"ಓ ಇವರಿಗೆ ಮದುವೆ ಆಗಿದೆ.. ಮಗು ಇದೆ ಅಂತಾರೆ.. ಅದಕ್ಕೆ ಬಿಗ್ ಪ್ರಾಜೆಕ್ಟ್ ಸಿಗುತ್ತಿಲ್ಲ": ದಿಯಾ ನಟಿ ಖುಷಿ ರವಿ
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ರವಿ. ಇವರನ್ನು 'ದಿಯಾ' ಸಿನಿಮಾ ಮೂಲಕ ಹೆಚ್ಚಾಗಿ ಗುರುತಿಸುತ್ತಾರೆ. ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಇಲ್ಲಿಂದ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಇತ್ತೀಚೆಗೆ ಜೀ 5ನ ಮೊದಲ ಕನ್ನಡ ವೆಬ್ ಸೀರಿಸ್ 'ಅಯ್ಯನ ಮನೆ'ಯಲ್ಲಿ ನಟಿಸಿದ್ದಾರೆ.
'ಅಯ್ಯನ ಮನೆ' ಕನ್ನಡದಲ್ಲೂ ವೆಬ್ ಸೀರಿಸ್ ನೋಡಬೇಕು ಎನ್ನುವವರಿಗೆ ಹೊಸ ಹುರುಷು ಕೊಟ್ಟಿದೆ. ಜೀ 5ಗೆ ಈ ವೆಬ್ ಸೀರಿಸ್‌ನಿಂದ ಸಬ್‌ಸ್ಕ್ರೈಬರ್‌ಗಳು ಗಣನೀಯವಾಗಿ ಹೆಚ್ಚಾಗಿದ್ದಾರೆ. ಇಂತಹ ಸೂಪರ್ ಸಕ್ಸಸ್ ಕನ್ನಡ ವೆಬ್ ಸೀರಿಸ್‌ನಲ್ಲಿ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನಟಿಸುವ ಮೂಲಕ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.

'ದಿಯಾ', 'ಅಯ್ಯನ ಮನೆ' ಅಂತಹ ವಿಭಿನ್ನ ಪ್ರಾಜೆಕ್ಟ್‌ಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರೂ, ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಆಫರ್ ಬಂದಿಲ್ಲ. ಖುಷಿ ರವಿಯವರಿಗೆ ಈಗಾಗಲೇ ಮದುವೆ ಆಗಿದೆ. ಒಬ್ಬ ಮಗಳು ಕೂಡ ಇದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅವಕಾಶ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆಂದು ಗ್ಲೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಖುಷಿ ರವಿ 'ದಿಯಾ' ಸಿನಿಮಾಗೂ ಮುನ್ನ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ನಟಿಸಿದ 'ದಿಯಾ' ಖುಷಿ ರವಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ನಟಿಸಿದ 'ಕೇಸ್ ಆಫ್ ಕೊಂಡಾಣ', ತೆಲುಗು ಸಿನಿಮಾ 'ಪಿಂದಾಮ್', 'ನೀತಿ' ಅಂತಹ ಸಿನಿಮಾಗಳು ಮೆಚ್ಚಿಗೆ ಗಳಿಸಿದ್ದರು. ಖುಷಿ ರವಿ ಪಾತ್ರವನ್ನು ಸಿನಿಮಾ ಮಂದಿ ಹೊಗಳಿ ಕೊಂಡಾಡಿದ್ದರು. ಕನ್ನಡ ಚಿತ್ರರಂಗದ ಉತ್ತಮ ನಟಿ ಎನ್ನುವ ಮಾತು ಕೇಳಿ ಬಂದರೂ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವಕಾಶ ನೀಡುತ್ತಿಲ್ಲ. ಅದ್ಯಾಕೆ ಅನ್ನೋದನ್ನು ಖುಷಿ ರವಿ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಗೌತಮಿ ಗೌಡ, ಮೋಕ್ಷಿತಾ ಪೈಗೆ ಸೇಫ್ ಆಗಿದ್ದೇಗೆ? 'ಕರ್ಣ' ಧಾರಾವಾಹಿಯಲ್ಲಿ ನಟಿಸಿ ಭವ್ಯಾ ಗೌಡ ಸಿಕ್ಕಿಕೊಂಡಿದ್ದೇಕೆ?
