ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ವಿಜಯಲಕ್ಷ್ಮಿ ದರ್ಶನ್ ಭೇಟಿ; ದರ್ಶನ್ ನೆನೆದ ಫ್ಯಾನ್ಸ್
ನಾಡಿನೆಲ್ಲೆಡೆ ಮೊದಲ ಆಷಾಢ ಶುಕ್ರವಾರ(ಜುಲೈ 17) ಸಂಭ್ರಮ ಮನೆ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ 4 ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯುತ್ತಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಚಾಮುಂಡಿ ತಾಯಿ ದರ್ಶನ ಪಡೆದು ಸಂಕಷ್ಟ ಪರಿಹರಿಸುವಂತೆ ಬೇಡಿಕೊಂಡರು.
ಸೋದರಳಿಯ ಚಂದು ಜೊತೆ ವಿಜಯಲಕ್ಷ್ಮಿ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಪತಿ ದರ್ಶನ್ ಹಾಗೂ ಮಗ ವಿನೀಶ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇತ್ತೀಚೆಗೆ ಪ್ರತಿ ವರ್ಷ ದರ್ಶನ್ ಆಷಾಢ ಶುಕ್ರವಾರ ಸಮಯದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. 2024ರಲ್ಲಿ ಅದು ಸಾಧ್ಯವಾಗಿರಲಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ಕಳೆದ ವರ್ಷ ಕೂಡ ಪತ್ನಿ ಹಾಗೂ ಸಹೋದರ ದಿನಕರ್ ಜೊತೆ ಆಷಾಢ ಶುಕ್ರವಾರದಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. 11 ತಿಂಗಳಿಂದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ವರ್ಷವೂ ಆಷಾಢ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಲು ಸಾಧ್ಯವಾಗದಂತಾಗಿದೆ.

ದರ್ಶನ್ ಎಲ್ಲೇ ಹೋದರು ಬಂದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಚಾಮುಂಡಿ ಬೆಟ್ಟದಲ್ಲಿ ದರ್ಶನ್ ದೇವರ ದರ್ಶನಕ್ಕೆ ಹೋದಾಗಲೂ ನೂಕು ನುಗ್ಗಲು ಉಂಟಾಗುತ್ತಿತ್ತು. ದೇವಸ್ಥಾನ ಎನ್ನುವುದನ್ನು ನೋಡದೇ ಅಭಿಮಾನಿಗಳು 'ಡಿ ಬಾಸ್' ಎಂದ ಜೈಕಾರ ಹಾಕುತ್ತಿದ್ದರ. ಇಂದು ವಿಜಯಲಕ್ಷ್ಮಿ ದರ್ಶನ್ ಮಾತ್ರ ಬೆಟ್ಟಕ್ಕೆ ಬಂದಿರುವುದು ಗೊತ್ತಾಗಿ ಅಭಿಮಾನಿಗಳು ದರ್ಶನ್ ನೆನಪು ಮಾಡಿಕೊಳ್ಳುತ್ತಿದ್ದಾರೆ.
ವಿಜಯಲಕ್ಷ್ಮಿ ಸ್ಪೆಷಲ್ ಪೋಸ್ಟ್
ನಿನ್ನೆಯಷ್ಟೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಫೋಟೊ ಹಂಚಿಕೊಂಡಿದ್ದರು. ದರ್ಶನ್ ಜೊತೆಗಿನ AI ಜನರೇಟೆಡ್ ಇಮೇಜ್ ಪೋಸ್ಟ್ ಮಾಡಿ "ನಗುತ್ತಿರುವ ಮುಖದ ಹಿಂದಿನ ನೀವು, ಭಗವಂತನಿಗೆ ಮಾತ್ರ ಗೊತ್ತು" ಎಂದು ಬರೆದುಕೊಂಡಿದ್ದರು. ಅಭಿಮಾನಿಗಳು ಈ ಫೋಟೊ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಸಂಕಷ್ಟ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸದ್ಯಕ್ಕೆ ಸಿಗುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಪ್ರಕರಣದ ಟ್ರಯಲ್ ನಡೆಸಿದಿ ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ವರ್ಷದ ಬಳಿಕ ಅರ್ಜಿ ಸಲ್ಲಿಸಿದರೆ ಜಾಮೀನು ಕೊಡಬೇಕೊ ಬೇಡವೋ ಎಂದು ನಿರ್ಧರಿಸುವುದಾಗಿ ಸುಪ್ರೀಂ ಹೇಳಿದೆ. ಹಾಗಾಗಿ ಇನ್ನೊಂದು ವರ್ಷ ದರ್ಶನ್ ಸೇರಿದಂತೆ ಪ್ರಕರಣದ ಆರೋಪಿಗಳು ಜೈಲಿನಲ್ಲೇ ಇರುವಂತಾಗಿದೆ.
ಸಾಕ್ಷಿಗೆ ಬೆದರಿಕೆ ಕೇಸ್
ಪ್ರಕರಣದ ಟ್ರಯಲ್ ನಡುವೆ ಪ್ರಮುಖ ಸಾಕ್ಷಿಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಪುನೀತ್, ವೇಣು ಹಾಗೂ ಸುಹಾಸ್ ಎಂಬ ಮೂವರು ದರ್ಶನ್ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬೆದರಿಕೆ ಪ್ರಕರಣದ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆ ತನಿಖೆ ಮುಂದುವರೆದಿದೆ.
ಓಟಿಟಿಯಲ್ಲಿ 'ಡೆವಿಲ್'
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ತೆರೆಕಂಡು 8 ತಿಂಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಡಿಸೆಂಬರ್ 11ರಂದು ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಬಹಳ ತಡವಾಗಿ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪ್ರಕಾಶ್ ನಿರ್ಮಿಸಿ ನಿರ್ದೇಶನದ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications

