ಕರ್ನಾಟಕ ಫಿಲ್ಮ್‌ಚೇಂಬರ್‌ಗೆ ಧಮ್ಕಿ ಹಾಕಿತೇ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ? ಯಾಕೀ ಮೌನ?
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಕಮಲ್ ಹಾಸನ್ ತನ್ನ ಮೊಂಡುತನದಿಂದ ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾವನ್ನು ರಿಲೀಸ್ ಮಾಡಿಲ್ಲ. ಕನ್ನಡ ಭಾಷೆಯ ಬಗ್ಗೆ ತಾನೇ ವಿವಾದವನ್ನು ಸೃಷ್ಟಿಸಿ, ಕ್ಷಮೆ ಕೇಳುವುದಕ್ಕೆ ಹಿಂದೇಟು ಹಾಕಿ ಸಣ್ಣತನವನ್ನು ತೋರಿಸಿದ್ದಾರೆ. ಸಿನಿಮಾ ರಿಲೀಸ್ ಆಗಬೇಕು ಅಂತ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್ ಹಾಸನ್‌ಗೆ ಅಲ್ಲೂ ಹಿನ್ನೆಡೆಯಾಗಿತ್ತು. ನ್ಯಾಯಾಧೀಶರು ಕ್ಷಮೆ ಕೇಳುವುದಕ್ಕೆ ಸಮಯವನ್ನೂ ನೀಡಿದ್ದರು. ಆದರೂ ಕಮಲ್ ತಮ್ಮ ಹಠವನ್ನೇ ಮುಂದುವರೆಸಿದ್ದರು.
ಸದ್ಯ ಕಮಲ್ ಹಾಸನ್ ಸಿನಿಮಾ 'ಥಗ್ ಲೈಫ್' ಕರ್ನಾಟಕದಲ್ಲಿ ರಿಲೀಸ್ ಆಗಿಲ್ಲ. ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು ಜೂನ್ 10ರಂದು ಮತ್ತೆ ಈ ವಿವಾದದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಅಲ್ಲಿವರೆಗೆ ಕಮಲ್ ಹಾಸನ್ ನಿಲುವು ಬದಲಾಗುತ್ತಾ? ಅವರ ಅಹಂ ಕಮ್ಮಿಯಾಗಿರುತ್ತಾ? ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಯಾಕಂದ್ರೆ, ಕಮಲ್ ಹಾಸನ್ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಷ್ಟೆಲ್ಲ ಆದರೂ, ಕನ್ನಡಿಗರನ್ನು ಕೆರಳಿಸುವ ಮತ್ತೊಂದು ವಿಷಯ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಏನಲ್ಲ ಪ್ರಯತ್ನ ಪಟ್ಟಿದ್ದರು ಅನ್ನೋದು ಒಂದೊಂದಾಗಿಯೇ ಹೊರ ಬೀಳುತ್ತಿದೆ. ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕ ಸಂಘ ಕೆಲವು ದಿನಗಳ ಹಿಂದೆ ವಾಣಿಜ್ಯ ಮಂಡಳಿಗೆ ಒಂದು ಪತ್ರವನ್ನು ಬರೆದಿತ್ತು. ಆ ಪತ್ರದಲ್ಲಿ ಪರೋಕ್ಷವಾಗಿ ಧಮ್ಕಿ ಹಾಕಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷರು ಮಾತ್ರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಹಾಗಿದ್ದರೆ, ಧಮ್ಕಿ ಹಾಕಿದ್ದು ನಿಜವೇ? ತಮಿಳು ನಿರ್ಮಾಪಕರು ಕಳಿಸಿದ ಪತ್ರದಲ್ಲಿ ಏನು ಹೇಳಲಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಕಮಲ್ ಹಾಸನ್ ವಿವಾದ ಸದ್ಯಕ್ಕೆ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಕಷ್ಟ ಆಗಬಹುದು. ಆದರೂ, ಕಮಲ್ ವಿವಾದ ಬುಗಿಲೆದ್ದ ದಿನದಿಂದಲೇ ವಾಣಿಜ್ಯ ಮಂಡಳಿ ಪ್ರತಿಕ್ರಿಯೆ ನೀಡುವುದಕ್ಕೆ ಮೀನಾಮೇಷ ಎಣಿಸುತ್ತಿತ್ತು. 