ಕಮಲ್ ಹಾಸನ್, ಸಲ್ಮಾನ್ 'ಬಿಗ್‌ಬಾಸ್' ಶೋನಿಂದ ಹಿಂದೆ ಸರಿದಿದ್ದೇಕೆ? ಕಿಚ್ಚನ ಬಗ್ಗೆ ಏನಿದು ಸುದ್ದಿ?
ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಬೇರೆ ಬೇರೆ ಭಾಷೆಯಲ್ಲಿ ಈ ಶೋ ಒಂದೊಂದು ಹಂತಕ್ಕೆ ಬಂದು ನಿಂತಿದೆ. ಕೆಲವು ತಿಂಗಳ ಹಿಂದಷ್ಟೇ ಕನ್ನಡದ ಬಿಗ್‌ಬಾಸ್ 10ನೇ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹಾಗೇ ತಮಿಳಿನಲ್ಲೂ ಬಿಗ್‌ಬಾಸ್ ಏಳನೇ ಸೀಸನ್ ಮುಗಿದಿದ್ದು, ಎಂಟನೇ ಸೀಸನ್‌ಗೆ ರೆಡಿಯಾಗಿದೆ. ಇತ್ತೀಚೆಗಷ್ಟೇ ಬಿಗ್‌ಬಾಸ್ ಹಿಂದಿ ಓಟಿಟಿಯ ಮೂರನೇ ಸೀಸನ್ ಕೂಡ ಮುಗಿದಿದೆ.
ಕೆಲವು ಭಾಷೆಗಳಲ್ಲಿ ಬಿಗ್‌ಬಾಸ್ ಮುಗಿದಿದ್ರೆ, ಇನ್ನು ಕೆಲವು ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ ಆಗುತ್ತಿದೆ. ಈ ಗ್ಯಾಪ್‌ನಲ್ಲಿ ಕೆಲವು ಭಾಷೆಯಲ್ಲಿ ನಿರೂಪಕರು ಬದಲಾಗುತ್ತಿದ್ದಾರೆ. ಮತ್ತೆ ಕೆಲವು ಭಾಷೆಯಲ್ಲಿ ಆಗಿದ್ದಾರೆ. ಕನ್ನಡದಲ್ಲೂ ಇಂತಹದ್ದೇ ಒಂದು ರೂಮರ್ ಇದೆ. ಅಷ್ಟಕ್ಕೂ ಹಲವು ವರ್ಷಗಳಿಂದ ಬಿಗ್‌ಬಾಸ್ ನಿರೂಪಣೆ ಮಾಡುತ್ತಾ ಬಂದಿದ್ದ ದಿಗ್ಗಜರು ಈ ಬಾರಿ ಯಾಕೆ ಆಸಕ್ತಿ ತೋರಿಲ್ಲ? ಈ ದಿಗ್ಗಜರು ನಿರೂಪಣೆ ತೊರೆದರೆ ಕಿರುತೆರೆ ವೀಕ್ಷಕರು ಒಪ್ಪುತ್ತಾರೆಯೇ? ಈ ಪ್ರಶ್ನೆಗಳು ಸಹಜವಾಗಿ ಎದ್ದೇಳುತ್ತವೆ.

ಕಮಲ್ ಹಾಸನ್ ಇತ್ತೀಚೆಗೆ ಬಿಗ್‌ಬಾಸ್ ರಿಯಾಲಿಟಿ ಶೋನಿಂದ ಹೊರಬಂದಿರುವುದಾಗಿ ಸಂದೇಶವನ್ನು ರವಾನೆ ಮಾಡಿದ್ದರು. ಈ ಬಾರಿ ತಮಿಳಿನ ಬಿಗ್‌ಬಾಸ್ ನಿರೂಪಣೆಯನ್ನು ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಿನಿಮಾದ ಕೆಲಸ ಹೆಚ್ಚಿರುವುದರಿಂದ ಈ ಬಾರಿ ಬಿಗ್‌ಬಾಸ್ ನಿರೂಪಣೆಯಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿದ್ದಾರೆ.
ಇನ್ನೊಂದು ಕಡೆ ಹಿಂದಿ ಬಿಗ್‌ಬಾಸ್ ಓಟಿಟಿಯ ಮೂರನೇ ಸಂಚಿಕೆಯಿಂದ ಸಲ್ಮಾನ್ ಖಾನ್ ಕೂಡ ಹೊರಬಂದಿದ್ದರು. ಅವರ ಜಾಗದಲ್ಲಿ ಬಾಲಿವುಡ್‌ನ ಮತ್ತೊಬ್ಬ ದಿಗ್ಗಜ ಅನಿಲ್ ಕಪೂರ್ ನಿರೂಪಣೆಯನ್ನು ಮಾಡಿದ್ದರು. ಇತ್ತೀಚೆಗಷ್ಟೇ ಈ ರಿಯಾಲಿಟಿ ಶೋ ಮುಕ್ತಾಯಗೊಂಡಿತ್ತು. ಇದೇ ಗ್ಯಾಪ್‌ನಲ್ಲಿ ಕಿಚ್ಚ ಸುದೀಪ್ ಬದಲು 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ನಿರೂಪಣೆ ಮಾಡುತ್ತಾರೆ ಅನ್ನೋ ಸುದ್ದಿ ದಿಢೀರನೇ ಓಡಾಡುತ್ತಿದೆ.

