Boss: ಇಂದು ಸಂಜೆನೇ 'ಬಾಸ್' ರಿಲೀಸ್; ಹೈಕೋರ್ಟ್ ಅನುಮತಿ
ಕಳೆದ ಕೆಲವು ದಿನಗಳಿಂದ 'ಬಾಸ್' ಸಿನಿಮಾ ವಿಚಾರವಾಗಿ ವಾದ-ವಿವಾದ ನಡೆಯುತ್ತಲೇ ಇತ್ತು. ಈ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ರಿಲೀಸ್ ಆದಲ್ಲಿಂದ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಇಬ್ಬರೂ ಚಿತ್ರತಂಡದ ವಿರುದ್ಧ ಕಾನೂನು ಸಮರ ಸಾರಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಮುಂದೂಡಬೇಕಾಗಿ ಬಂದಿತ್ತು.
ಸುಮಾರು ಒಂದೂವರೆ ತಿಂಗಳಿಂದ 'ಬಾಸ್' ಸಿನಿಮಾ ತಂಡ ಹಾಗೂ ದರ್ಶನ್-ವಿಜಯಲಕ್ಷ್ಮಿ ನಡುವೆ ಕಾನೂನು ಹೋರಾಟ ನಡೆಯುತ್ತಲೇ ಇತ್ತು. ಅದಕ್ಕೀಗ ತೆರೆಬಿದ್ದಿದೆ. ಈ ಸಿನಿಮಾ ಬಿಡುಗಡೆ ತಡೆ ಕೋರಿ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಜುಲೈ 17) ವಜಾಗೊಳಿಸಿದೆ.

'ಬಾಸ್' ಸಿನಿಮಾ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಮಹತ್ವದ ಜಯ ದೊರೆತಿದ್ದು, ನಾಯಕ ನಟ ಹಾಗೂ ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕರಾದ ಲವಾ ವಿ ಖುಷಿ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಅನುಮತಿ ನೀಡಿದ್ದರಿಂದ ಇಂದೇ (ಜುಲೈ 17) ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.
ಕರ್ನಾಟಕ ಹೈಕೋರ್ಟ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಟ-ನಿರ್ಮಾಪಕ ತನುಷ್ ಶಿವಣ್ಣ ಹರ್ಷ ವ್ಯಕ್ತ ಪಡಿಸಿದ್ದಾರೆ. "ನಮ್ಮ ಸಿನಿಮಾದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವ ಧನ್ಯವಾದಗಳು. ಬಾಸ್ ಸಿನಿಮಾಗೆ ನ್ಯಾಯಯುತವಾದ ಗೆಲುವು ಸಿಕ್ಕಿದೆ. ಹೀಗಾಗಿ ಈ ಸಿನಿಮಾ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ" ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತ 'ಬಾಸ್' ಸಿನಿಮಾ ನಿರ್ದೇಶಕ ಲವಾ ವಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. "ಸುಮಾರು ಒಂದೂವರೆ ತಿಂಗಳಿನಿಂದ ನ್ಯಾಯಾಲಯದಲ್ಲಿ ನಿರಂತರ ಕಾನೂನು ಹೋರಾಟ ನಡೆಸಿದ್ದೇವೆ. ಇಂದು ಸತ್ಯ ಮತ್ತು ನ್ಯಾಯಕ್ಕೆ ಜಯ ದೊರಕಿದೆ. ಭಾರತದ ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಮಗೆ ನಂಬಿಕೆ ಬಂದಿದೆ. ನ್ಯಾಯ ಎಲ್ಲರಿಗೂ ಒಂದೇ. ನ್ಯಾಯಾಂಗದ ಮೇಲೆ ನಮ್ಮ ಗೌರವ ಮತ್ತು ವಿಶ್ವಾಸ ಇನ್ನಷ್ಟು ಗಟ್ಟಿಯಾಗಿದೆ. ಭಾರತದ ಕಾನೂನನ್ನು ಗೌರವಿಸೋಣ ಹಾಗೂ ಪ್ರೀತಿಸೋಣ" ಎಂದು ನಿರ್ದೇಶಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ಕಾನೂನು ಹೋರಾಟದಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಆಗಿದೆ ಎಂದು ನಿರ್ದೇಶಕ ಲವಾ ವಿ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಕಾನೂನು ಹೋರಾಟದಿಂದ ನಮ್ಮ ಸಾಕಷ್ಟು ಸಮಯ ವ್ಯರ್ಥವಾಗಿದೆ. ಇದರಿಂದ ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟ ಕೂಡ ಆಗಿದೆ. ಆದರೂ ಯಾರ ಮೇಲೂ ನಮಗೆ ದ್ವೇಷವಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರವೇ ಎಲ್ಲ ಸಂಕಷ್ಟಗಳಿಂದ ಹೊರ ಬರಲಿ, ಅವರಿಗೆ ದೇವರು ಇನ್ನಷ್ಟು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇವೆ. ಯಾರಿಗೂ ಕೆಟ್ಟದನ್ನು ನಾವು ಬಯಸುವುದಿಲ್ಲ" ಎಂದು ನಿರ್ದೇಶಕರು ಆಶಿಸಿದ್ದಾರೆ.
'ಬಾಸ್' ಸಿನಿಮಾ ಬಿಡುಗಡೆಯನ್ನು ತಡೆಯುವ ಉದ್ದೇಶದಿಂದ ಕೆಲವು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಹೀಗಾಗಿ ಸಿನಿಮಾ ವಿರುದ್ಧ ವಿವಾದ ಎದ್ದಿತ್ತು. ಕೋರ್ಟ್, ಕಾನೂನು ಸಮರ ಅಂತ ಹೋರಾಟ ಮಾಡಬೇಕಾಯ್ತು. ಕೊನೆಗೂ ಸತ್ಯ ಗೆದ್ದಿದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. "ನಮ್ಮ ವಿರುದ್ಧ ತಪ್ಪು ಮಾಹಿತಿ ಹರಡಿದವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಈಗ ನಮ್ಮ ಸಂಪೂರ್ಣ ಗಮನ ಪ್ರೇಕ್ಷಕರಿಗೆ ಸಿನಿಮಾ ತಲುಪಿಸುವುದರ ಮೇಲಿದೆ" ಎನ್ನುತ್ತಿದ್ದಾರೆ ನಿರ್ದೇಶಕರು.
ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್‌ಗೆ ಹೈಕೋರ್ಟ್‌ನಲ್ಲಿಯೂ ಹಿನ್ನಡೆಯಾಗಿದೆ. 'ಬಾಸ್' ಟೀಸರ್, ಟ್ರೈಲರ್ ನೋಡಿದ ಬಳಿಕ ಮೇಲ್ನೋಟಕ್ಕೆ ಇದು ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ಕಥೆ ಎನಿಸುತ್ತಿದೆ. ಈಗ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್‌ಗೆ 'ಬಾಸ್' ವಿಚಾರದಲ್ಲೂ ಹಿನ್ನೆಡೆಯಾಗಿದ್ದು ಮುಂದಿನ ನಡೆ ಬಗ್ಗೆಯೇನು ಅನ್ನೋದನ್ನು ಕುತೂಹಲದಿಂದ ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.


Click it and Unblock the Notifications