"ಕೆಲವು ಆಫರ್‌ಗಳು ಬಂದವು. ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ನವರು ಓ ಇವರಿಗೆ ಮದುವೆ ಆಗಿ ಮಗು ಆಗಿದೆಯಂತೆ ಅಂತ ಆರಂಭದಲ್ಲಿ ಹೇಳಿದವು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನನಗೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಬೇಕು. ಹಿಂದೆಲ್ಲ ಒಳ್ಳೊಳ್ಳೆ ಹೀರೋಯಿನ್ಸ್‌ಗೆ ಮಾತ್ರ ಒಳ್ಳೊಳ್ಳೆ ರೋಲ್ ಸಿಗುತ್ತಿದ್ದವು. ರಮ್ಯಾ, ರಾಧಿಕಾ, ರಕ್ಷಿತಾ ಮೇಡಂ ಅವರಿಗೆಲ್ಲ ತುಂಬಾನೇ ಪ್ರಾಮುಖ್ಯತೆ ಇರೋದು. ತೀರಾ ಹೊಸಬರನ್ನು ಕರೆದರೆ ಬ್ಯೂಟಿ, ಗ್ಲಾಮರ್ ಮಾತ್ರ ಇರೋದು. ದಿಯಾ ಶುರುವಾಗಿದ್ದೂ ಹಾಗೆ" ಎಂದು ನಟಿ ಖುಷಿ ರವಿ ಹೇಳುತ್ತಾರೆ.

ದಿಯಾ ಸಿನಿಮಾದಲ್ಲಿ ಖುಷಿ ರವಿಗೆ ಗ್ಲಾಮರ್, ಬ್ಯೂಟಿ ಎಲ್ಲಾ ಪಕ್ಕಕ್ಕೆ ಇಡಿ ಎಂದು ನಿರ್ದೇಶಕರು ಹೇಳಿದ್ದರಂತೆ. "ನನಗೆ ಅಶೋಕ್ ಸರ್ ಹೇಳಿದ್ದು ಅದೇ. ನಾನು ನಿಮ್ಮನ್ನು ಗ್ಲಾಮರ್‌ಗೋಸ್ಕರ ತೆಗೆದುಕೊಂಡಿಲ್ಲ. ಇದು ನಿಮ್ಮ ಮೇಲೆ ನಡೆಯೋ ಸಿನಿಮಾ. ಮೇಕಪ್, ಔಟ್‌ಫಿಟ್ಸ್ ಹೀಗೆ ವೆರೈಟಿ ಎಲ್ಲಾ ಬೇಡ. ನಿಮ್ಮ ವೆರೈಟಿ ಏನಿದ್ದರೂ ಆಕ್ಟಿಂಗ್‌ನಲ್ಲಿ ಇರಬೇಕು ಅಂತ ಹೇಳಿದ್ದರು. ಹೀರೋಯಿನ್ ಅಂದ ಕೂಡಲೇ ಬ್ಯೂಟಿ ಶಾಟ್ಸ್ ಆಗಿರಬಹುದು, ಇಂಟ್ರುಡಕ್ಷನ್ ಶಾಟ್ಸ್, ಬಿಲ್ಡಪ್ ಈತರ ಎಲ್ಲಾ ಇರೋದು. ಇಲ್ಲಿ ನಿಮಗೆ ಯಾವುದೂ ಇರೋದಿಲ್ಲ. ನಾರ್ಮಲ್ ಆಗಿರುತ್ತೆ. ಎಲ್ಲದಕ್ಕೂ ರೆಡಿಯಾಗಿರಿ ಎಂದೇ ಹೇಳಿದ್ದರು." ಎಂದು ದಿಶಾ ನಿರ್ದೇಶಕರ ಮಾತನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ಬಂದ 'ಅಯ್ಯನ ಮನೆ' ವೆಬ್ ಸೀರಿಸ್ ಕೂಡ ಓಟಿಟಿ ವೇದಿಕೆಗಳಲ್ಲಿ ಸದ್ದು ಮಾಡಿದೆ. ಈ ಮೂಲಕ ಇನ್ನೊಂದಿಷ್ಟು ವೆಬ್ ಸೀರಿಸ್‌ಗಳು ಹೆಚ್ಚಾಗುವ ಸಾಧ್ಯತೆಯಿದೆ. "ರಮೇಶ್ ಇಂದಿರಾ ಸರ್ ಒಂದು ಪ್ರಾಜೆಕ್ಟ್‌ಗೆ ಕಾಲ್ ಮಾಡಿದ್ದರು. ಆದರೆ, ವರ್ಕ್‌ಔಟ್ ಆಗಲಿಲ್ಲ. ಅದು ಅಯ್ಯನ ಮನೆ ಅಲ್ಲ ಬೇರೆ ಪ್ರಾಜೆಕ್ಟ್. ಆ ಟೈಮ್‌ನಲ್ಲಿ ನಾನು ಸ್ವಲ್ಪ ಬ್ಯುಸಿಯಾಗಿದ್ದೆ. ರಮೇಶ್ ಸರ್ ಹತ್ತಿರ ಮಾತಾಡುವುದಕ್ಕೆ ಆಗಲಿಲ್ಲ. ಆಮೇಲೆ 3 ತಿಂಗಳಾದ್ಮೇಲೆ ರಮೇಶ್ ಇಂದಿರಾ ಸರ್ ಅವರಿಂದಲೇ ಫೋನ್ ಬಂತು. ಒಂದು ಪ್ರಾಜೆಕ್ಟ್ ಬಗ್ಗೆ ಮೀಟ್ ಮಾಡಬೇಕು ಅಂತ ಹೇಳಿದ್ದರು. ಆಗ ನನಗೆ ವೆಬ್ ಸೀರಿಸ್ ಅಂತೇನು ಹೇಳಿರಲಿಲ್ಲ. ಒಂದು ಕಥೆ ಹೇಳುತ್ತೀನಿ ಅಂತ ಹೇಳಿದ್ದರು. ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು." ಎಂದು ಅಯ್ಯನ ಮನೆ ಪ್ರಾಜೆಕ್ಟ್ ಬಗ್ಗೆ ಮೆಚ್ಚುಗೆ ಖುಷಿ ವ್ಯಕ್ತ ಪಡಿಸಿದ್ದಾರೆ.
ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನಟಿಸಿ, ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಆದರೆ, ಈಗಾಗಲೇ ಇವರಿಗೆ ಮದುವೆ ಆಗಿದೆ. ಮಗು ಇದೆ ಅನ್ನೋ ಕಾರಣಕ್ಕೆ ಬಿಗ್ ಆಫರ್‌ಗಳು ಕನ್ನಡದಲ್ಲಿ ಬರುತ್ತಿಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಆಫರ್‌ಗಳು ಬರುತ್ತಿವೆ ಎಂದು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ನನಗೆ ದೊಡ್ಡ ದೊಡ್ಡ ಅವಕಾಶಗಳು ಬರುತ್ತೋ? ಇಲ್ಲವೋ ಗೊತ್ತಿಲ್ಲ. ಒಂದು ದೊಡ್ಡ ಪ್ರಾಜೆಕ್ಟ್ ಸಂಭಾವನೆವರೆಗೂ ಬಂದು ಕೆಲವೊಂದು ನಿಂತು ಹೋಗಿದೆ. ಪರವಾಗಿಲ್ಲ ನಾನು ಇದರಲ್ಲೇ ಖುಷಿಯಾಗಿದ್ದೇನೆ. ಬೇಜಾರು ಏನಾಗುತ್ತೆ ಅಂದರೆ, ನೀನು ಎಷ್ಟು ಒಳ್ಳೆಯ ನಟಿ ಅಂತಾರೆ. ಆದರೆ, ಅವಕಾಶಗಳು ನನಗೆ ಬೇಕಿರುವ ಕಡೆಯಿಂದ ಬಂದೇ ಇರೋದಿಲ್ಲ. ಒಳ್ಳೆಯ ಆಕ್ಟರ್ ಅಂತ ಹೇಳುವುದು ಒಳ್ಳೆಯದಲ್ಲ. ಅದೇ ರೀತಿಯ ಅವಕಾಶಗಳು ಸಿಗಬೇಕು. ಆಗ ಇನ್ನೂ ಖುಷಿಯಾಗುತ್ತೆ." ಎನ್ನುತ್ತಾರೆ ಖುಷಿ ರವಿ.
