Yash 19: ನಿರೀಕ್ಷೆಗಿಂತಲೂ ಮುನ್ನವೇ 'ಯಶ್ 19' ಟೈಟಲ್-ಟೀಸರ್ ? 4 ದಿನಗಳಲ್ಲಿ ಚಮತ್ಕಾರ ನಡೆಯುತ್ತಾ?
ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಕಮ್ಮಿಯಾಗಿಲ್ಲ. 'ಕೆಜಿಎಫ್ ಚಾಪ್ಟರ್ 2' ಬಳಿಕ ಯಶ್ ಹೊಸ ಸಿನಿಮಾದ ಬಗ್ಗೆ ಚಿಕ್ಕದೊಂದು ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಡೈರೆಕ್ಟರ್, ಸ್ಟೋರಿ, ನಿರ್ಮಾಣ ಸಂಸ್ಥೆಯಿಂದ ಹಿಡಿದು ಪ್ರತಿಯೊಂದು ರಹಸ್ಯವಾಗಿಯೇ ಇವೆ.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತ್ರ ಸುಮ್ಮನೆ ಕೂತಿಲ್ಲ. ಇಲ್ಲಿಂದ ದಿನಕ್ಕೊಂದು ಸುದ್ದಿ ಹೊರಬರುತ್ತಲೇ ಇವೆ. ಯಶ್ 19ನೇ ಸಿನಿಮಾ ಪ್ರಿ ಪ್ರೊಡಕ್ಷನ್ ಸ್ಟೇಜ್‌ನಲ್ಲಿದೆ ಅನ್ನೋದು ಗೊತ್ತೇ ಇದೆ. ಎಲ್ಲವೂ ರಹಸ್ಯವಾಗಿಯೇ ನಡೆಯುತ್ತಿದೆ ಅನ್ನೋದೂ ಗೊತ್ತಿದೆ. ಆದರೂ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಸಿಕ್ಕಿಲ್ಲ.

ಆದ್ರೀಗ ಯಶ್ 19 ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಯಶ್ ತಮ್ಮ ಮುಂದಿನ ಸಿನಿಮಾದ ಘೋಷಣೆಯನ್ನು ಟೈಟಲ್ ಹಾಗೂ ಟೀಸರ್‌ನೊಂದಿಗೆ ಅನೌನ್ಸ್ ಮಾಡಲಿದ್ದಾರೆಂದು ಸುದ್ದಿಯಾಗಿದೆ. ಅದೂ, ನಿರೀಕ್ಷೆ ಮಾಡಿದ್ದಕ್ಕಿಂತಲೂ ಮುನ್ನವೇ ಅನೌನ್ಸ್ ಆಗಲಿದೆ ಅಂತಾನೂ ಹೇಳಲಾಗುತ್ತಿದೆ.
'ಯಶ್ 19' ಸಿನಿಪ್ರಿಯರಿಗೆ ಗೊಂದಲದ ಗೂಡಾಗಿರೋದು ನಿಜ. 'ಕೆಜಿಎಫ್ 2' ಬಳಿಕ ಮುಂದಿನ ಸಿನಿಮಾ ಅನೌನ್ಸ್ ಮಾಡುವುದಕ್ಕೆ ಯಶ್ ಇಷ್ಟೊಂದು ಸಮಯ ತೆಗೆದುಕೊಂಡಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಯಶ್ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಸ್ಕ್ರಿಪ್ಟ್ ಪೂರ್ಣ ಮುಗಿಯದ ಹೊರತು 19ನೇ ಸಿನಿಮಾ ಘೋಷಣೆ ಮಾಡದೇ ಇರಲು ತೀರ್ಮಾನಿಸಿದ್ದರು. ಅದರಂತೆಯೇ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.
