'ಯಜಮಾನ' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು ಕೋಟಿ? ಖುಷ್ಬೂಗೆ ಕಥೆ ಹೇಳಲು ಹೋಗಿ ರೈಟ್ಸ್ ತಂದಿದ್ಯಾಕೆ?
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ 'ಯಜಮಾನ'. ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್ ಅಭಿಜಿತ್, ಟೆನ್ನಿಸ್ ಕೃಷ್ಣ ನಟಿಸಿದ ಈ ಸಿನಿಮಾ ಸಾರ್ವಕಾಲಿಕ ಹಿಟ್ ಲಿಸ್ಟ್ ಸೇರಿತ್ತು. ವಿಷ್ಣುವರ್ಧನ್ ಕರಿಯರ್‌ನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು. 'ಯಜಮಾನ' ರಿಲೀಸ್ ಆದಾಗ ಕರ್ನಾಟಕದ ಉದ್ದಗಲಕ್ಕೂ ಕ್ರೇಜ್ ಇತ್ತು. ಪ್ರೇಕ್ಷಕರು ಹುಚ್ಚೆದ್ದು ಸಿನಿಮಾ ನೋಡಿದ್ದರು.
'ಯಜಮಾನ' ತಮಿಳು ಸಿನಿಮಾ ರೀಮೆಕ್. ತಮಿಳು ನಟ ವಿಜಯಕಾಂತ್, ಮೀನಾ, ಪ್ರಭುದೇವ ನಟಿಸಿದ 'ವನತೈಪ್ಪೋಲ' ತಮಿಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾ ರೈಟ್ಸ್ ತಂದು ಕನ್ನಡದಲ್ಲಿ ನಿರ್ಮಾಣ ಮಾಡಲಾಗಿತ್ತು. ತಮಿಳಿನ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದಕ್ಕಿಂತ ಕರ್ನಾಟಕದಲ್ಲಿ ಹೆಚ್ಚು ಹಿಟ್ ಆಯ್ತು. ಹಳ್ಳಿ ಜನರಂತೂ ಜನರು ಎತ್ತಿನ ಗಾಡಿಗಳಲ್ಲಿ ಬಂದು ಸಿನಿಮಾ ನೋಡಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಕನ್ನಡ ಚಿತ್ರರಂಗಕ್ಕೆ ಮೆಗಾ ಹಿಟ್ ಕೊಟ್ಟ ಸಿನಿಮಾವನ್ನು ರೆಹಮಾನ್ ನಿರ್ಮಾಣ ಮಾಡಿದ್ದರು. ಇತ್ತೀಚೆಗೆ ಡೈಲಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಕಥೆಗಳನ್ನು ಹಂಚಿಕೊಂಡಿದ್ದಾರೆ. ಖುಷ್ಭೂಗೆ ಕತೆ ಹೇಳುವುದಕ್ಕೆ ಹೋದವರು ಯಜಮಾನ ಮಾಡಿದ್ದೇಗೆ? ರಿಮೇಕ್ ರೈಟ್ಸ್ ಸಿಕ್ಕಿದ್ದೇಗೆ? ಹಾಗೇ ಸಿನಿಮಾದ ಬಜೆಟ್ ಎಷ್ಟು? ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಈ ಎಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.
AI ಬಳಸಿ ಸೃಷ್ಟಿಸಿದ ದೃಶ್ಯದಲ್ಲಿ ವಿಷ್ಣು-ಅಂಬಿ 'ಜೇಮ್ಸ್ ಬಾಂಡ್'; ಹೇಗಿದೆ 'ಏಜೆಂಟ್ ಜಯಸಿಂಹ'?
'ಯಜಮಾನ' ಸಿನಿಮಾ ವಿಷ್ಣುದಾದ ಕರಿಯರ್‌ನಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿತ್ತು. ಅಲ್ಲಿವರೆಗೂ ತೆರೆಕಂಡಿದ್ದ ಸಿನಿಮಾಗಳು ಬೆಂಗಳೂರು ಹಾಗೂ ಮೈಸೂರು ಏರಿಯಾಗಳಲ್ಲಿ ಅತೀ ಹೆಚ್ಚು ದಿನ ಪ್ರದರ್ಶನ ಕಾಣುತ್ತಿದ್ದವು. ಆದರೆ, ಯಜಮಾನ ಸಿನಿಮಾ ಕರ್ನಾಟಕದಾದ್ಯಂತ ಎ, ಬಿ, ಸಿ ಸೆಂಟರ್‌ಗಳಲ್ಲಿ 175ಕ್ಕೂ ಅಧಿಕ ದಿನಗಳು ಪ್ರದರ್ಶನ ಕಂಡಿದ್ದವು ಎನ್ನುತ್ತಾರೆ ರೆಹಮಾನ್.
