"ನೀವು ಕಮಲ್ ಹಾಸನ್ ಆಗಿರಬಹುದು, ಜನರ ಭಾವನೆಗಳಿಗೆ ಧಕ್ಕೆ ಮಾಡುವಂತಿಲ್ಲ"; ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ
ತಮಿಳು ನಟ ಕಮಲ್ ಹಾಸನ್ ವಿವಾದ ಕೊನೆಯ ಹಂತಕ್ಕೆ ಬಂದು ತಲುಪಿದೆ. ವಿವಾದವನ್ನು ಸುಖಾಸುಮ್ಮನೆ ಮೈ ಮೇಲೆ ಎಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ತಮ್ಮ ಸಿನಿಮಾ ಬಿಡುಗಡೆ ವೇಳೆ ಅದರ ಬಗ್ಗೆ ಮಾತಾಡುವ ಬದಲು ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿಕೆ ಕೊಟ್ಟಿದ್ದರು. ಇದು ಕನ್ನಡಿಗರನ್ನು ಕೆಣಕುವಂತೆ ಮಾಡಿತ್ತು. ಈ ಕಾರಣಕ್ಕೆ ಕರ್ನಾಟಕದಲ್ಲಿ 'ಥಗ್ ಲೈಫ್' ಬ್ಯಾನ್ ಮಾಡುವಂತೆ ಕರ್ನಟಕ ಫಿಲ್ಮ್ ಚೇಂಬರ್‌ಗೆ ಒತ್ತಡ ಹೇರಲಾಗಿತ್ತು.
ಕನ್ನಡ ಪರ ಸಂಘಟನೆಗಳು ಫಿಲ್ಮ್ ಚೇಂಬರ್‌ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದರು. ಥಿಯೇಟರ್‌ಗಳಲ್ಲಿ 'ಥಗ್ ಲೈಫ್' ರಿಲೀಸ್ ಆದರೆ, ಸ್ಕ್ರೀನ್‌ಗಳನ್ನು ಸುಟ್ಟು ಹಾಕುತ್ತೇವೆ ಎಂದು ಗದರಿದ್ದರು. ಈ ಸಂಬಂಧ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಜೂನ್ 3) ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ಆರಂಭ ಆಗಿದೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಈ ವೇಳೆ ಕಮಲ್ ಹಾಸನ್ ಅವರ ನಡೆಯನ್ನು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.

ಒಂದು ಕ್ಷಮೆಯಿಂದ ಎಲ್ಲಾ ಸಮಸ್ಯೆ ಮುಗಿದು ಹೋಗುತ್ತಿತ್ತು ಎಂದು ಹೈಕೋರ್ಟ್ ನ್ಯಾಯಾಧೀಶರು ಈ ವೇಳೆ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ, ಕಮಲ್ ಹಾಸನ್ ಇತಿಹಾಸಕಾರರೇ? ಭಾಷಾತಜ್ಞರೇ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೇ ಶಿವರಾಜ್‌ಕುಮಾರ್ ಅವರ ಮೇಲೆ ಅನುಕಂಪವನ್ನು ವ್ಯಕ್ತಪಡಿಸಿದ್ದಾರೆ. ಕಮಲ್ ಪರ ವಕೀಲರಿಗೆ ಸೂಕ್ತ ನಿರ್ಧಾರಕ್ಕೆ ಬರುವಂತೆ ತಿಳಿಸಿದ್ದು, ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
"ಯಾವುದೇ ನಾಗರೀಕರಿಗೆ ಭಾವನೆಗಳಿಗೆ ನೋವುಂಟು ಮಾಡುವ ಹಕ್ಕು ಇಲ್ಲ. ಜಲ, ನೆಲ, ಭಾಷೆ ಈ ಮೂರು ವಿಷಯಗಳು ಪ್ರತಿಯೊಬ್ಬ ನಾಗರೀಕನಿಗೂ ಮುಖ್ಯ. ಪಬ್ಲಿಕ್ ಫಿಗರ್ ಆಗಿದ್ದವರು ಇಂತಹ ಹೇಳಿಕೆ ಕೊಟ್ಟರೆ ಹೇಗೆ. ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿಲ್ಲ. ಅದಕ್ಕೆ ಸಾಕ್ಷಿ ಎಲ್ಲಿದೆ? ಇದರಿಂದಲೇ ಸಾಮರಸ್ಯ ಹಾಳಾಗಿದೆ. ಕರ್ನಾಟಕದ ಜನತೆ ಏನು ಕೇಳಿದ್ದಾರೆ? ಕೇವಲ ಕ್ಷಮೆ ಅಲ್ಲವೇ?" ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ.
