'ಜೈಲರ್' ಬಳಿಕ ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ? ಫೇವರಿಟ್ ಸ್ಟಾರ್ ಕಮಲ್ ಹಾಸನ್ ಜೊತೆಗೆ ಸೆಂಚುರಿ ಸ್ಟಾರ್ ?
ಬಹಳ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡೇ ಇರ್ಲಿಲ್ಲ. ಶಿವಣ್ಣ ಮಾತ್ರ ಅಲ್ಲ, ಡಾ.ರಾಜ್‌ಕುಮಾರ್ ಕುಟುಂಬದ ಯಾರೂ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸಿದ್ದು ವಿರಳ. ಶಿವಣ್ಣ ಮೊದಲ ಬಾರಿಗೆ ಬಾಲಕೃಷ್ಣ ಜೊತೆ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಆದರೆ, ಮೊದಲ ಸಲ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಒಂದು ಅತಿಥಿ ಪಾತ್ರ ಮಾಡಿದ್ರು. ಆ ಪಾತ್ರ ಅದೆಷ್ಟು ಮಾಸ್ ಆಗಿತ್ತು. ಅದ್ಭುತವಾಗಿತ್ತು ಅಂದ್ರೆ ಸಿನಿಮಾ ನೋಡಿದವರೆಲ್ಲರೂ ಶಿವಣ್ಣ ಮಾಡಿದ ಕೆಲವೇ ನಿಮಿಷಗಳ ಪಾತ್ರವನ್ನು ನೋಡಿ ಮೆಚ್ಚುಗೆ ಸೂಚಿಸಿದ್ರು. ಶಿವಣ್ಣನ ನಟನೆ, ಅವರ ಸ್ಟೈಲ್‌ಗೆ ಸಿನಿಪ್ರಿಯರು ಫಿದಾ ಆಗಿದ್ದರು.

ಈಗ ತಮಿಳು ಚಿತ್ರರಂಗದಿಂದ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದು ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಬಗೆಗಿನ ಸುದ್ದಿ. ಕಳೆದ ವರ್ಷ ಬಿಡುಗಡೆಯಾಗಿದ್ದ ಲೋಕೇಶ್ ಕನಕರಾಜ್ ನಿರ್ದೇಶನದ 'ವಿಕ್ರಂ' ಕಮಲ್‌ಗೆ ದೊಡ್ಡ ಮಟ್ಟಿಗೆ ಸಕ್ಸಸ್ ತಂದು ಕೊಟ್ಟಿತ್ತು. ಆದರೆ, ವಿಕ್ರಂ ಕೇವಲ ಕಮಲ್ ಹಾಗೂ ಲೋಕೇಶ್ ಕನಕರಾಜ್ ಸಿನಿಮಾ ಆಗಿರಲಿಲ್ಲ. ಅದೊಂದು ಬಹುತಾರಾಗಣದ ಸಿನಿಮಾವಾಗಿತ್ತು. ಫಾಹದ್ ಫಸಿಲ್, ವಿಜಯ್ ಸೇತುಪತಿ, ಕಾರ್ತಿ ಸೇರಿದಂತೆ ದೊಡ್ಡ ಸ್ಟಾರ್‌ಗಳ ದಂಡೇ ಇತ್ತು.
ಲೋಕೇಶ್ ಕನಗರಾಜ್ ಸಿನಿಮಾ ಮೂಲಕ ಹೊಸ ತಂತ್ರವನ್ನು ಕಂಡುಕೊಂಡಿರೋ ಕಮಲ್ ಹಾಸನ್ ಪರಭಾಷೆಯ ನಟರನ್ನು ತಮ್ಮ ಸಿನಿಮಾ ಕಡೆಗೆ ಸೆಳೆಯುತ್ತಿದ್ದಾರೆ. ಕಮಲ್ ಹಾಸನ್ ತಮ್ಮ 233ನೇ ಸಿನಿಮಾದಲ್ಲಿ ನಟಿಸುವಂತೆ ಕನ್ನಡದ ನಟ ಶಿವಣ್ಣನಿಗೆ ಆಹ್ವಾನ ನೀಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ತಮಿಳು ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.
ಕಮಲ್ ಹಾಸನ್ 233ನೇ ಸಿನಿಮಾವನ್ನು ಎಚ್.ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕನ್ನಡಿಗರಿಗೆ ಮತ್ತೊಂದು ಸರ್ಪ್ರೈಸ್ ಕೊಡಲಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್‌ಗೆ ಶಿವಣ್ಣ ಸಾಥ್ ಕೊಡುತ್ತಿದ್ದಾರೆ ಅನ್ನೋ ಸುದ್ದಿ ತಮಿಳು ಚಿತ್ರರಂಗದಲ್ಲಿ ಓಡಾಡ್ತಿದೆ. ಮೂಲಗಳ ಪ್ರಕಾರ ಶಿವರಾಜ್‌ಕುಮಾರ್ ಉಳಗನಾಯಗನ್ ಕಮಲ್ ಜೊತೆ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.

ರಜನಿಕಾಂತ್ ನಂತರ ಕಮಲ್ ಹಾಸನ್ ಜೊತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡ್ತಿದ್ದಾರಂತೆ ಅನ್ನೋ ಸುದ್ದಿ ತಮಿಳುನಾಡು ಗಡಿ ದಾಟಿ ಕರ್ನಾಟಕಕ್ಕೂ ಬಂದಿದೆ. ಇದರ ಬಗ್ಗೆ ಕಮಲ್ ಹಾಸನ್ ಆಗಲಿ, ಶಿವಣ್ಣ ಆಗಲಿ, ಚಿತ್ರತಂಡವಾಗಲಿ ಮಾಹಿತಿ ಶೇರ್ ಮಾಡಿಲ್ಲ.
ಆದರೆ, ಶಿವಣ್ಣ ಸಖತ್ ಪವರ್‌ಫುಲ್ ಕ್ಯಾರೆಕ್ಟರ್ ಮಾಡ್ತಿದ್ದಾರೆ ಅಂತ ಎಲ್ಲಾ ಕಡೆ ಸುದ್ದಿಯಾಗ್ತಿದೆ. ಶಿವಣ್ಣನ ಅಭಿಮಾನಿಗಳು ಕೂಡಾ ಈ ಸುದ್ದಿಯನ್ನು ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಇನ್ನೇನಿದ್ರೂ ಈ ಬಗ್ಗೆ ಸಂಬಂಧಪಟ್ಟವ್ರು ಕ್ಲಾರಿಟಿ ಕೊಡ್ಬೇಕಷ್ಟೇ. ಆದರೆ, ಈ ಹಿಂದೆ ಸಂದರ್ಶನವೊಂದರಲ್ಲಿ ಶಿವಣ್ಣ ತಮಿಳಿನ ಮೂರು ಸಿನಿಮಾಗಳಿಗೆ ಆಫರ್ ಬಂದಿದೆ ಎಂದು ಹೇಳಿದ್ದರು.


Click it and Unblock the Notifications











