"ಬಹುಶ: ಇದೇ ನನ್ನ ಕೊನೆಯ ಸಿನಿಮಾ ಆಗ್ಬಹುದು.. ನನಗೂ ಸುಸ್ತಾಗುತ್ತೆ"- ಡಾಲಿ ಧನಂಜಯ್
ಕನ್ನಡ ಚಿತ್ರರಂಗದಲ್ಲಿ ಡಾಲಿ ಧನಂಜಯ್ ನಟನಾಗಿ, ನಿರ್ಮಾಪಕನಾಗಿ, ಸಿನಿ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಬೇರೆ ಬೇರೆ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಧನಂಜಯ್ ನಿರ್ಮಾಪಕರಾಗಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ಸಿನಿಮಾ ನಿರ್ಮಾಣದ ಕಡೆಗೂ ಗಮನ ಹರಿಸಿದ್ದಾರೆ. ಇತ್ತೀಚೆಗೆ ಅವರು ನಿರ್ಮಾಣ ಮಾಡಿದ 'ಮದರ್ ಪ್ರಾಮಿಸ್' ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳುತ್ತಿದೆ.
ಡಾಲಿ ಧನಂಜಯ್ ನಿರ್ಮಾಪಕನಾಗಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಾಲಿ ನಿರ್ಮಿಸಿದ ಚೊಚ್ಚಲ ಸಿನಿಮಾ 'ಬಡವ ರಾಸ್ಕಲ್' ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈ ಬೆನ್ನಲ್ಲೇ 'ಹೆಡ್ ಬುಷ್', 'ಟಗರು ಪಲ್ಯ','ವಿದ್ಯಾಪತಿ', 'ಮದರ್ ಪ್ರಾಮೀಸ್' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಉತ್ತಮ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದರೂ, ಕೆಲವು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಇನ್ನು ಕೆಲವು ಸೋತಿವೆ.

ಧನಂಜಯ್ ಅವರ ಆಪ್ತಮಿತ್ರ ಹಾಗೂ ನಟ ಪೂರ್ಣಚಂದ್ರ ಮೈಸೂರು 'ಮದರ್ ಪ್ರಾಮಿಸ್' ಸಿನಿಮಾ ಮೂಲಕ ನಿರ್ದೇಶಕನಾಗಿದ್ದಾರೆ. ಸಿನಿಮಾ ನೋಡಿದವರನ್ನೆಲ್ಲ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪಾಸಿಟವ್ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗುತ್ತಿಲ್ಲ. ಇದರೊಂದಿಗೆ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಮಾತಾಡುತ್ತಿರೋದು ಸಿನಿಮಾ ತಂಡಕ್ಕೆ ಬೇಸರವನ್ನು ತರಿಸಿದೆ. ಹೀಗಾಗಿ ಅವರ ನಿರ್ಮಿಸಿರುವ 'ಹೆಗ್ಗಣ ಮುದ್ದು' ಅದೇ ನಿರ್ಮಾಪಕನಾಗಿ ಕೊನೆಯ ಸಿನಿಮಾ ಆಗಬಹುದೆಂದು ಹೇಳಿದ್ದಾರೆ.
'ಬಡವ ರಾಸ್ಕಲ್' ಡಾಲಿ ಧನಂಜಯ್ ಅವರನ್ನು ನಿರ್ಮಾಪಕನಾಗಿ ಗೆಲ್ಲಿಸಿತ್ತು. ಅಲ್ಲಿಂದ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಕಟ್ಟುಕೊಂಡು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಮಾಧ್ಯಮದವರ ಮುಂದೆ ಈ ಬಗ್ಗೆ ಡಾಲಿ ಹೇಳಿಕೊಂಡಿದ್ದಾರೆ. "2021 ಬಡವ ರಾಸ್ಕಲ್ ಸಿನಿಮಾಗೆ ನಿರ್ಮಾಪಕನಾಗಿ ನಾನು ಗೆಲುವು ನೋಡಿದವನು. ಅದೂವರೆಗೂ ಏನು ಕೊಡುತ್ತೀರೋ ಅದನ್ನು ತೆಗೆದುಕೊಂಡು ನಾನು ಕೆಲಸ ಮಾಡಿರೋನು. 2021 ರಿಂದ 2026 ನಾನು ಎಷ್ಟು ಜನರೊಂದಿಗೆ ಕೆಲಸ ಮಾಡಿದ್ದೀನಿ. ಎಷ್ಟು ಪ್ರಯತ್ನ ಮಾಡಿದ್ದೀನಿ. ನಟನಾಗಿ ಬಿಟ್ಟುಬಿಡಿ ಅದು ಇನ್ನೊಂದು ಅಧ್ಯಾಯ ಅದನ್ನು ಆಮೇಲೆ ಮಾತಾಡುತ್ತೇನೆ. ನಿರ್ಮಾಪಕ ಆಗಿ ಎಷ್ಟು ಪ್ರಯತ್ನಗಳನ್ನು ಮಾಡಿದ್ದೀನಿ" ಎಂದು ಸಿನಿಮಾಗಳ ಪಟ್ಟಿಯನ್ನೇ ನೀಡುತ್ತಾರೆ.
"ಇದೇ ಕೊನೆಯ ಸಿನಿಮಾ ಆಗ್ಬಹುದು"
"ಬಡವ ರಾಸ್ಕಲ್, ಹೆಡ್ ಬುಷ್, ಟಗರು ಪಲ್ಯ ಇದರಲ್ಲಿ ಹೊಸ ನಿರ್ದೇಶಕ, ಹೊಸ ಟೀಮ್ ಇತ್ತು. ನನ್ನ ಪ್ರೊಡಕ್ಷನ್‌ನಲ್ಲಿ ಬಂದಿರೋರು ಎಲ್ಲರೂ ಹೊಸ ನಿರ್ದೇಶಕರೇ. ವಿದ್ಯಾಪತಿ, ಜೆಸಿ, ಮದರ್ ಪ್ರಾಮೀಸ್, ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದೀವಿ. ಆರ್ಕೆಸ್ಟ್ರಾ ಅಂತಹ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದೀವಿ. ಜೆರಾಕ್ಸ್ ಅಂತಹ ವೆಬ್ ಸೀರಿಸ್ ಮಾಡಿದ್ದೀವಿ. ಮುಂದೆ ಹೆಗ್ಗಣ ಮುದ್ದು ಅಂತ ಒಂದು ಸಿನಿಮಾವಿದೆ. ಬಹುಶ: ನಿರ್ಮಾಪಕನಾಗಿ ಅದೇ ಕೊನೆಯ ಸಿನಿಮಾ ಆಗಬಹುದು. ಯಾಕಂದ್ರೆ ನನಗೂ ಸುಸ್ತಾಗುತ್ತೆ. ನಾನು ಒಬ್ಬ ನಟನಾಗಿ ಲೈಫ್ ಅನ್ನು ಎಂಜಾಯ್ ಮಾಡಬೇಕು. ಇದೇ ಕೆಲಸಗಳನ್ನು ಮಾಡಿಕೊಂಡು ಕೂರುವುದಕ್ಕೆ ಆಗುವುದಿಲ್ಲ"- ಡಾಲಿ ಧನಂಜಯ್

