ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
ಹೆಚ್ಚು ಕಡಿಮೆ ಒಂದೂವರೆ ವರ್ಷಗಳ ಹಿಂದೆ ಸ್ಯಾಂಡಲ್‌ವುಡ್ ನಟಿ ರಿಷಿಕಾ ಸಿಂಗ್ ಭೀಕರ ಅಪಘಾತಕ್ಕೆ ಸಿಲುಕಿದ್ದರು. ಇವರು ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟ ಆದಿತ್ಯ ಅವರ ಸಹೋದರಿ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ, ಜನರ ಮನಗೆದ್ದಿದ್ದರು.
2020 ಜುಲೈ 30ರ ಬೆಳ್ಳಬೆಳ್ಳಗೆ ಕಾರು ಅಪಘಾತಕ್ಕೆ ಸಿಲುಕಿದ್ದರು. ರಿಷಿಕಾ ಸಿಂಗ್ ಹಾಗೂ ಗೆಳತಿ ಅರ್ಪಿತಾ ಇಬ್ಬರು ಗೆಳಯರೊಂದಿಗೆ ಸಣ್ಣ ಪಾರ್ಟಿ ಮಾಡಿ ಹಿಂತಿರುಗುತ್ತಿದ್ದರು. ವೈಟ್‌ಫಿಲ್ಡ್ ಸಮೀಪ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಗಂಭೀರ ಗಾಯಗೊಂಡಿದ್ದ ನಟಿಯ ಬೆನ್ನು ಹುರಿಗೆ ಪೆಟ್ಟು ಬಿದ್ದಿತ್ತು.
ರಿಷಿಕಾ ಸಿಂಗ್ ಎದ್ದು ಓಡಾಡಲೂ ಆಗದ ಸ್ಥಿತಿಯಲ್ಲಿ ಇದ್ದರು. ಆದರೆ, ಅಪಘಾತದ ಬಳಿಕ ರಿಷಿಕಾ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ, ಒಂದೂವರೆ ವರ್ಷದ ಬಳಿಕ ರಿಷಿಕಾ ಸಿಂಗ್ ಹೇಗೆ ಹಂತ ಹಂತವಾಗಿ ಈ ಕಷ್ಟದಿಂದ ಎದ್ದು ಬಂದರು ಅನ್ನೋದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಆ ವಿಡಿಯೋ ಎಂತಹವರ ಮನವನ್ನೂ ಒಮ್ಮೆ ಕಲುಕುತ್ತೆ.

ಒಂದೂವರೆ ವರ್ಷದ ಹಿಂದೆ ರಿಷಿಕಾ ಸಿಂಗ್
ಅಪಘಾತದಲ್ಲಿ ಬೆನ್ನು ಹುರಿ ಮುರಿದ್ದರಿಂದ ರಿಷಿಕಾ ಸಿಂಗ್ ಎದ್ದು ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಬೆಂಗಳೂರಿನ ಸಕ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಅಪಘಾತವಾದ ಮೊದಲೆರಡು ತಿಂಗಳು ಸ್ಥಿತಿ ಗಂಭೀರ ಅಂತಲೇ ಹೇಳಲಾಗುತ್ತಿತ್ತು. ಸದ್ಯ ರಿಷಿಕಾ ಸಿಂಗ್ ಒಂದೂವರೆ ವರ್ಷಗಳ ಕಾಲ ಕಷ್ಟಗಳನ್ನು ಎದುರಿಸಿ, ನಿಧಾನವಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವುದನ್ನು ಅಭ್ಯಾಸ ಮಾಡುತ್ತಿದ್ದಾರೆ. ಇಷ್ಟು ದಿನದ ಆ ಕಷ್ಟದ ದಿನಗಳನ್ನು ವಿಡಿಯೋ ಮೂಲಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಇದು ನನ್ನ ಚಿಕ್ಕ ಸ್ಟೋರಿ'