"ವಿಷ್ಣು ಸರ್ ಸಿನಿಮಾಗಳು 175 ದಿನ ಓಡಿದ್ದವು. ಆದರೆ, ಆ ಸಿನಿಮಾಗಳು ಬೆಂಗಳೂರು ಸೆಂಟರ್, ಮೈಸೂರು ಸೆಂಟರ್‌ಗಳಲ್ಲಿ ಒಂದು ವರ್ಷ, 175 ಡೇಸ್ ಹೀಗಾಗಿವೆ. ಈ ಯಜಮಾನ ಸಿನಿಮಾ ಎಲ್ಲೆಲ್ಲಿ ಸಿನಿಮಾ ಹಾಕಿದ್ದೇವೋ ಅಲ್ಲೆಲ್ಲ 175 ಡೇಸ್ ಓಡಿದೆ. ಯಜಮಾನ ಸಣ್ಣ ಊರಿನಲ್ಲಿ ಹಾಕಿದರೂ 175 ಡೇಸ್. ಹುಬ್ಬಳ್ಳಿಯಲ್ಲಿ ಒಂದು ವರ್ಷ. ಬಳ್ಳಾರಿಯಲ್ಲಿ ಕನ್ನಡ ಹೋಗಲ್ಲ. ಆದರೆ ಅಲ್ಲಿ ಹಾಕಿದರೂ 175 ಡೇಸ್. ಹೀಗಾಗಿದ್ದಕ್ಕೆ ಇತಿಹಾಸ ನಿರ್ಮಿಸಿತ್ತು." ಎನ್ನುತ್ತಾರೆ.

ಇಂದಿನಂತೆ ಆಗ ಟಿಕೆಟ್ ದರ ಇನ್ನೂರು, ಮುನ್ನೂರು, ಐನೂರು ಇರಲಿಲ್ಲ. ಇಪ್ಪತ್ತು, ಮೂವತ್ತು ಬೆಲೆ ಇತ್ತಷ್ಟೆ. ಅಂತಹ ಸಮಯದಲ್ಲೇ 'ಯಜಮಾನ' ಸಿನಿಮಾ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. "ಆಗಿನ ಕಾಲಕ್ಕೆ 20 ರೂ. 30 ರೂ. ಟಿಕೆಟ್ ಬೆಲೆ. ಅದರಲ್ಲೇ ಅಷ್ಟು ದುಡ್ಡು ಬಂತು. ಒಟ್ಟಾರೆ 35 ರಿಂದ 40 ಕೋಟಿ ಮಾಡಿದೆ. ಆಡಿಯೋದಲ್ಲಿಯೇ ಎಂಟು ಕೋಟಿ ಮಾಡಿತ್ತು. ಎಂಟು ಲಕ್ಷಕ್ಕೆ ಕೊಟ್ಟಿದ್ವಿ. ಎಂಟು ಕೋಟಿ ಮಾಡಿದೆ. ನಾವು ಆ ರೇಂಜ್‌ಗೆ ಹಿಟ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ." ಎಂದು ರೆಹಮಾನ್ ಹೇಳಿದ್ದಾರೆ.
