"ಈ ಪ್ರಕೃತಿಯಲ್ಲಿ ಗಂಡಸರು ಇಲ್ಲಾ ಅಂದರೆ ಹೆಂಗಸರು ಇರೋದಕ್ಕೆ ಸಾಧ್ಯವೇ ಇಲ್ಲ"; ಭಾವನಾ ಹೇಳಿಕೆಗೆ ಯಮುನಾ ತಿರುಗೇಟು
ಕನ್ನಡ ಚಿತ್ರರಂಗದ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ತಾಯಿಯಾಗಿದ್ದಾರೆ. ಮದುವೆಯಾಗದೇ ಮಗುವನ್ನು ಪಡೆಯಲು ಮುಂದಾಗಿರುವ ಭಾವನಾ ನಿರ್ಧಾರಕ್ಕೆ ಬಹುತೇಕ ಮಂದಿ ಗೌರವ ನೀಡಿದ್ದಾರೆ. ಆದರೆ, ಈ ವೇಳೆ ಭಾವನಾ ಕೊಟ್ಟಿರುವ ಕೆಲವು ಹೇಳಿಕೆಗಳನ್ನು ಖಂಡಿಸುತ್ತಲೂ ಇದ್ದಾರೆ. ಭಾವನಾ ಐವಿಎಫ್ ಮೂಲಕ ತಾಯಿಯಾಗುವ ಬಗ್ಗೆ ಸಂದೇಶ ನೀಡಿದ್ದೇನೋ ಸರಿ. ಈ ಭರಾಟೆಯಲ್ಲಿ ಕೆಲವು ಬೇಡದೇ ಇರುವ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಅದು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.
ಭಾವನಾ ರಾಮಣ್ಣ ಹಲವು ಮಾಧ್ಯಮಗಳಿಗೆ ಸಂದರ್ಶನವನ್ನು ನೀಡಿದ್ದರು. ಇದರಲ್ಲಿ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಅದರಲ್ಲಿ ನಟಿ ಹರಿಪ್ರಿಯ ವಿಷಯ ಕೂಡ ಒಂದು. ಭಾವನಾ ಅವರ ಉದ್ದೇಶ ಏನಾಗಿತ್ತು ಅಂದರೆ, ಮದುವೆ ಬಳಿಕ ನಟಿಯರು ಚಿತ್ರರಂಗದಿಂದಲೇ ದೂರವಾಗಿತ್ತಾರೆ. ಗಂಡ ನನ್ನ ಪತ್ನಿ ಒಬ್ಬ ಕಲಾವಿದೆ ಎನ್ನುವುದನ್ನು ಮರೆತು ಬಿಡುತ್ತಾನೆ. ಹೀಗಾಗಿ ಅವರಿಗೆ ಮದುವೆ ನಂತರ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿಯರು ಚಿತ್ರರಂಗವನ್ನು ತೊರೆಯುತ್ತಿದ್ದಾರೆ ಎಂಬುದು ಅವರು ಮಾತು ಅರ್ಥವಾಗಿತ್ತು.

ಹಾಗೆಯೇ ಚಿತ್ರರಂಗದಲ್ಲಿ ಕೆಲಸ ಮಾಡುವ ನಟಿಯರಿಗೆ ಎಲ್ಲಾ ಕ್ಷೇತ್ರದವರೊಂದಿಗೆ ಬಾಂಧವ್ಯ ಇರುತ್ತೆ. ಹೆಸರು, ಹಣ, ಗೌರವವನ್ನು ನೋಡಿದ್ದರಿಂದ ಸಾರ್ವಜನಿಕವಾಗಿ ಆತ್ಮೀಯವಾಗಿ ಮಾತಾಡುತ್ತೇವೆ. ಕೆಲವೊಂದು ದೃಶ್ಯಗಳಲ್ಲಿ ಅಂಗಾಂಗಗಳ ಪ್ರದರ್ಶನ ಆಗುವಂತಹ ಬಟ್ಟೆ ಹಾಕಿರುತ್ತೇವೆ. ಆದರೆ, ಮದುವೆ ಆದ ಬಳಿಕ ಗಂಡನಿಗೆ ಅದು ಮರೆತು ಹೋಗುತ್ತೆ ಎಂದಿದ್ದರು. ಈ ವೇಳೆ ನಟಿಯರು ಮದುವೆ ಬಳಿಕ ಕಣ್ಮರೆಯಾಗುವ ವಿಷಯ ಮಾತಾಡುವಾಗ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅವರನ್ನು ಉದಾಹರಣೆಯಾಗಿ ನೀಡಿದ್ದರು. ಆ ಬಗ್ಗೆ ಕೆಲವು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಯಮುನಾ ಕೂಡ ಒಬ್ಬರು.