ಹಾಗೇ " ಈ ಗೊಂದಲವನ್ನು ಸೃಷ್ಟಿ ಮಾಡಿದವರು ಕಮಲ್ ಹಾಸನ್. ಅವರೇ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಯಾವ ಆಧಾರದ ಮೇಲೆ ಕರ್ನಾಟಕದ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಕಮಲ್ ಹಾಸನ್ ಏನು ಇತಿಹಾಸಕಾರರೇ? ಇಲ್ಲ ಭಾಷಾ ತಜ್ಞರೇ?. ಈಗ ನೀವಿಲ್ಲಿ ಇರುವುದು ವ್ಯಾವಹಾರದ ಆಸಕ್ತಿಯಿಂದ. ನೀವೇ ಸೃಷ್ಟಿಸಿದ ಸನ್ನಿವೇಶಕ್ಕೆ ಪೊಲೀಸರು ರಕ್ಷಣೆ ಕೊಡಬೇಕೆ?" ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಶಿವರಾಜ್‌ಕುಮಾರ್ ಅವರ ಬಗ್ಗೆನೂ ಅನುಕಂಪ ವ್ಯಕ್ತಪಡಿಸಿದ್ದಾರೆ. "ನೀವು ಕೊಟ್ಟ ಹೇಳಿಕೆಗೆ ನೀವು ಕ್ಷಮೆ ಕೇಳುವುದಕ್ಕೆ ಆಗುವುದಿಲ್ಲವೇ? ಇದರಲ್ಲಿ ಶಿವರಾಜ್‌ಕುಮಾರ್ ಅವರ ಹೆಸರು ತಳುಕು ಹಾಕಿಕೊಂಡಿದ್ದಕ್ಕೆ ಅನುಕಂಪವಿದೆ." ಎಂದು ನ್ಯಾಯಮೂರ್ತಿಗಳು ಶಿವಣ್ಣ ಈ ಹೇಳಿಕೆಯಿಂದ ಕನ್ನಡಿಗರ ಟೀಕೆಗೆ ಗುರಿಯಾಗಿದ್ದಕ್ಕೆ ಅನುಕಂಪ ತೋರಿಸಿದ್ದಾರೆ.
ಕಮಲ್ ಹಾಸನ್ ಕೊಟ್ಟ ಹೇಳಿಕೆಯಂತೆಯೇ ದಶಕಗಳ ಹಿಂದೆ ರಾಜಗೋಪಾಲ್ ಆಚಾರ್ಯ ಕೊಟ್ಟ ಹೇಳಿಕೆಯನ್ನು ನ್ಯಾಯಮೂರ್ತಿಗಳು ನೆನೆಪಿಸಿಕೊಂಡಿದ್ದಾರೆ. ಅವರು ಕ್ಷಮೆ ಕೇಳಿದ್ದನ್ನು ಈ ಸಂದರ್ಭದಲ್ಲಿ ಹೇಳಿದ್ದಾರೆ. "ನಾನು ಇತಿಹಾಸವನ್ನು ನೋಡದೆ ಇಂತಹ ಹೇಳಿಕೆಯನ್ನು ಕೊಟ್ಟಿದ್ದೇನೆ?" ಎಂದು ದಶಕಗಳ ಹಿಂದೆ ರಾಜಗೋಪಾಲ್ ಆಚಾರ್ಯ ಹೇಳಿದ್ದರು ಎಂದು ಕಮಲ್ ಪರ ವಕೀಲರಿಗೆ ಹೇಳಿದ್ದಾರೆ.
ಕೊನೆಯಲ್ಲಿ ಕ್ಷಮೆ ಕೇಳುವ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಿ. ನಿಮ್ಮ ಅರ್ಜಿದಾರರಿಗೆ (ಕಮಲ್ ಹಾಸನ್) ಸಲಹೆಯನ್ನು ನೀಡಿ. ಅದಾಗಿಯೂ ನೀವು ಅದೇ ನಿರ್ಧಾರಕ್ಕೆ ಬದ್ಧವಾಗಿದ್ದರೆ, ನಾವು ಉತ್ತರ ಕೊಡುತ್ತೇವೆ. ಮತ್ತೆ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ತೆಗೆದುಕೊಳ್ಳುತ್ತೇನೆ" ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.


Click it and Unblock the Notifications











