"ಕನ್ನಡಿಗರಿಗೆ ಎಂದೂ ಸೋಲು ದಕ್ಕಬಾರದು, ವಿಜಯನೇ ಪ್ರಾಪ್ತಿಯಾಗಬೇಕು"; ಕಮಲ್ ವಿರುದ್ಧ ವಿನೋದ್ ರಾಜ್ ರೋಷಾಗ್ನಿ
ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಅವರ ಒಂದೇ ಒಂದು ಹೇಳಿಕೆ ವಿವಾದವನ್ನು ಹುಟ್ಟಾಕಿದೆ. ಮತ್ತೆ ತಮಿಳರು ಹಾಗೂ ಕನ್ನಡಿಗರ ನಡುವೆ ವೈಮನಸ್ಸನ್ನು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಕಮಲ್ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಕ್ಷಮೆ ಕೇಳುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದೆ. ಕನ್ನಡ ಚಿತ್ರರಂಗದ ಗಣ್ಯರು ಒಬ್ಬೊಬ್ಬರಾಗಿಯೇ ನಟನ ವಿರುದ್ಧ ತಿರುಗಿಬೀಳುತ್ತಿದ್ದಾರೆ.
ಈಗಾಗಲೇ ಕನ್ನಡದ ಕಲಾವಿದರು ಕೂಡ ಕಮಲ್ ಹಾಸನ್‌ಗೆ ತಿರುಗೇಟು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇಷ್ಟೆಲ್ಲ ವಿರೋಧ ವ್ಯಕ್ತವಾಗುತ್ತಿದ್ದರೂ, ಕಮಲ್ ಹಾಸನ್ ತಮ್ಮ ಹೇಳಿಕೆಯನ್ನು ತಪ್ಪು ಎಂದು ಒಪ್ಪಿಕೊಳ್ಳುತ್ತಿಲ್ಲ. ಕನ್ನಡಿಗರ ಕ್ಷಮೆ ಕೇಳುತ್ತಿಲ್ಲ ಎಂದು ಹೇಳುವ ಮೂಲಕ ಮತ್ತೆ ಮೊಂಡುತನವನ್ನು ತೋರಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಇನ್ನೊಂದು ಆಯಾಮದಲ್ಲಿ ಚರ್ಚೆನೂ ಶುರುವಾಗಿದೆ.

ಕಮಲ್ ಹಾಸನ್ ವಿರುದ್ಧ ಹಂಸಲೇಖ, ಮುಖ್ಯಮಂತ್ರಿ ಚಂದ್ರು, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್ ಅಂತಹ ದಿಗ್ಗಜರು ಈಗಾಗಲೇ ತಿರುಗೇಟು ಕೊಟ್ಟಿದ್ದಾರೆ. ಈಗ ಮತ್ತೊಬ್ಬ ಹಿರಿಯ ನಟ ವಿನೋದ್ ರಾಜ್ ಕೂಡ ಪ್ರತಿಕ್ರಿಯಿಸಿದ್ದಾರೆ. ಇವರ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡಿಗರಿಗೆ ಸೋಲು ಆಗಬಾರದು, ಗೆಲುವೇ ಸಿಗಬೇಕು ಎಂದು ಆ ವಿಡಿಯೋದಲ್ಲಿ ಹೇಳಿದ್ದಾರೆ.
ಕನ್ನಡ ನಾಡು, ಭಾಷೆ, ಜಲ ಅಂತ ಬಂದಾಗ ಸಿನಿಮಾ ಕಲಾವಿದರು ಅಖಾಡಕ್ಕೆ ಇಳಿಯುತ್ತಾರೆ. ಈ ಬಾರಿ ಕೂಡ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಈಗಾಗಲೇ ಕಮಲ್ ಹಾಸನ್ ವಿರುದ್ಧ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರ ಸಾಲಿನಲ್ಲಿ ವಿನೋದ್ ರಾಜ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವಿನೋದ್ ರಾಜ್ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ.