ಅಂದ್ಹಾಗೆ ರೆಹಮಾನ್ 'ಉಗಾದಿ' ಅನ್ನೋ ಸಿನಿಮಾ ಮಾಡುವುದಕ್ಕೆ ಹೋಗಿದ್ದರು. ಆ ಸಿನಿಮಾಗೆ ಖುಷ್ಭು ಹಾಕಿಕೊಳ್ಳೋಣ ಅಂತ ವಿಷ್ಣು ಸರ್ ಹೇಳಿದ್ದರು. ಈ ಕಾರಣಕ್ಕೆ ಮದ್ರಾಸ್‌ಗೆ ಕಥೆ ಹೇಳುವುದಕ್ಕೆ ಹೋಗಿದ್ದರು. ಅವರು ನಾಳೆ ಸಂಕ್ರಾಂತಿ ಇದೆ. ಶುಕ್ರವಾರ ಬನ್ನಿ ಅಂದಿದ್ದರು. ಒಂದು ದಿನಕ್ಕೆ ಏನು ವಾಪಸ್ ಬರೋದು ಯಾಕೆ ಅಂತ ಅಲ್ಲೇ ಉಳಿದುಕೊಂಡಿದ್ದರು. ಮಾರನೇ ದಿನ ಹೋಟೆಲ್‌ನಿಂದ ಹೊರ ಬಂದಾಗ ವಿಜಯ್ ಕಾಂತ್ ಸಿನಿಮಾ 'ವನತೈಪ್ಪೋಲ' ರಿಲೀಸ್ ಆಗಿತ್ತು. ಆ ಸಿನಿಮಾದ ಅನೌನ್ಸ್‌ಮೆಂಟ್ ನೋಡಿ ಇದು ಸೂರ್ಯವಂಶ ಕಾಣಿಸಿದ ಹಾಗೆ ಆಗುತ್ತಿದೆ ಎಂದು ಅಲ್ಲೇ ಸಿನಿಮಾ ನೋಡಿದ್ದರು. ಅಲ್ಲೇ ಉಗಾದಿ ಕ್ಯಾನ್ಸಲ್ ಮಾಡಿ 'ಯಜಮಾನ' ಮಾಡೋದು ಮಾಡೋದು ಅಂತ ಫಿಕ್ಸ್ ಆಗಿದ್ದರು. ತಕ್ಷಣವೇ ತಮಿಳು ನಿರ್ಮಾಪಕರಿಗೆ ಹೋಗಿ ರೀಮೆಕ್ ರೈಟ್ಸ್ ಕೊಡುವಂತೆ ಮನವಿ ಮಾಡಿದ್ದರು.
ತಮಿಳು ನಿರ್ಮಾಪಕರ ಬಳಿ "ನನ್ನದೊಂದು ಸ್ವಾರ್ಥವಿದೆ. ನಾನೊಂದು ಸಿನಿಮಾ ಮಾಡಬೇಕು. ವಿಷ್ಣುವರ್ಧನ್ ಡೇಟ್ ಇದೆ ಅಂದೆ. ನಿಮಗೆ ಕೊಡೋದು ಕನ್ಫರ್ಮ್. ಎರಡು ವಾರ ಬಿಟ್ಟು ನೋಡೋಣ ಅಂದರು. ಎರಡು ವಾರ ಬಿಟ್ಟು ಹೋಗುವಷ್ಟರಲ್ಲಿ ನನ್ನ ಗಾಂಧಿನಗರದ ಮಹಾನುಭಾವರು ಹೋಗಿದ್ದರು. ರಾಕ್‌ಲೈನ್ ವೆಂಕಟೇಶ್, ಕೆಸಿಎನ್ ಚಂದ್ರು, ಸಾರಾ ಗೋವಿಂದು, ಕುಮಾರಸ್ವಾಮಿ ಬ್ಲಾಂಕ್ ಚೆಕ್ ಕೊಟ್ಟಿದ್ದರು. ಇಷ್ಟು ಜನ ಹೋದರೂ ಯಾರಿಗೂ ಅವರು ಒಪ್ಪಿರಲಿಲ್ಲ." ಎನ್ನುತ್ತಾರೆ.
ಇಷ್ಟು ದೊಡ್ಡ ಹಿಟ್ ಆದರೂ, ಯಜಮಾನ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭ ಆಗಲಿಲ್ಲ. ಯಾಕಂದ್ರೆ, ಸಿನಿಮಾವನ್ನು ಒಂದು 1.25 ಕೋಟಿ ಲಾಭ ಇಟ್ಟುಕೊಂಡು ಮಾರಿದ್ದರು. "2 ಕೋಟಿ 25 ಲಕ್ಷ ಬಜೆಟ್ ಆಯ್ತು. ನಮಗೆ ಮೂರುವರೆ ಕೋಟಿಗೆ ಆಫರ್ ಬಂತು. ಅಷ್ಟೇ ಸಾಕು ಲಾಭ ಅಂತ ಮಾರಿಬಿಟ್ಟಿದ್ವಿ. ಹಿಂದೆ ಜನ್ಮದಾತ ಅಂತ ಮಾಡಿದ್ವಿ. 50 ರಿಂದ 60 ಲಕ್ಷ ಕಳೆದಿದ್ವಿ. ಆ ಭಯ ಬೇರೆ ಇತ್ತು. ಸಾಕು ಸಹವಾಸ ಅಂತ ಮಾರಿಬಿಟ್ಟೆ" ಎಂದು ಹೇಳಿದ್ದಾರೆ.


Click it and Unblock the Notifications