ರಿಷಿಕಾ ಸಿಂಗ್ ಬೆನ್ನಿಗೆ, ಎದೆಯ ಭಾಗಕ್ಕೆ ಏಟು ಬಿದ್ದಿತ್ತು. ಅವರೇ ಹೇಳಿಕೊಂಡಿರುವಂತೆ ಅವರ ಬೆನ್ನಿಗೆ ಟಿಟಾನಿಯಂ ಅಳವಡಿಸಿದ್ದು, ಐರನ್ ವುಮನ್ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರಿಗೆ ಆದ ಗಾಯದಿಂದ ಹಿಡಿದು ವಾಕಿಂಗ್ ಸ್ಟಿಕ್‌ಗಳ ಸಹಾಯದಿಂದ ನಡೆದಾಡುವವರೆಗಿನ ಫೋಟೊಗಳು ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋಗೆ ಅವರ ಅಭಿಮಾನಿಗಳಿಂದ ಹಾಗು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವೈದ್ಯರಿಗೆ ರಿಷಿಕಾ ಸಿಂಗ್ ಧನ್ಯವಾದ
ರಿಷಿಕಾ ಸಿಂಗ್ ಈ ವಿಡಿಯೋವನ್ನು ಹಂಚಿಕೊಂಡಿದ್ದಕ್ಕೆ ಒಂದು ಕಾರಣವಿದೆ. ಕಳೆದ ಒಂದೂವರೆ ವರ್ಷದಿಂದ ಚೇತರಿಸಿಕೊಂಡಿರೋ ನಟಿ ಎದ್ದು ಓಡಾಡುವಂತಾಗಿದೆ. ಅಲ್ಲದೆ ಈ ಹಂತಕ್ಕೆ ಬರಲು ಸಹಕರಿಸಿದ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ವೈದ್ಯ ನಾರಾಯಣೋ ಹರಿ ಎನ್ನುವಂತೆ ನನ್ನ ಬೆನ್ನಿಗೆ ಟಿಟಾನಿಯಂ ಅವಡಿಸಿರುವ ಐರನ್ ಮಹಿಳೆಯನ್ನಾಗಿ ಮಾಡಿರುವ ಸರ್ಜನ್ ಡಾ.ಕಿರಣ್ ಚೌಕ ಅವರಿಗೆ ಧನ್ಯವಾದ. ಹಾಗೇ ಸಾಕ್ರ ಆಸ್ಪತ್ರೆಯ ಡಾ.ಮಹೇಶ್ವರಪ್ಪ, ಮಾನಸ ಅವರಿಗೂ ಧನ್ಯವಾದ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬವೇ ನನ್ನ ಬ್ಯಾಕ್ ಬೋನ್
ವೈದ್ಯರೊಂದಿಗೆ ತನ್ನ ಕುಟುಂಬವೇ ನನ್ನ ಬ್ಯಾಕ್ ಬೋನ್ ಎಂದು ಬರೆದುಕೊಂಡಿದ್ದಾರೆ. ಇವರೊಂದಿಗೆ ಕೇರ್‌ಟೇಕರ್, ಪಿಸಿಯೋ ಥೆರಪಿಸ್ಟ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸುವುದನ್ನೂ ಮರೆತ್ತಿಲ್ಲ. ಇನ್ನೇನು ಕಥೆ ಮುಗೀತು ಅನ್ನುವಾಗಲೇ ಮತ್ತೆ ಗೆದ್ದಿರೋ ರಿಷಿಕಾ ಸಿಂಗ್ ಹೋರಾಟಕ್ಕೆ ಗೆಲುವು ಸಿಕ್ಕಿದೆ. ರಿಷಿಕಾ ಸಿಂಗ್ ಮತ್ತೆ ಎದ್ದು ಓಡಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ, ಎಂತಹವರ ಮನಸ್ಸು ಕೂಡ ಕರಗುತ್ತೆ.


Click it and Unblock the Notifications











