ಮತ್ತೆ ಸಿನಿಮಾ ನಿರ್ಮಾಣಕ್ಕಿಳಿದ ಶಿಲ್ಪಾ ಗಣೇಶ್; ಕನ್ನಡದಲ್ಲಿ ಮಹಿಳಾ ನಿರ್ಮಾಪಕಿಯರು ಹೆಚ್ಚಾಗಬಹುದೇ?
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕಿಯರ ಸಂಖ್ಯೆ ತೀರಾ ಕಡಿಮೆಯಿದೆ. ಆಗ ಒಬ್ಬರು, ಈಗ ಒಬ್ಬರು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಧೈರ್ಯ ತೋರಿದ್ದು ಬಿಟ್ಟರೆ, ಮತ್ಯಾರೂ ಇಂತಹ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ಮಾಪಕಿ. ತಮ್ಮ ಬ್ಯಾನರ್‌ನಿಂದ ಅತೀ ಹೆಚ್ಚು ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡಿದ ನಿರ್ಮಾಪಕಿ. ಸದ್ಯ ಇವರ ಹೆಸರಿನಲ್ಲೇ ಆ ರೆಕಾರ್ಡ್ ಇದೆ.
ಆದರೆ, ಈಗಿನ ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಪತ್ನಿಯರು ಮಾತ್ರ ಇಂತಹ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಅವರು ಸಿನಿಮಾ ನಿರ್ಮಾಣಕ್ಕೆ ಅಂತ ಇಳಿದಿದ್ದು ತೀರಾ ಕಡಿಮೆ. ಆದ್ರೀಗ ಗೋಲ್ಡನ್‌ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈ ಹಿಂದೆ ನಿರ್ಮಾಣ ಮಾಡಿದ್ದರು. ಮಧ್ಯದಲ್ಲಿ ಗ್ಯಾಪ್ ತೆಗೆದುಕೊಂಡಿದ್ದರು. ಈಗ ಮತ್ತೆ ಸಿನಿಮಾ ನಿರ್ಮಾಣದಲ್ಲಿ ಆಕ್ಟಿವ್ ಆಗಿದ್ದಾರೆ.

ಶಿಲ್ಪಾ ಗಣೇಶ್ ಮತ್ತೆ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಹಳ ದಿನಗಳ ಬಳಿಕ ತಮ್ಮ ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಬಾರಿ ತುಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ಅನ್ನೋದು ವಿಶೇಷ. ಅದೇ ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ ಅನ್ನೋದು ಮತ್ತೊಂದು ಹೈಲೈಟ್. ಅಂದ್ಹಾಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ ಸಿನಿಮಾದ ಹೆಸರು 'ಪಿಕ್ಚರ್'.
'ಪಿಕ್ಚರ್' ಸಿನಿಮಾ ತುಳು ಹಾಗೂ ಕನ್ನಡ ಎರಡೂ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾ ಕೆಲ ತುಣುಕುಗಳು ಸಿನಿ ಪ್ರಿಯರ ಗಮನ ಸೆಳೆದಿದೆ, ಬಹುತೇಕ ತುಳು ಕಲಾವಿದರೇ ತುಂಬಿರುವ ಈ ಸಿನಿಮಾದ ಒಂದು ಹಾಡು ರಿಲೀಸ್ ಆಗಿದೆ. ಕನ್ನಡದಲ್ಲಿ "ತಕ ತಕ ಕುಣಿಸಕ" ಅಂತ ಶುರುವಾಗುವ ಈ ಹಾಡಿಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಸ್ಯಾಮ್ಯುಯೆಲ್ ಅಬಿ ಸಂಗೀತ ನೀಡಿದ್ದಾರೆ. ಈ ಹಾಡು ಸಖತ್ ಗ್ರ್ಯಾಂಡ್ ಆಗಿ ಮೂಡಿ ಬಂದಿದೆ. ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದರೂ, ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ.
ಶಿಲ್ಪಾ ಗಣೇಶ್‌ಗೆ ಸಿನಿಮಾ ನಿರ್ಮಾಣ ಮಾಡೋದು ಹೊಸದೇನು ಅಲ್ಲ. ಈ ಹಿಂದೆ ಅವರದ್ದೇ ಬ್ಯಾನರ್‌ನಲ್ಲಿ ಪತಿ ಗಣೇಶ್‌ಗಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ. ಆದರೆ, ಸಿನಿಮಾ ನಿರ್ಮಾಣ ಮಾಡೋದು ಅಷ್ಟು ಸುಲಭ ಅಲ್ಲ. ಈಗಾಗೇ ನಿರ್ಮಾಣದಲ್ಲಿಯೇ ವರ್ಷಾನುಗಟ್ಟಲೆ ಅನುಭವ ಇರುವವರೇ ಹಣ ಕಳೆದುಕೊಂಡು ಸೋತು ಸುಣ್ಣವಾಗಿದ್ದಾರೆ. ಹೀಗಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದಾಗ ಲೆಕ್ಕಾಚಾರ ಸರಿಯಾಗಿ ಇರಬೇಕು.
ಶಿಲ್ಪಾ ಗಣೇಶ್ ಒಂದಿಷ್ಟು ವರ್ಷ ಗ್ಯಾಪ್ ಕೊಟ್ಟು ನಿರ್ಮಾಣಕ್ಕೆ ಮರಳಿದ್ದು, ಕನ್ನಡ ಚಿತ್ರರಂಗಕ್ಕೆ ಒಳಿತೇ ಆಗಿದೆ. ಒಂದು ವೇಳೆ ಇವರು ನಿರ್ಮಿಸಿರುವ 'ಪಿಕ್ಚರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಇನ್ನೊಂದಿಷ್ಟು ಸಿನಿಮಾಗಳನ್ನು ಮಾಡುವುದು ಗ್ಯಾರಂಟಿ. ಹಾಗೇ ಕನ್ನಡ ಸೂಪರ್‌ಸ್ಟಾರ್ ಪತ್ನಿಯರಿಗೆ ಸ್ಪೂರ್ತಿಯಾಗಬಹುದು. ಇವರಂತೆಯೇ ಸಿನಿಮಾ ನಿರ್ಮಾಣಕ್ಕೆ ಮುಂದು ಬರಬಹುದು ಅನ್ನೋ ಆಶಾ ಭಾವನೆಯಿದೆ.
ಸದ್ಯ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೇ ಗೀತಾ ಶಿವರಾಜ್‌ಕುಮಾರ್ ತಮ್ಮ ಗೀತಾ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈಗ ಶಿಲ್ಪಾ ಗಣೇಶ್ ಕೂಡ ಮತ್ತೆ ಸಿನಿಮಾ ನಿರ್ಮಾಣದಲ್ಲಿ ಆಕ್ಟಿವ್ ಆಗಿದ್ದಾರೆ. ಹೀಗಾಗಿ ನಿಧಾನವಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ನಿರ್ಮಾಪಕಿಯರು ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿರೋದು ಚಿತ್ರರಂಗಕ್ಕೆ ಒಳ್ಳೆಯ ಸುದ್ದಿ. ಇದರ ಸಂಖ್ಯೆ ಇನ್ನೂ ಹೆಚ್ಚಾದರೆ, ಚಿತ್ರರಂಗದ ಅದೃಷ್ಟ ಖುಲಾಯಿಸೋದ್ರಲ್ಲಿ ಎರಡು ಮಾತಿಲ್ಲ.


Click it and Unblock the Notifications











