ಚಿತ್ರಮಂದಿರದ ಮಾಲೀಕರಿಗೆ ಕನ್ನಡ ಭಾಷೆಗಿಂತ ಹಣವೇ ಹೆಚ್ಚಾಗಿ ಹೋಯ್ತಾ? ಚೇಂಬರ್ ಸೈಲೆಂಟ್.. 'ವಿಕ್ಟರಿ' ಯಾರಿಗೆ?
ಕಮಲ್ ಹಾಸನ್ ಅಂತಹ ಜನಪ್ರಿಯ ನಟ ಕೊಟ್ಟ ಒಂದು ಹೇಳಿಕೆ ಕನ್ನಡಿಗರು ತಿರುಗಿಬೀಳುವಂತೆ ಮಾಡಿದೆ. ಕರ್ನಾಟಕದಲ್ಲಿ ಕಮಲ್ ಹಾಸನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ. ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಅಂತ ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದು ಕೂತಿವೆ. ಸೆಲೆಬ್ರೆಟಿಗಳು, ರಾಜಕೀಯ ಮುಖಂಡರ ಕಣ್ಣುಗಳು ಕೆಂಪಾಗಿವೆ.
ಇತ್ತ ಕಮಲ್ ಹಾಸನ್ ಮೊಂಡುತನವನ್ನು ಮುಂದುವರೆಸಿದ್ದಾರೆ. ತಣ್ಣಗಿದ್ದ ಕನ್ನಡಿಗರನ್ನು ಸಿಟ್ಟಿಗೆಬ್ಬಿಸಿ ಕಮಲ್ ಹಾಸನ್ ಮೊಂಡುವಾದ ಮಾಡುತ್ತಿದ್ದಾರೆ. ಪ್ರೀತಿಯಿಂದ ಹೇಳಿದ್ದಕ್ಕೆ ಕ್ಷಮೆ ಕೇಳುವ ಮಾತೇ ಇಲ್ಲ ಎಂದಿದ್ದಾರೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಹೀಗಾಗಿ ಕರ್ನಾಟಕದಲ್ಲಿ 'ಥಗ್ ಲೈಫ್' ರಿಲೀಸ್ ಆಗುತ್ತಾ? ಕನ್ನಡಿಗರಿಗೆ ನ್ಯಾಯ ಸಿಗುತ್ತಾ? ಎನ್ನುವ ಪ್ರಶ್ನೆ ಎದ್ದಿದೆ.

ಒಂದ್ಕಡೆ ಕನ್ನಡದ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು ಒಗ್ಗಟ್ಟಾಗಿ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಅಂತ ಒತ್ತಡ ಹಾಕಿದ್ದಾರೆ. ಇನ್ನೊಂದು ಕಡೆ ಕನ್ನಡ ಪರ ಸಂಘಟನೆಗಳು 'ಥಗ್ ಲೈಫ್' ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದೆ. ಕಮಲ್ ಹಾಸನ್ ಕ್ಷಮೆ ಕೇಳುವವರೆಗೂ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕೆಲವು ಕನ್ನಡ ಚಿತ್ರಮಂದಿರದ ಮಾಲೀಕರು 'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಕೆಲವು ಚಿತ್ರಮಂದಿರದ ಮಾಲೀಕರು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ. ಅಂತಹ ಚಿತ್ರಮಂದಿರಗಳು ಯಾವುವು? ಕನ್ನಡ ಭಾಷೆಗಿಂತ ಹೆಚ್ಚಾಗಿ ಹಣವೇ ಹೆಚ್ಚಾಯ್ತೇ?
"ತಮಿಳಿನಿಂದಲೇ ಕನ್ನಡ ಹುಟ್ಟಿದ್ದು" ಕಮಲ್ ಹಾಸನ್ ನೀಡಿದ ಈ ಹೇಳಿಕೆ ಕನ್ನಡಿಗರ ಪಿತ್ತವನ್ನು ನೆತ್ತಿಗೇರಿಸಿದೆ. ಭಾಷೆಯ ಉಗಮದ ಜ್ಞಾನವೇ ಇಲ್ಲದೆ ಕಮಲ್ ಹಾಸನ್ ಕೊಟ್ಟ ಹೇಳಿಕೆಗಳನ್ನು ಎಲ್ಲಾ ಕಡೆ ಖಂಡಿಸಲಾಗುತ್ತಿದೆ. ಕನ್ನಡ ಭಾಷೆಯ ವಿಷಯಕ್ಕೆ ಬಂದರೆ, ಎಲ್ಲರೂ ಒಂದಾಗಬೇಕು ಎಂಬ ಕೂಗು ಮೊಳಗಿರುವಾಗಲೇ ಕನ್ನಡದ ಕೆಲವು ಚಿತ್ರಮಂದಿರದ ಮಾಲೀಕರು ಮಾತ್ರ 'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡಿಯೇ ಮಾಡುತ್ತೇವೆ ಎಂದು ನಿಂತಿವೆ.