ಅಷ್ಟಕ್ಕೂ ಇಷ್ಟು ವರ್ಷ ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡಿದ್ದ ದಿಗ್ಗಜರು ಯಾಕೆ ಹಿಂದೆ ಸರಿಯುತ್ತಿದ್ದಾರೆ? ಕಮಲ್ ಹಾಸನ್ ಬಿಗ್ ಬಾಸ್ ಬಿಟ್ಟಿದ್ದಕ್ಕೆ ಕಾರಣ ಸಿನಿಮಾ ಅಲ್ಲ ಬೇರೆನೇ ಇದೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡಿತ್ತು. ಕಳೆದ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ಪ್ರದೀಪ್ ಅಂಥೋನಿಯನ್ನು ಕಮಲ್ ಹಾಸನ್ ಎಲಿಮಿನೇಟ್ ಮಾಡಿದ್ದರು. ಆ ಬಳಿಕ ಕಮಲ್ ಹಾಸನ್‌ರನ್ನು ನೆಗೆಟಿವ್ ಆಗಿ ಟ್ರೋಲ್ ಮಾಡಿದ್ದರು. ನಿರೂಪಕನನ್ನೇ ಬದಲಾಯಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಕಮಲ್ ಹಾಸನ್ ದೂರ ಸರಿಯುತ್ತಿದ್ದಾರೆ ಅಂತ ಕಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ.
ಇನ್ನೊಂದು ಕಡೆ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಈ ಕಾರಣಕ್ಕೆ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಎ ಆರ್ ಮುರುಗದಾಸ್ ನಿರ್ದೇಶನದ 'ಸಿಕಂದರ್' ತಯಾರಿಯಲ್ಲಿ ಇರುವುದರಿಂದ ಬಿಗ್‌ಬಾಸ್ ಓಟಿಟಿ ನಿರೂಪಣೆಯನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿತ್ತು. ಆದರೆ, ಬಿಗ್‌ಬಾಸ್ ಹಿಂದಿ 18 ಸಂಚಿಕೆಯನ್ನು ಅವರೇ ನಿರೂಪಣೆ ಮಾಡುತ್ತಿದ್ದು, ಅದು ಅಕ್ಟೋಬರ್‌ನಲ್ಲಿ ಆರಂಭ ಆಗಲಿದೆ ಅಂತ ವರದಿಯಾಗಿವೆ.
ಹೀಗೆ ಒಬ್ಬೊಬ್ಬರೇ ದಿಗ್ಗಜರು ಬಿಗ್‌ಬಾಸ್ ನಿರೂಪಣೆಯಿಂದ ಹೊರಬರುತ್ತಿರುವಾಗ, ಕಿಚ್ಚ ಸುದೀಪ್ ಹೆಸರು ಹರಿದಾಡಿತ್ತು. ಆದರೆ, ಈ ಸುದ್ದಿಯಲ್ಲಿ ಎಷ್ಟು ಹುರುಳಿದೆ ಅನ್ನೋದಕ್ಕೆ ಮಾಹಿತಿಯಿಲ್ಲ. ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಕನ್ನಡದಲ್ಲಿ ಏನೆಲ್ಲ ಬದಲಾವಣೆಯಾಗುತ್ತೆ ಅನ್ನೋದಕ್ಕೆ ಇನ್ನೊಂದಿಷ್ಟು ದಿನ ಕಾಯಬೇಕಿದೆ.


Click it and Unblock the Notifications