ಮುಂದೆ ಓದಿ
ಹರಿಪ್ರಿಯಾ ಬಗ್ಗೆ ನಟಿ ಭಾವನಾ ಕೊಟ್ಟ ಹೇಳಿಕೆ ಒಪ್ಪಿಲ್ಲ ಯಮುನಾ
ಗಂಡಸರು ಇಲ್ಲದೆ ಹೋದರೆ ಹೆಣ್ಣು ಇಲ್ಲ ಎಂದಿರುವ ಯಮುನಾ
ನಟಿ ಯಮುನಾಗೆ ಮದುವೆ ಬಳಿಕವೇ ಸಿಕ್ಕಾಪಟ್ಟೆ ಯಶಸ್ಸು
ತನ್ನ ಯಶಸ್ಸಿಗೆ ಕಾರಣರಾದ ಮೂವರ ಗಂಡಸರನ್ನು ನೆನೆದ ನಟಿ
ಯಮುನಾ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ ಹಾಗೂ ಕಿರುತೆರೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಇತ್ತೀಚೆಗೆ ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಹರಿಪ್ರಿಯಾ ಅವರ ಬಗ್ಗೆ ಭಾವನಾ ಹೇಳಿಕೆಯನ್ನು ಒಪ್ಪಿಕೊಂಡಿಲ್ಲ. "ನನಗೆ ಮದುವೆಯಾದ ಬಳಿಕೆವೇ ಯಶಸ್ಸು ಸಿಕ್ಕಿದೆ. ಈ ಪ್ರಕೃತಿಯಲ್ಲಿ ಗಂಡಸರು ಬಹಳ ಮುಖ್ಯ. ಗಂಡಸರು ಇಲ್ಲಾ ಅಂದರೆ, ಖಂಡಿತವಾಗಿಯೂ ಹೆಂಗಸರು ಇರುವುದಕ್ಕೆ ಸಾಧ್ಯವೇ ಇಲ್ಲ" ಎಂದು ಹೇಳಿದ್ದಾರೆ.
ಮದುವೆ ಆದ ಮೇಲೆ ನಟಿ ಹರಿಪ್ರಿಯಾಗೆ ಏನಾಯ್ತು ಗೊತ್ತಲ್ವಾ - ಭಾವನಾ ರಾಮಣ್ಣ..!
"ಅವರ ಹೇಳಿಕೆಯನ್ನು ನಾನು ನೋಡಿಲ್ಲ. ಮದುವೆ ಆದ್ಮೇಲೆ ಹರಿಪ್ರಿಯ ಸೈಡ್ ಲೈನ್ ಆದರು, ಪತಿ ಬಂದ್ಮೇಲೆ ಸೈಡ್ ಲೈನ್ ಆದರು, ಮಗು ಬಂದ್ಮೇಲೆ ಸೈಡ್ ಲೈನ್ ಆದರು ಅಂದರೆ ನಾನು ವೈಯಕ್ತಿಕವಾಗಿ ನಾನು ಒಪ್ಪಿಕೊಳ್ಳಲ್ಲ. ಯಾಕೆ ಅಂದರೆ, ನನ್ನ ಜೀವನವನ್ನೇ ಪರಿಗಣಿಸಿದಾಗ ನಾನು ಮಾಡಿರುವ ಸಾಧನೆ ಎಲ್ಲಾ ಮದುವೆಯ ನಂತರವೇ ಮಾಡಿರೋದು. ನನಗೆ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಮೂರು ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಮೆಕ್ಸಿಕೋ ದೇಶದಿಂದ, ಅಮೆರಿಕ ದೇಶದಿಂದ ಬಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ನಾನು ಒಂದು ನೃತ್ಯ ಸಂಸ್ಥೆಯನ್ನು ಕಟ್ಟಿ ನೃತ್ಯವನ್ನು ಹೇಳಿಕೊಡುತ್ತಿದ್ದೆ. 51 ಕನ್ನಡ ಚಲನ ಚಿತ್ರಗಳಾಗಿವೆ. 19 ಧಾರಾವಾಹಿಗಳಾಗಿವೆ. ಅದರಲ್ಲೂ ಧಾರಾವಾಹಿಗಳಲ್ಲಂತೂ ಉತ್ತಮವಾದ ಪಾತ್ರವನ್ನೇ ನಿಭಾಯಿಸಿದ್ದೇನೆ. ಯಾವುದರಲ್ಲೂ ಸಪೋರ್ಟಿಂಗ್ ಕ್ಯಾರೆಕ್ಟರ್ ಅಂತ ಅನಿಸುವುದೇ ಇಲ್ಲ. ಲೀಡ್ ಕ್ಯಾರೆಕ್ಟರ್‌ನಲ್ಲಿಯೇ ಸಮಾನವಾಗಿ ನಡೆದಿದೆ. ಇದೆಲ್ಲವನ್ನೂ ಪರಿಗಣಿಸಿದಾಗ, ಎಲ್ಲವೂ ಮದುವೆ ಆದ್ಮೇಲೆ ಆಗಿದೆ ನನಗೆ. ಹಾಗಾಗಿ ಮದುವೆಗೂ ಇದಕ್ಕೂ ಸಂಬಂಧ ತರುವ ಅವಶ್ಯಕತೆನೇ ಇಲ್ಲ." ಎಂದಿದ್ದಾರೆ ಯಮುನಾ.

