Baanadariyalli Box Office: ಕಾವೇರಿ ಎಫೆಕ್ಟ್.. ಕರ್ನಾಟಕ ಬಂದ್.. 4 ದಿನಕ್ಕೆ 'ಬಾನದಾರಿಯಲಿ' ಕಲೆಕ್ಷನ್ ಎಷ್ಟು?
ಕಳೆದ ವಾರ ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ರಿಲೀಸ್ ಆಗಿದ್ದವು. ಒಂದು ಜಗ್ಗೇಶ್, ಧನಂಜಯ್ ಸಿನಿಮಾ 'ತೋತಾಪುರಿ 2'. ಎರಡನೆಯದ್ದು ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರಂಗಾಯಣ ರಘು ನಟನೆಯ 'ಬಾನದಾರಿಯಲಿ'. ಅದರಲ್ಲೂ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್‌ನ 'ಬಾನದಾರಿಯಲಿ' ಪ್ರೇಕ್ಷಕರ ನೆಚ್ಚಿನ ಸಿನಿಮಾ ಆಗಿತ್ತು.
ಬಹಳ ದಿನಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಅವರ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದರು. ಜೊತೆಗೆ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ಗಮನ ಸೆಳೆದಿದ್ದ ರುಕ್ಷಿಣಿ ವಸಂತ್ ಈ ಸಿನಿಮಾ ಮತ್ತೊಂದು ಅಟ್ರ್ಯಾಕ್ಷನ್ ಆಗಿತ್ತು.

ಈ ಎಲ್ಲಾ ಕಾರಣಕ್ಕೆ ಗಣೇಶ್ ಸಿನಿಮಾ 'ಬಾನದಾರಿಯಲಿ' ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಬಹುದು ಅನ್ನೋ ನಿರೀಕ್ಷೆಯಿತ್ತು. ಅಲ್ಲದೆ ರಿಲೀಸ್ ಆಗುತ್ತಿರುವ ಸಮಯ ಕೂಡ ಸರಿಯಾಗಿಯೇ ಇತ್ತು. ಬ್ಯಾಕ್ ಟು ಬ್ಯಾಕ್ ರಜೆಗಳಿದ್ದವು. ಇದರಿಂದ ಬಾಕ್ಸಾಫೀಸ್ ಕಲೆಕ್ಷನ್ ಮೇಲೂ ದೊಡ್ಡ ನಿರೀಕ್ಷೆಯಿತ್ತು. ಹಾಗಿದ್ದರೆ, ಕಾವೇರಿ ವಿವಾದ, ಕರ್ನಾಟಕ ಬಂದ ಎಫೆಕ್ಟ್ ನಡುವೆಯೂ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ವೀಕೆಂಡ್‌ನಲ್ಲಿ 'ಬಾನದಾರಿಯಲಿ' ಕಲೆಕ್ಷನ್ ಹೇಗಿದೆ?
ಗೋಲ್ಡನ್ ಸ್ಟಾರ್ ಗಣೇಶ್, ರುಕ್ಷಿಣಿ ವಸಂತ್ ಹೊಸ ಕಾಂಬಿನೇಷನ್. ಜೊತೆಗೆ ಪ್ರೀತಿ ಗುಬ್ಬಿ ನಿರ್ದೇಶನ. ಹೀಗಾಗಿ ನಿರೀಕ್ಷೆಯಂತೂ ಇದ್ದೇ ಇತ್ತು. ಇವೆಲ್ಲದರ ಜೊತೆ ನಿರಂತರವಾಗಿ ನಾಲ್ಕು ರಜೆಗಳಿದ್ದವು. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಸಬ್ಜೆಕ್ಟ್. ಹೀಗಿದ್ದರೂ, 'ಬಾನದಾರಿಯಲಿ' ಪ್ರೇಕ್ಷಕರನ್ನು ಸೆಳೆಯುವಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಶನಿವಾರ (ಸೆಪ್ಟೆಂಬರ್ 30) ಹಾಗೂ ಭಾನುವಾರ (ಅಕ್ಟೋಬರ್ 1) ಈ ಎರಡು ದಿನಗಳಲ್ಲಿ ಪ್ರತಿದಿನ 1 ಕೋಟಿಯಿಂದ 1.50 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿರಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕಹಾಕಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಅಂದಾಜು 2 ರಿಂದ 2.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ನಾಲ್ಕು ದಿನಗಳ ಕಲೆಕ್ಷನ್ ಎಷ್ಟು?
'ಬಾನದಾರಿಯಲಿ' ಸಿನಿಮಾ ಸೆಪ್ಟೆಂಬರ್ 28ಕ್ಕೆ ರಾಜ್ಯದ್ಯಂತ ರಿಲೀಸ್ ಆಗಿತ್ತು. ಅಂದು ರಜೆ ಇದ್ದಿದ್ದರಿಂದ ಸಿನಿಮಾ ಕಲೆಕ್ಷನ್ ಚೆನ್ನಾಗಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಗುರುವಾರ (ಸೆಪ್ಟೆಂಬರ್ 28)ರಂದು ಸಿನಿಮಾ ಕಲೆಕ್ಷನ್ 87 ಲಕ್ಷದಿಂದ 1 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ ಎಂದು ವಿತರಕರ ವಲಯದಿಂದ ಬಂದಿರೋ ಸುದ್ದಿ. ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗಿತ್ತು.

