದ್ಹಾಗೆ, ನಗ್ಮಾ ಮೂಲ ಹೆಸರು ಮಮ್ತಾಜ್. ಮುಂದಿನ ದಿನಗಳಲ್ಲಿ ಜಮಿರುದ್ದಿನ್ ಅನ್ಸಾರಿ ವಕೀಲರು ನಗ್ಮಾ ಹೆಸರನ್ನು ಹಿಂಪಡೆಯಲಾಗಿದೆ ಎಂದು ಹೇಳಿಕೆ ನೀಡಿದ್ದರು. ಅದರ ನಂತರ ನಗ್ಮಾ ಎಲ್ಲಾ ಸುದ್ದಿಗದ್ದಲದಿಂದ ಬಹಳ ದೂರವೇ ಉಳಿದುಬಿಟ್ಟರು. 49 ವರ್ಷದ ಈ ನಟಿ ಇಂದಿಗೂ ಮದುವೆಯಾಗಿಲ್ಲ. ಆದರೆ, ಈ ವಿಚಾರದ ಬಗ್ಗೆ ನಗ್ಮಾ ಮುಕ್ತವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
"ನನಗೆ ಒಂಟಿಯಾಗಿಯೇ ಇರಲು ಇಷ್ಟವಿಲ್ಲ. ನನಗೂ ಗಂಡ-ಮಕ್ಕಳು ಎಲ್ಲಾ ಬೇಕು. ಆ ರೀತಿಯ ಬದುಕು ನನ್ನದಾಗುತ್ತಾ ನೋಡ್ಬೇಕು. ನನಗೆ ಮದುವೆಯಾಗಿಲ್ಲ ಅನ್ನೋದು ನಿಜವಾದ್ರೂ ನನ್ನ ಬದುಕಿನಲ್ಲಿ ಖುಷಿಗೇನೂ ಕೊರತೆಯಿಲ್ಲ" ಎಂದಿದ್ದರು ನಗ್ಮಾ. ಕ್ರಿಕೆಟಿಗ ಸೌರವ್ ಗಂಗೂಲಿ ಹೆಸರಿನ ಜೊತೆ ನಗ್ಮಾ ಹೆಸರು ಸೇರಿ ಸುದ್ದಿಯಾದಾಗ ಗಂಗೂಲಿಗೆ ಮದುವೆಯಾಗಿತ್ತು. ಹಾಗಾಗಿ ಇದು ನಗ್ಮಾ ಜೊತೆಗೆ ಅನೈತಿಕ ಸಂಬಂಧ ಎಂದು ಭಾರೀ ಚರ್ಚೆಯಾಗಿತ್ತು. ನಂತರ ಕ್ರಮೇಣವಾಗಿ ಎಲ್ಲಾ ಸುದ್ದಿಗಳು ಮೌನವಾದವು. ಈ ಸುಂದರ ನಟಿ ಈಗಲೂ ಒಂಟಿಯಾಗಿಯೇ ಜೀವನ ಕಳೆಯುತ್ತಿರುವುದು ಮಾತ್ರ ಆಕೆಯ ಅಭಿಮಾನಿಗಳಿಗೆ ಬೇಸರ.


Click it and Unblock the Notifications