ಮೂವರು ಗಂಡಸರಿಂದ ಬೆಂಬಲ
"ನನಗೆ ನನ್ನ ಗಂಡನ ಸಪೋರ್ಟ್ ಇಲ್ಲದೆ ನಾನು ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಮೂರು ಜನ ಗಂಡಸರನ್ನು ನಾನು ನನ್ನ ಜೀವನದಲ್ಲಿ ನಂಬುತ್ತೇನೆ. ಮೊದಲು ನಮ್ಮ ತಂದೆ. ನಮ್ಮ ಮನೆಯಲ್ಲಿ ಇಬ್ಬರು ಅಣ್ಣಂದಿರು ಹಾಗೂ ನಾನು ಇದ್ದೆವು. ನಮ್ಮ ಮನೆಯಲ್ಲಿ ನನಗೆ ನೀನು ಹುಡುಗಿ ಅಂತ ಬೇಧ ಭಾವವನ್ನೇ ಮಾಡಲಿಲ್ಲ. ಆ ರೀತಿ ಬೆಂಬಲ ಕೊಟ್ಟು ನನ್ನ ತಂದೆ ನನ್ನನ್ನು ಬೆಳೆಸಿದರು. ನನ್ನ ತಂದೆ ಯಾವ ರೀತಿ ಸಪೋರ್ಟ್ ಮಾಡಿದರೋ ಅದೇ ರೀತಿ ನನ್ನ ಪತಿ ಕೂಡ ಬೆಂಬಲ ನೀಡುತ್ತಾ ಬಂದಿದ್ದಾರೆ. ಭರತನಾಟ್ಯದಲ್ಲೂ ಕೂಡ ಕರ್ನಾಟಕ ಕಲಾ ತಿಲಕ ಕೆ. ಮುರಳೀಧರ ರಾವ್ ಇದ್ದರು. ಅವರೂ ಒಬ್ಬರು ಗಂಡಸರೇ. ಅವರು ಎಷ್ಟು ಬೆಂಬಲ ಕೊಟ್ಟು ನಡೆಸಿದ್ದಾರೆ." ಎನ್ನುತ್ತಾರೆ.
ಗಂಡಸರು ಇಲ್ಲಾ ಅಂದರೆ ಹೆಂಗಸು ಇಲ್ಲ
"ಗಂಡಸು ಅಂತ ಹೇಳಿದ್ರಿ. ಪ್ರತಿಯೊಂದು ಹಂತದಲ್ಲಿ ಪ್ರಮುಖವಾದ ಪಾತ್ರವನ್ನು ನಿಭಾಯಿಸಿ, ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ಆ ಸಂಶಯವನ್ನು ನೀವು ಇಟ್ಟಿಕೊಳ್ಳಲೇ ಬೇಡಿ. ಗಂಡಸರಿಗೆ ಮಹತ್ವವೇ ಇಲ್ವಾ? ಎನ್ನುವ ಸಂಶಯವನ್ನು ಇಟ್ಟುಕೊಳ್ಳಲೇಬೇಡಿ. ಈ ಪ್ರಕೃತಿಯಲ್ಲಿ ಗಂಡಸರು ಬಹಳ ಮುಖ್ಯ. ಗಂಡಸರು ಇಲ್ಲಾ ಅಂದರೆ, ಖಂಡಿತವಾಗಿಯೂ ಹೆಂಗಸರು ಇರುವುದಕ್ಕೆ ಸಾಧ್ಯವೇ ಇಲ್ಲ." ಎಂದು ಭಾವನಾ ಹೇಳಿದ್ದಾರೆ.