ಕಾವೇರಿ.. ಬಂದ್ ಎಫೆಕ್ಟ್?
'ಬಾನದಾರಿಯಲಿ' ಸಿನಿಮಾ ಪ್ರೇಮಕಥೆಯಾಗಿದ್ದರೂ ರೆಗ್ಯೂಲರ್ ಸ್ಟೋರಿಯಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನಾಲ್ಕು ದಿನಗಳಲ್ಲಿ 3.5 ಕೋಟಿಯಿಂದ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಕಲೆಕ್ಷನ್ ಡಲ್ ಆಗಿದ್ದಕ್ಕೆ ಕಾರಣ ಜನರು ಕಾವೇರಿ ಹೋರಾಟದ ಮೂಡಿನಲ್ಲಿದ್ದಾರೆ. ಮಂಡ್ಯ, ಮೈಸೂರು ಭಾಗದ ಜನರು ಸಿನಿಮಾ ನೋಡುವ ಮೂಡಿನಲ್ಲಿ ಇನ್ನು. ಇನ್ನು ಬೆಂಗಳೂರಿನಲ್ಲಿ ಬಂದ್ ಎಫೆಕ್ಟ್ ಇತ್ತು. ಹೀಗಾಗಿ ಸಿನಿಮಾ ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ಬಂದಿಲ್ಲ ಎನ್ನುತ್ತಿದೆ ವಿತರಕರ ವಲಯ.
ವರ್ಲ್ಡ್ ಕಪ್‌ನಿಂದಲೂ ಹಿನ್ನೆಡೆ ಸಾಧ್ಯತೆ?
'ಬಾನದಾರಿಯಲಿ' ಈ ವಾರ ಎಷ್ಟು ಸಾಧ್ಯವೋ ಅಷ್ಟು ಕಲೆಕ್ಷನ್ ಮಾಡಬೇಕಿದೆ. ಮುಂದಿನ ವಾರದಿಂದ ವರ್ಲ್ಡ್ ಕಪ್ ಆರಂಭ ಆಗುತ್ತಿರುವ ಬೆನ್ನಲ್ಲೇ ಜನರು ಚಿತ್ರಮಂದಿರಕ್ಕೆ ಬರುವುದು ತೀರಾ ವಿರಳ. ಈ ಕಾರಣಕ್ಕೆ 'ಬಾನದಾರಿಯಲಿ' ಸಿನಿಮಾಗೆ ಈ ವಾರ ನಿರ್ಣಾಯಕ ಅಂತನೇ ಹೇಳಬಹುದು. ಅಂದ್ಹಾಗೆ, 'ಬಾನದಾರಿಯಲಿ' ಸಿನಿಮಾದ ಕಲೆಕ್ಷನ್ ಮಾಹಿತಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಹೀಗಾಗಿ ಸಿನಿಮಾ ತಂಡವೇ ಅಧಿಕೃತ ಅಂಕಿ ಸಂಖ್ಯೆಗಳನ್ನು ನೀಡಬೇಕಿದೆ.


Click it and Unblock the Notifications