"ನಾವು ಹೋರಾಡಿದ್ದಕ್ಕೆ ಇವತ್ತು ಕಲಾವಿದರಾಗಿರೋದು. ಇಂತಹದ್ದೊಂದು ಪರಿಸ್ಥಿತಿ ಬಂದಾಗ, ನನ್ನ ಅನಿಸಿಕೆ ಏನಿದೆ ಎಂದರೆ, ಸಮಸ್ತ ಕನ್ನಡಿಗರ ಭಾವನೆ ಏನಿದೆಯೋ ಅದಕ್ಕೆ ನಾನು ಸ್ಪಂದಿಸಬೇಕು. ನಾನು ಮಾತಾಡುತ್ತಾ ಏನಾದರೂ ತೊದಲು ನುಡಿದಿದ್ದರೆ, ಅದಕ್ಕೂ ಕ್ಷಮೆ ಕೇಳುತ್ತೇನೆ." ಎಂದು ಕನ್ನಡಿಗರ ಭಾವನೆಗೆಳಿಗೆ ವಿನೋದ್ ರಾಜ್ ಸ್ಪಂದಿಸಿದ್ದಾರೆ.

ಇದೇ ಸಮಯದಲ್ಲಿ ಡಾ.ರಾಜ್‌ಕುಮಾರ್, ಸಾಹಿತಿಗಳು ಹಾಗೂ ಹೋರಾಟಗಾರರನ್ನು ನೆನೆದಿದ್ದಾರೆ. "ಅಣ್ಣಾವ್ರು ಹೋಗಿರುವ ದಾರಿ, ಅದಕ್ಕಿಂತ ಹೆಚ್ಚಾಗಿ ಮಹಾನ್ ಹೋರಾಟಗಾರರು, ಮಹಾನ್ ಸಾಹಿತಿಗಳನ್ನು ಗೌರವಿಸುತ್ತಾ, ಈ ಮಣ್ಣಿಗೆ ನಾವು ಬೆಲೆ ಕೊಡುತ್ತಾ, ಈ ಜನತೆಯ ಮಾನ-ಮರ್ಯಾದೆ-ಗೌರವ-ಅಸ್ತಿತ್ವ ಎಲ್ಲವಕ್ಕೂ ನಾವು ಬೆಲೆ ಕೊಡುತ್ತಾ, ಸದಾ ಕಾಲ ನಿಮ್ಮ ಹೋರಾಟಕ್ಕೆ ನಾವು ಕೈ ಜೋಡಿಸುತ್ತಿದ್ದೇವೆ." ಎಂದು ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ವಿಡಿಯೋದಲ್ಲಿ ಎಲ್ಲಿಯೂ ಕಮಲ್ ಹಾಸನ್ ಅವರ ಹೆಸರನ್ನು ತೆಗೆಯದೇ ಇದ್ದರೂ, ಕನ್ನಡಿಗರ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಕನ್ನಡಕ್ಕೆ ಗೆಲುವು ಸಿಗಬೇಕು ಎಂದಿದ್ದಾರೆ. "ಇದರಲ್ಲಿ ಕನ್ನಡಕ್ಕೆ ಒಳ್ಳೆಯ ಯಶಸ್ಸು ಸಿಗಲಿ. ಅದರ ಗೌರವ ಸಿಗಲಿ. ಅದಕ್ಕೆ ಬೆಲೆ ಸಿಗಲಿ. ಭುವನೇಶ್ವರಿ ತಾಯಿಯ ಮುಖದಲ್ಲಿ ಸದಾ ಕಾಲ ಆ ನಗು, ಮಂದಹಾಸ, ಸಂತೋಷ ಯಾವತ್ತೂ ಇರಲಿ ಅಂತ ಈ ಮೂಲಕವಾಗಿ ನಾನು ಹೇಳುತ್ತಾ, ತಾಯಿ ಆಶೀರ್ವಾದ ಕೇಳುತ್ತಾ, ಕನ್ನಡಿಗರಿಗೆ ಎಂದೂ ಸೋಲು ಧಕ್ಕಬಾರದು. ಅವರಿಗೆ ವಿಜಯನೇ ಪ್ರಾಪ್ತಿಯಾಗಬೇಕು." ಎಂದಿದ್ದಾರೆ. ವಿನೋದ್ ರಾಜ್ ಈ ವಿಡಿಯೋಗೆ ನೆಟ್ಟಿಗರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಕಮಲ್ ಹಾಸನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