"ಅಯ್ಯನ ಮನೆ ಆದಲ್ಲಿಂದ ಬೇರೆ ಭಾಷೆಯಿಂದ ಕಾಲ್‌ಗಳು ಬರುತ್ತಿವೆಯೇ ಹೊರತು. ಕನ್ನಡದಿಂದ ಬರುತ್ತಿಲ್ಲ. ಇದು ತುಂಬಾನೇ ನೋವಿನ ಸಂಗತಿ. ನನಗೆ ಕನ್ನಡ ಸಿನಿಮಾ ಮಾಡಬೇಕು ಅಂತ ಆಸೆ. ಆದರೆ, ಅವಕಾಶಗಳು ಸಿಗುತ್ತಿಲ್ಲ. ನಮ್ಮಲ್ಲಿ ಒಳ್ಳೊಳ್ಳೆ ಆಕ್ಟರ್‌ಗಳು ಇದ್ದಾರೆ. ಅವರೆಲ್ಲರನ್ನೂ ಗುರುತಿಸಿ, ಅವರಿಗೆ ಒಳ್ಳೆಯ ಅವಕಾಶ ಕೊಡಬೇಕು. ಬೇರೆ ಕಡೆಯಿಂದ ಅವಕಾಶ ಬಂದಾಗ, ನಮಗೆ ಒಂದು ಕಡೆ ಡೌಟ್ ಬಂದು ಬಿಡುತ್ತೆ. ನಮ್ಮ ಕನ್ನಡ ಚಿತ್ರರಂಗದಿಂದ ಯಾಕೆ ಅವಕಾಶ ಬರುತ್ತಿಲ್ಲ? ನನ್ನಲ್ಲಿ ಏನಾದರೂ ಸಮಸ್ಯೆ ಇದೆಯೇ ಅಂತ ಅನಿಸುವುದಕ್ಕೆ ಶುರುವಾಗುತ್ತೆ." ಎಂದು ನಟಿ ಖುಷಿ ರವಿ ಈ ಸಂದರ್ಶನದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹಾಗೇ ಇದೇ ಸಂದರ್ಶನದಲ್ಲಿ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಈ ವರ್ಷ ನನ್ನ ನಾಲ್ಕು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಎರಡು ಮೂರು ಕಂಟೆಂಟ್ ಅಂತೂ ಸಖತ್ ಆಗಿದೆ. ಇನ್ನೊಂದು ಬೇರೆ ಭಾಷೆಯಲ್ಲಿ ಮಾತುಕತೆ ನಡೆಯುತ್ತಿದೆ. ಕನ್ಫರ್ಮ್ ಆಗುವ ಸಾಧ್ಯತೆಯಿದೆ. ಅಯ್ಯನ ಮನೆಯಿಂದ ಎಲ್ಲರೂ ಜಾಜಿ ಅಂತ ಕರೆಯುತ್ತಿದ್ದಾರೆ. ಅದು ನನ್ನ ಜೀವನದಲ್ಲಿ ಅತೀ ಖುಷಿ ಕೊಟ್ಟಿದೆ. ಎಲ್ಲರೂ ದಿಯಾ ಅಂತಾನೇ ಹೇಳ್ತಾರೆ. ಅದು ಬಿಟ್ಟು ಜಾಜಿ ಅಂತಲೂ ಬಂದಿದೆಯಲ್ಲ ನನಗೆ ತುಂಬಾ ತೃಪ್ತಿ ಕೊಟ್ಟಿದೆ." ಎಂದು ಇತ್ತೀಚೆಗೆ ತಮ್ಮ ವೆಬ್ ಸೀರಿಸ್ ಭಾರೀ ಯಶಸ್ಸು ಕಂಡಿದ್ದಕ್ಕೆ ಖುಷಿ ರವಿ ಖುಷಿ ಪಟ್ಟಿದ್ದಾರೆ.


Click it and Unblock the Notifications