19ನೇ ಸಿನಿಮಾ ಅನೌನ್ಸ್ ಮಾಡಲು ಕೊನೆಗೂ ಯಶ್‌ಗೆ ಮುಹೂರ್ತ ಸಿಕ್ಕಿದೆ ಎನ್ನಲಾಗಿದೆ. ಇಷ್ಟು ದಿನ ಕಾಯಿಸಿದ್ದಕ್ಕೆ ಯಶ್ ಕೇವಲ ಸಿನಿಮಾವನ್ನಷ್ಟೇ ಅನೌನ್ಸ್ ಮಾಡುತ್ತಿಲ್ಲ. ಟೈಟಲ್ ಜೊತೆ ತಮ್ಮ ಫ್ಯಾನ್ಸ್‌ಗೆ ಟೀಸರ್ ಅನ್ನೂ ರಿಲೀಸ್ ಮಾಡಿ ಸರ್ಪ್ರೈಸ್ ಕೊಡುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಅಲ್ಲದೆ ಅಂದುಕೊಂಡಿದ್ದಕ್ಕೆ ಬೇಗನೇ ಸಿನಿಮಾದ ಟೈಟಲ್ ಹಾಗೂ ಟೀಸರ್ ರಿಲೀಸ್ ಆಗುತ್ತೆ ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ಎಕ್ಸ್ (ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ.
ಇದರ ಜೊತೆಗೆ ತೆಲುಗು ಮಾಧ್ಯಮಗಳು ಕೂಡ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾದ ಬಗ್ಗೆ ವರದಿ ಮಾಡಿವೆ. ಯಶ್ ತಮ್ಮ 19ನೇ ಸಿನಿಮಾವನ್ನು ಕನ್ನಡ ರಾಜ್ಯೋತ್ಸವಕ್ಕೆ ಅನೌನ್ಸ್ ಮಾಡಲಿದ್ದಾರೆ. ಇಂತಹದ್ದೊಂದು ಸುದ್ದಿ ಹರಿದಾಡುತ್ತಿರುವುದಾಗಿ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲವಾದರೂ, ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳಿನಲ್ಲೇ ಯಶ್ 19 ಅನೌನ್ಸ್ ಆಗಬಹುದು ಎಂದು ಹೇಳಲಾಗುತ್ತಿದೆ.
ಈಗಾಗಲೇ ಯಶ್ 19ನೇ ಸಿನಿಮಾಗೆ ನಿರ್ದೇಶಕರು ಯಾರು? ಅನ್ನೋದನ್ನು ಸೋಶಿಯಲ್ ಮೀಡಿಯಾದಲ್ಲೇ ರಿವೀಲ್ ಆಗಿತ್ತು. ರಾಷ್ಟ್ರ ಪ್ರಶಸ್ತಿ ಗೆದ್ದ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಗುಲ್ಲೆದ್ದಿತ್ತು. ಸಿನಿಮಾ ಮಂದಿ ಕೂಡ ಅವರೇ ಬಹುತೇಕ ಕನ್ಫರ್ಮ್ ಎಂದು ಹೇಳುತ್ತಿದ್ದಾರೆ. ಹೀಗಾಗಿ ಯಶ್ 19ನೇ ಸಿನಿಮಾ ಬಗ್ಗೆ ಶೀಘ್ರದಲ್ಲೇ ಸೆಟ್ಟೇರಬಹುದು ಅನ್ನೋ ನಿರೀಕ್ಷೆಯಿದೆ.
ಇನ್ನೊಂದು ಕಡೆ ಯಶ್ 19 ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿರೋ ಬಗ್ಗೆ ವರದಿಯಾಗಿದೆ. ಒಂದೆರಡು ಬಾರಿ ಯಶ್ ಕೆವಿಎನ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ವರದಿಗಳಾಗಿದ್ದವು. ಅಲ್ಲದೆ ಕೆಲವು ದಿನಗಳ ಹಿಂದಷ್ಟೇ ಯಶ್ ಬಾಲಿವುಡ್‌ನ ಮತ್ತೊಂದು 'ರಾಮಾಯಣ'ದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆಂಬ ಸುದ್ದಿ ಹಬ್ಬಿದೆ.


Click it and Unblock the Notifications











