ಬಿಗ್‌ಬಾಸ್ ತುಕಾಲಿ ಸಂತೋಷ್ ಹೊಸ ಕಾರು ಅಪಘಾತ; ಆಟೋರಿಕ್ಷಾ-ಕಾರು ಜಖಂ
ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತುಕಾಲಿ ಸಂತೋಷ್ ಹೊಸ ಕಾರು ಖರೀದಿ ಮಾಡಿದ್ದರು. ಎರಡು ವಾರಗಳ ಹಿಂದಷ್ಟೇ ಮಡದಿಯೊಂದಿಗೆ ತೆರಳಿ ಹೊಸ ಕಿಯಾ ಕಾರನ್ನು ಮನೆಗೆ ತಂದು ಸಂಭ್ರಮಿಸಿದ್ದರು. ಆ ಸಂಭ್ರಮ ಮುಗಿಯುವುದರೊಳಗೆ ಕಾರು ಅಪಘಾತ ಆಗಿದೆ.
ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಅವರ ಕಿಯಾ ಕಾರು ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ತುಕಾಲಿ ಸಂತೋಷ್ ಕಾರಿಗೆ ಆಟೋ ರಿಕ್ಷಾ ಗುದ್ದಿದ ಪರಿಣಾಮ ಎರಡೂ ವಾಹನಗಳು ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್ ಕಾರು ಹಾಗೂ ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ತುಕಾಲಿ ಸಂತೋಷ್ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರದ ಕಡೆಗೆ ಹೊರಟಿದ್ದರು. ಈ ವೇಳೆ ಆಟೋ ರಿಕ್ಷಾ ಬಲಗಡೆಯಿಂದ ಬಂದು ತುಕಾಲಿ ಸಂತೋಷ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕ ಜಗದೀಶ್ ಎಂದು ವರದಿಯಾಗಿದೆ.
ತುಕಾಲಿ ಸಂತೋಷ್ ಕೇವಲ ಎರಡು ವಾರಗಳ ಹಿಂದಷ್ಟೇ ಹೊಸ ಕಾರನ್ನು ಖರೀದಿ ಮಾಡಿದ್ದರು. ಅಷ್ಟರಲ್ಲೇ ಕಾರು ಅಪಘಾತಕ್ಕೀಡಾಗಿದೆ. ಮೂಲಗಳ ಪ್ರಕಾರ, ಆಟೋ ಚಾಲಕ ಮಧ್ಯೆ ಸೇವನೆ ಮಾಡಿದ್ದ ಅನ್ನೋ ಬಗ್ಗೆ ವರದಿಯಾಗಿದೆ. ಆದರೆ, ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಬೇಕಿದೆ. ಸದ್ಯ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 'ಬಿಗ್ ಬಾಸ್ ಕನ್ನಡ ಸೀಸನ್ 10'ರಲ್ಲಿ ಭಾಗವಹಿಸಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಬಿಗ್‌ಬಾಸ್ ರಿಯಾಲಿಟಿ ಶೋಗೆ ಹೋದ್ಮೇಲೆ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಇದೇ ಖುಷಿಯಲ್ಲಿ ಕಾರನ್ನು ಖರೀದಿ ಮಾಡಿದ್ದರು.


Click it and Unblock the Notifications











