ಕೆ.ಮಂಜು ಪುತ್ರ ಶ್ರೇಯಸ್ ಮಂಜು ಕಾರಿಗೆ ಅಪಘಾತ; ವಿಷ್ಣುಪ್ರಿಯಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಘಟನೆ
ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ನಟಿಸಿರುವ 'ವಿಷ್ಣು ಪ್ರಿಯಾ' ನಾಳೆ (ಫೆಬ್ರವರಿ 21) ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ದಾವಣಗೆರೆ ಕೊನೆಯ ಹಂತದ ಪ್ರಚಾರದಲ್ಲಿ ಭಾಗಿಯಾಗುವುದಕ್ಕೆ ತೆರಳುತ್ತಿದ್ದರು. ಈ ವೇಳೆ ತುಮಕೂರಿನ ಸಮೀಪ ಶ್ರೇಯಸ್ ಮಂಜು ಕಾರು ಅಪಘಾತವಾಗಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಅದೃಷ್ಟವಶಾತ್ ಶ್ರೇಯಸ್ ಮಂಜುಗೆ ಯಾವುದೇ ರೀತಿ ತೊಂದರೆಯಾಗಿಲ್ಲ. ಕೇವಲ ಕಾರಿಗಷ್ಟೇ ಹಾನಿಯಾಗಿದೆ. ತುಮಕೂರಿನ ಶಿರಾ ಸಮೀಪ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತ ಸಂಭವಿಸುವ ವೇಳೆ ಶ್ರೇಯಸ್ ಮಂಜು ಅವರೇ ಸ್ವತ: ತಮ್ಮ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ.

ಕೆ.ಮಂಜು ಪುತ್ರ ಶ್ರೇಯಸ್ ಮಂಜು ತಮ್ಮ 'ವಿಷ್ಣು ಪ್ರಿಯಾ' ಸಿನಿಮಾ ಪ್ರಚಾರಕ್ಕೆಂದು ತೆರಳುತ್ತಿದ್ದರು. ಈ ವೇಳೆ ಕಾರಿನ ಎಡಭಾಗಕ್ಕೆ ಲಾರಿ ಬಂದು ಗುದ್ದಿದೆ. ಈ ವೇಳೆ ಕಾರು ಜಖಂಗೊಂಡಿದೆ. ಈ ಘಟನೆಯಲ್ಲಿ ಕಾರಿಗಷ್ಟೇ ಹಾನಿಯಾಗಿದ್ದು ಶ್ರೇಯಸ್ ಮಂಜು ಅಪಾಯದಿಂದ ಪಾರಾಗಾಗಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಬಂದು ವಿಚಾರಣೆ ನಡೆಸಿ ಅಪಘಾತ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಇನ್ನು ಸಿನಿಮಾ ಕಡೆಗೆ ಬರೋದಾರೆ, 'ವಿಷ್ಣು ಪ್ರಿಯಾ' ಶ್ರೇಯಸ್ ಮಂಜು ನಟಿಸಿರುವ ಮೂರನೇ ಪ್ರಾಜೆಕ್ಟ್. ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ಇಡೀ ತಂಡ ನಿರತವಾಗಿದೆ. ಕೆ. ಮಂಜು ತಮ್ಮ ಪುತ್ರನ ಸಿನಿಮಾವನ್ನು ಹೇಗಾದರೂ ಮಾಡಿ ಹಿಟ್ ಮಾಡಿಸಲೇಬೇಕು ಅಂತ ನಿರ್ಧರಿಸಿದ್ದಾರೆ. ಹೀಗಾಗಿ ಬಿಡುವಿಲ್ಲ ಪ್ರಚಾರದಲ್ಲಿ ಕೆ.ಮಂಜು ಸೇರಿದಂತೆ ಶ್ರೇಯಸ್ ಮಂಜು ಭಾಗಿಯಾಗಿದ್ದಾರೆ.
ಕಣ್ಸನ್ನೆ ಮೂಲಕ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದ ಮಲಯಾಳಿ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಸಿನಿಮಾದ ನಾಯಕಿ. ಶ್ರೇಯಸ್ ಮಂಜು ಜೊತೆ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಸಿನಿಮಾ ಪ್ರಚಾರದಲ್ಲಿ ಮಾಡುತ್ತಿದ್ದಾರೆ. ಇದೊಂದು ಬ್ಯೂಟಿಫುಲ್ ಲವ್ ಸ್ಟೋರಿ ಅಂತ 'ವಿಷ್ಣು ಪ್ರಿಯಾ' ಸಿನಿಮಾ ತಂಡವೇ ಹೇಳಿಕೊಂಡಿದೆ. ಮಲಯಾಳಂ ನಿರ್ದೇಶಕ ಕೆವಿ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಟ್ರೆಂಡ್ ಸೆಟ್ ಮಾಡಬಹುದಾ? ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ.
'ವಿಷ್ಣು ಪ್ರಿಯಾ' ಕನ್ನಡ ಚಿತ್ರರಂಗದ ಮಟ್ಟಿಗೆ ವಿಶಿಷ್ಟ ಪ್ರೇಮಕತೆ ಆಗಬಹುದು ಎಂಬ ನಿರೀಕ್ಷೆಯಿದೆ. 90 ದಶದಲ್ಲಿ ನಡೆಯುವ ಈ ಲವ್ ಸ್ಟೋರಿ ಶ್ರೇಯಸ್ ಮಂಜುಗೆ ಬ್ರೇಕ್ ಕೊಡುತ್ತಾ? ಅನ್ನೋ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಅಂದ್ಹಾಗೆ ವಿ.ಕೆ. ಪ್ರಕಾಶ್ ಈಗಾಗಲೇ ಮಲಯಾಳಂ, ತೆಲುಗು, ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದಾರೆ. ಈಗ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದು, ಇವರಿಂದ ಶ್ರೇಯಸ್ ಮಂಜುಗೊಂದು ಲೈಫ್ ಸಿಗುತ್ತಾ? ಅನ್ನೋದು ನೋಡಬೇಕಿದೆ.
ಇನ್ನು ಪ್ರಿಯಾ ವಾರಿಯರ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಈ ನಟಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಾರಾ? ಅವರಿಗೆ ಇಲ್ಲೂ ಒಂದು ಬ್ರೇಕ್ ಸಿಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಈ ಸಿನಿಮಾ ಕೆ.ಮಂಜು ನಿರ್ಮಾಣ ಮಾಡುತ್ತಿರುವ 48ನೇ ಸಿನಿಮಾ. ಹೀಗಾಗಿ ಗಂಡುಗಲಿ ಕೆ. ಮಂಜು ಕೂಡ ಬಹಳಷ್ಟು ಪ್ರಚಾರ ಮಾಡುತ್ತಿದ್ದಾರೆ.


Click it and Unblock the Notifications