'ಥಗ್ ಲೈಫ್' ಸಿನಿಮಾ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿರುವ ಚಿತ್ರಮಂದಿರಗಳಲ್ಲಿ 'ವಿಕ್ಟರಿ ಸಿನಿಮಾಸ್' ಕೂಡ ಒಂದು. ಈ ಚಿತ್ರಮಂದಿರ ಅಧಿಕೃತವಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. "ಒಂದೇ ಹೃದಯ, ಒಂದೇ ಕನಸು, ಒಂದೇ ಭಾವನೆ" ಅಂತ ಟ್ಯಾಗ್ ಲೈನ್ ಕೊಟ್ಟು ಪೋಸ್ಟ್ ಮಾಡಲಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಈ ಬೆನ್ನೆಲ್ಲೇ ಥಿಯೇಟರ್ ಮಾಲೀಕರು ವರಸೆ ಬದಲಿಸಿ, ಸಿನಿಮಾ ರಿಲೀಸ್ ಆದರೆ ಮಾತ್ರ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತೆ ಎಂದಿದ್ದಾರೆ.
ಆದರೆ, ಇನ್‌ಸೈಡ್ ಸ್ಟೋರಿ ಬೇರೆನೇ ಇದೆ. ಈಗಾಗಲೇ ಸುಮಾರು 137 ಚಿತ್ರಮಂದಿರಗಳು 'ಥಗ್ಸ್ ಲೈಫ್' ಪ್ರದರ್ಶನ ಮಾಡುವುದಕ್ಕೆ ಮುಂದಾಗಿದ್ದಾರಂತೆ. ಕಮಲ್ ಹಾಸನ್ ವಿವಾದದ ನಡುವೇ ಕರ್ನಾಟಕದಾದ್ಯಂತ ರಿಲೀಸ್ ಮಾಡುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ವಿಕ್ಟರಿ ಸೇರಿದಂತೆ ಸಂಪಿಗೆ, ಮುಕುಂದ, ಪುಷ್ಪಾಂಜಲಿ, ತಾವರೆಕರೆ ಲಕ್ಷ್ಮಿ, ಸಂಧ್ಯಾ,ಮಂಡ್ಯ ಮಹಾವೀರ್, ಮೈಸೂರಿನ ವುಡ್‌ಲ್ಯಾಂಡ್‌ಗಳಲ್ಲಿ ರಿಲೀಸ್ ಆಗಲಿದೆ ಎಂದು ವಿತರಕರೊಬ್ಬರು ಹೇಳುತ್ತಾರೆ.
ಇನ್ನು 'ಥಗ್ ಲೈಫ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಾಳೆಯಿಂದ (ಜೂನ್ 1) ಆರಂಭ ಆಗುತ್ತಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಹೀಗಾಗಿ ಯಾವ್ಯಾವ ಚಿತ್ರಮಂದಿರಗಳು 'ಥಗ್ ಲೈಫ್' ಸಿನಿಮಾ ಅಡ್ವಾನ್ಸ್ ಬುಕಿಂಗ್‌ಗೆ ಮುಂದಾಗುತ್ತವೆ ಅನ್ನೋದು ಮುಂದಿನ ದಿನಗಲ್ಲಿ ಗೊತ್ತಾಗಲಿದೆ. ಆದರೆ, ಕಮಲ್ ಹಾಸನ್ ಕ್ಷಮೆ ಕೇಳದೆ ಇದ್ದರೂ ಕನ್ನಡದ ಚಿತ್ರಮಂದಿರದ ಮಾಲೀಕರು ಸಿನಿಮಾ ರಿಲೀಸ್ ಮಾಡುತ್ತಾರಾ? ಎನ್ನುವ ಪ್ರಶ್ನೆನೂ ಎದ್ದಿದೆ.


Click it and Unblock the Notifications