'ಥಗ್ಸ್ ಲೈಫ್' ಕರ್ನಾಟಕದಲ್ಲಿ ಬಿಡುಗಡೆ ಮಾಡುವ ವಿಚಾರದಲ್ಲಿ ತನ್ನ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕೆ ಪರದಾಡಿತ್ತು. ಆದ್ರೀಗ ತಮಿಳು ನಿರ್ಮಾಪಕರು ಕಳಿಸಿದ್ದಾರೆ ಎನ್ನಲಾದ ಪತ್ರದಲ್ಲಿ ಪರೋಕ್ಷವಾಗಿ ಧಮ್ಮಿ ಹಾಕಿರುವುದು ಫಿಲ್ಮ್ ಚೇಂಬರ್ ಸದಸ್ಯರಲ್ಲಿಯೇ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ಪತ್ರದಲ್ಲಿ ಎರಡು ಪ್ರಮುಖ ಅಂಶಗಳನ್ನು ಗಮನಿಸಬೇಕಿದೆ. ಇದರಲ್ಲಿ 'ಥಗ್ ಲೈಫ್' ಬಿಡುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಕನ್ನಡ ಹಾಗೂ ತಮಿಳು ಚಿತ್ರರಂಗ ಸಾಮರಸ್ಯದಿಂದ ಒಟ್ಟಿಗೆ ಕೆಲಸ ಮಾಡುತ್ತಿದೆ. ಕನ್ನಡದ ನಟರಾದ ಶಿವರಾಜ್‌ಕುಮಾರ್, ಸುದೀಪ್, ಉಪೇಂದ್ರ, ದುನಿಯಾ ವಿಜಯ್, ಕಿಶೋರ್, ಅಚ್ಯುತ್ ಕುಮಾರ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ತಮಿಳು ಫಿಲ್ಮ್ ಮೇಕರ್ಸ್ ಹಾಗೂ ನಿರ್ಮಾಪಕರು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ನೀವು ತೆಗೆದುಕೊಳ್ಳುವ ನಿರ್ಧಾರ, ಎರಡು ಚಿತ್ರರಂಗದ ಸಾಮರಸ್ಯವನ್ನು ಹಾಳು ಮಾಡಬಹುದು ಎನ್ನುವ ಅರ್ಥದಲ್ಲಿ ಬರೆಯಲಾಗಿದೆ. ಇದನ್ನು ಧಮ್ಕಿ ಅಂತ ಪರಿಗಣನೆಗೆ ತೆಗೆದುಕೊಳ್ಳದೇ ಹೋದರೂ, ಕೊನೆಯಲ್ಲಿ ಬರೆದ ಕೆಲವು ಸಾಲುಗಳು ಅದನ್ನೇ ಸೂಚಿಸುತ್ತವೆ.

ಅದೇನು ಅಂತ ನೋಡುವುದಾದರೇ, "ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾವನ್ನು ನಿಲ್ಲಿಸುವುದು ಅಥವಾ ಮುಂದಕ್ಕೆ ಹಾಕಿದರೆ, ಎರಡು ಚಿತ್ರರಂಗದಲ್ಲಿರುವ ಸಾಮರಸ್ಯ ಹಾಳಾಗುತ್ತದೆ. ಇದು ಬೇರೆ ರೀತಿಯ ಪರಿಣಾಮವನ್ನು ಬೀರಬಹುದು. ಇದು ಮುಂದಿನ ವರ್ಷಗಳಲ್ಲಿ ಎರಡೂ ಚಿತ್ರರಂಗಕ್ಕೂ ಹೊಡೆತ ಬೀಳಬಹುದು. ಅಕ್ಕ ಪಕ್ಕದ ರಾಜ್ಯದವರಾಗಿದ್ದರಿಂದ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದೇವೆ. ಒಟ್ಟಿಗೆ ಇದ್ದು ಕೆಲಸ ಮಾಡಬೇಕಿದೆ. ಹೀಗಾಗಿ ನಿಮ್ಮಲ್ಲಿ ಮತ್ತೊಮ್ಮೆ ಈ ಸಿನಿಮಾದ ಬಿಡುಗಡೆಯನ್ನು ಮೃದುವಾಗಿ ಆಗುವಂತೆ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ. ಎರಡು ಚಿತ್ರರಂಗದ ಭವಿಷ್ಯ ಸುಧೀರ್ಘವಾಗಿ ಸಾಗಬೇಕಿದೆ ಎಂದು ಪತ್ರವನ್ನು ಮುಗಿಸಿದ್ದಾರೆ.
ಈ ಸಾಲುಗಳು ವಾಣಿಜ್ಯ ಮಂಡಳಿಯ ಹಲವು ಸದಸ್ಯರಿಗೆ ಧಮ್ಕಿಯಾಗಿ ಕಂಡಿದೆ. ಕೊನೆಯ ಪ್ಯಾರದಲ್ಲಿ ಧಮ್ಕಿ ಹಾಕಿದ್ದಾರೆಂದು ಅಸಮಧಾನಗೊಂಡಿದ್ದಾರೆ. ಕೆಲವರು ಈ ವಯಸ್ಸಿನಲ್ಲೂ ಅಹಂ ಅನ್ನೋದು ಬೇಕಾ ಎಂದು ಪ್ರತಿಕ್ರಿಯೆ ನೀಡಿದ್ದಾರೆಂದು ಮೂಲಗಳು ಹೇಳಿವೆ. ಆದರೆ, ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು ಅವರು ಮಾತ್ರ ಮೌನಕ್ಕೆ ಜಾರಿದ್ದು, ಯಾವ ರೀತಿಯ ಸಂದಿಗ್ಧ ಪರಿಸ್ಥಿತಿಯಯನ್ನು ಎದುರಿಸುತ್ತಿದ್ದಾರೆಂದು ತಿಳಿದು ಬಂದಿಲ್ಲ.


Click it and Unblock the Notifications