ನಟಿ ಯಮುನಾ ಅಷ್ಟೇ ಅಲ್ಲ. ಕೆಲವು ದಿನಗಳ ಹಿಂದೆ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಆಸ್ಪತ್ರೆಗಳು ಭಾವನಾ ಅವರನ್ನು ಬಳಸಿಕೊಂಡು ಐವಿಎಫ್ ಅನ್ನು ಪ್ರಚಾರ ಮಾಡುತ್ತಿವೆಯೇ ಎಂದು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಹಾಗೇ ಸಮಾಜದಲ್ಲಿ ವಿಚ್ಛೇದನಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐವಿಎಫ್ ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎಂದು ಊಹಿಸಿ ಎಂದಿದ್ದರು.
ಐವಿಎಫ್ ಓಕೆ.. ಈ ಪ್ರಚಾರ ಯಾಕೆ?
"2016ರಿಂದ ಫ್ಯಾಮಿಲಿ ಕೋರ್ಟ್‌ನಲ್ಲಿ ನೋಡುತ್ತಿದ್ದೇನೆ. ಸಾವಿರಾರು ಜನರು ಡಿವೋರ್ಸ್‌ಗೆ ಅರ್ಜಿ ಹಾಕುತ್ತಿದ್ದಾರೆ. ಗಂಡ ಈಕಡೆಗೆ ಹೋಗುತ್ತಾನೆ. ಹೆಂಡತಿ ಆ ಕಡೆಗೆ ಹೋಗುತ್ತಾಳೆ. ಮಕ್ಕಳು ನೊಂದುಕೊಳ್ಳುತ್ತಾರೆ. ಇದನ್ನು ನೋಡಿ ಕಣ್ಣಲ್ಲಿ ನೀರು ಬರುತ್ತೆ. ರೈತರಿಗೆ ಮದುವೆ ಆಗುವುದಕ್ಕೆ ಹೆಣ್ಣು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭಾವನಾ ಅವರ ಈ ಮಾತು ಒಂದು ವರ್ಗದ ಜನರಿಗೆ ತಪ್ಪು ಸಂದೇಶ ರವಾನೆ ಆದಂತೆ ಆಗುವುದಿಲ್ಲವೇ?" ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದರು.
ಹಾಗೇ ಭಾವನಾ ಅವರ ಮುಂದೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. "ಗಂಡೇ ಬೇಡ. ಮದುವೆನೇ ಬೇಡ. ನಾನು ತಾಯಿ ಆಗಿದ್ದೀನಿ ಅಂತ ಮಾಧ್ಯಮಗಳ ಮುಂದೆ ಪ್ರಮೋಷನ್ ಮಾಡಿದಾಗ ಎಲ್ಲೋ ಒಂದು ಕಡೆ ಐವಿಎಫ್ ಆಸ್ಪತ್ರೆಗಳು ಭಾವನಾ ಅವರನ್ನು ಪ್ರಮೋಷನ್‌ಗೆ ಬಳಸುತ್ತಿದ್ದಾರಾ? ಅಂತ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ. ಗಂಡನೂ ಬೇಕಾಗಿಲ್ಲ. ಮದುವೆನೂಬೇಕಾಗಿಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಮಕ್ಕಳಾಗದವರು ಐವಿಎಫ್ ಬಳಸುವುದು ಓಕೆ. ಇಲ್ಲಾ ಇಚ್ಛೆ ಪಟ್ಟು ಭಾವನಾ ತರ ಮದುವೆನೇ ಬೇಡ ಅಂತ ಬಳಸುವವರೂ ಓಕೆ. ಆದರೆ, ಈ ಪ್ರಮೋಷನ್ಸ್ ಯಾಕೆ?" ಎಂದು ಲಾಯರ್ ಜಗದೀಶ್ ಪ್ರಶ್ನೆ ಮಾಡಿದ್ದರು.


Click it and Unblock the Notifications