ಯಾರೂ ತೊಂದರೆ ಕೊಡಬಾರದಲ್ವಾ?
ಅವರೇ ನಿರ್ಮಾಣ ಮಾಡಿರುವ 'ಮದರ್ ಪ್ರಾಮಿಸ್'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದ್ದು, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಇಂತಹ ಪ್ರಯತ್ನಗಳು ನಡೆಯುತ್ತಿದ್ದಾಗ ಅಭಿಪ್ರಾಯಗಳು ಬೇರೆ ಬೇರೆ ಇರುತ್ತವೆ. ಆದರೆ ಯಾರೋ ಏನೋ ಮಾಡುತ್ತಿರುವಾಗ ಅವರಿಗೆ ತೊಂದರೆ ಕೊಡಬಾರದು ಅನ್ನೋ ಮೈಂಡ್ ಸೆಟ್ ಇರಬೇಕಲ್ಲ. ಸಿನಿಮಾ, ಸಾಹಿತ್ಯ, ನಾಟಕ ಎಲ್ಲವೂ ಕನ್ನಡ ಕಟ್ಟುವ ಕೆಲಸಗಳೇ. ಪ್ರತಿಯೊಬ್ಬ ಕಲಾವಿದರು ಎಲ್ಲರೂ ಮ್ಯಾಟರ್ ಆಗುತ್ತಾರಲ್ಲವೇ? ಈ ಸಿನಿಮಾದಲ್ಲಿ ಎಷ್ಟು ಜನ ಕಲಾವಿದರು ಕೆಲಸ ಮಾಡಿದ್ದಾರೆ ಅಲ್ಲವೇ" ಎಂದು ಡಾಲಿ ಧನಂಜಯ್ ಪ್ರಶ್ನೆ ಮಾಡಿದ್ದಾರೆ.
ಒಳ್ಳೆಯ ಸಿನಿಮಾ ಮಾಡಬೇಕಷ್ಟೇ
ಸಿನಿಮಾ ನಿರ್ಮಾಪಕನಾಗಿ ಧನಂಜಯ್ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಇಂತಹ ಸಮಯದಲ್ಲಿ ಜೊತೆ ನಿಂತುಕೊಳ್ಳಬೇಕು. ಆದರೆ, ಅದಾಗುತ್ತಿಲ್ಲ. ಹೀಗಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಿಕೊಂಡು ಹೋಗಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. "ನೀವು ಯಾರಾದರೂ 50 ಜನರು ಇರುವ ಕಡೆಗೆ ಹೋಗಿ ಸಿನಿಮಾ ನೋಡಿ. ಇಡೀ ಥಿಯೇಟರ್‌ನಲ್ಲಿ ಒಮ್ಮ ನಗು ಶುರುವಾಗಿ ಕೊನೆಯವರೆಗೂ ನಗಲಿಲ್ಲ ಅಂದರೆ, ಆಗ ನಾನು ಒಪ್ಪಿಕೊಳ್ಳುತ್ತೇನೆ. ಏನಾದರೂ ಮಾಡುವಾಗ ಪಾಸಿಟಿವ್ ಆಗಿ ಜೊತೆಯಲ್ಲಿ ನಿಂತುಕೊಳ್ಳಬೇಕು. ಪ್ರತಿ ಬಾರಿ ಅದನ್ನು ಬೇರೆ ಕಡೆಗೆ ಎಳೆದುಕೊಂಡು ಹೋಗುವುದರಲ್ಲಿ ಅರ್ಥ ಇಲ್ಲ. ನಾನು ಕಂಪ್ಲೇಟ್ ಮಾಡುತ್ತಿಲ್ಲ. ಅದರಿಂದ ನನಗೆ ಏನೂ ಆಗಬೇಕಿಲ್ಲ. ನಾನು ನಟನಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅಷ್ಟೇ ನನ್ನ ಕೆಲಸ. ನಾನು ಅಷ್ಟನ್ನೇ ಮಾಡಿಕೊಂಡು ಹೋಗಬೇಕು." ಎನ್ನುತ್ತಾರೆ.


Click it and Unblock the Notifications

