ಓಂ ಪ್ರಕಾಶ್ ರಾವ್ ನಿರ್ದೇಶನದ 'ಫಿನಿಕ್ಸ್' ಸಿನಿಮಾದ ನಾಯಕನ ಕಾಲಿಗೆ ಪೆಟ್ಟು; ಶೂಟಿಂಗ್ ವೇಳೆ ಘಟನೆ
ಕನ್ನಡ ಚಿತ್ರರಂಗದ ಆಕ್ಷನ್ ಸಿನಿಮಾಗಳ ಸರದಾರ ಓಂ ಪ್ರಕಾಶ್ ರಾವ್ ಹೊಸ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಓಂ ಪ್ರಕಾಶ್ ಸಿನಿಮಾ ಅಂದ್ಮೇಲೆ ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್‌ಗಳು ಇರುತ್ತವೆ. ಆಕ್ಷನ್, ಕಾರು ಚೇಸ್, ಬೆಂಕಿ ಇವೆಲ್ಲವೂ ಇದ್ದೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಅವಘಡಗಳು ನಡೆಯುವುದು ಸರ್ವೆ ಸಾಮಾನ್ಯ. ಈಗ ಅವರು ನಿರ್ದೇಶಿಸುತ್ತಿರುವ 'ಫಿನಿಕ್ಸ್' ಸಿನಿಮಾದಲ್ಲೂ ಇಂತಹದ್ದೇ ಒಂದು ಅವಘಡ ನಡೆದಿದೆ. ಕನ್ನಡ ಚಿತ್ರರಂಗದ ಇಂತಹ ಸಾಕಷ್ಟು ಅವಘಡಗಳು ನಡೆಯುತ್ತಲೇ ಇವೆ.
ಸ್ಯಾಂಡಲ್‌ವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಓಂ ಪ್ರಕಾಶ್ ರಾವ್ 'ಫಿನಿಕ್ಸ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನದ ಜೊತೆ ನಿರ್ಮಾಣಕ್ಕೂ ಇಳಿದಿರುವ ಓಂ ಪ್ರಕಾಶ್ ರಾವ್ ಇನ್ನೇನು ಸಿನಿಮಾವನ್ನು ಮುಗಿಸುವ ಹಂತದಲ್ಲಿ ಇದ್ದಾರೆ. ಈ ಚಿತ್ರದ ದೃಶ್ಯವೊಂದನ್ನು ಚಿತ್ರೀಕರಣ ಮಾಡುವಾಗ ನಟ ಭರತ್ ಶೆಟ್ಟಿಯ ಕಾಲಿಗೆ ಬೆಂಕಿ ತಗುಲಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಬೆಂಗಳೂರಿನ ವಡೇರಹಳ್ಳಿಯಲ್ಲಿ ಓಂ ಪ್ರಕಾಶ್ ರಾವ್ 'ಫಿನಿಕ್ಸ್' ಸಿನಿಮಾದ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುತ್ತಿದ್ದರು. ಈ ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದ ಭರತ್ ಶೆಟ್ಟಿ ಕಾಲಿಗೆ ಬೆಂಕಿ ತಗುಲಿತ್ತು. ಕೂಡಲೇ ಸೆಟ್ಟಿನಲ್ಲಿ ಇದ್ದವರ ಸಮಯ ಪ್ರಜ್ಞೆಯಿಂದ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾಲಿಗೆ ಪೆಟ್ಟಾಗಿದ್ದು, ನಟ ಭಾಸ್ಕರ್ ಶೆಟ್ಟಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೂಟಿಂಗ್ ಮಾಡುವ ವೇಳೆ ಏನಾಯ್ತು ಎಂಬುವುದನ್ನು ಭರತ್ ಶೆಟ್ಟಿಯವರೇ ವಿವರಿಸಿದ್ದಾರೆ.
"ಫಿನಿಕ್ಸ್ ಸಿನಿಮಾದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ವಿಲನ್ ಅನ್ನು ಹಿಡಿಯಲು ನಾನು ಅವನಿರುವ ಸ್ಥಳಕ್ಕೆ ಹೋಗುತ್ತೇನೆ. ಆಗ ಅಲ್ಲಿದ್ದವರು ನನ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಸನ್ನಿವೇಶ. ಈ ದೃಶ್ಯವನ್ನು ಚಿತ್ರೀಕರಿಸುತ್ತಿರುವ ಸಂದರ್ಭ. ಈ ವೇಳೆ ನನ್ನ ಕಾಲಿಗೆ ಪೆಟ್ಟಾಯಿತು. ತಕ್ಷಣ ಚಿತ್ರತಂಡದವರು ನನ್ನನ್ನು ಆರೈಕೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆಗಿರುವ ಓಂಪ್ರಕಾಶ್ ರಾವ್ ಅವರು ಸಹ ನನ್ನ ಮೇಲೆ ವಿಶೇಷ ಕಾಳಜಿ ವಹಿಸಿದ್ದರು. ಅವರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದು ಘಟನೆಯ ಬಗ್ಗೆ ನಟ ಭಾಸ್ಕರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
'ಫಿನಿಕ್ಸ್' ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ 49ನೇ ಸಿನಿಮಾ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ನಿಮಿಕಾ ರತ್ನಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಭಾಸ್ಕರ್ ಶೆಟ್ಟಿ, ಕಾಕ್ರೋಜ್ ಸುಧಿ, ಪ್ರಸನ್ನ ಸೇರಿದಂತೆ ಹಲವು ಮಂದಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರವಿ ವಲ್ಲೂರಿ ಕ್ಯಾಮರಾ ವರ್ಕ್, ರವಿವರ್ಮ ಸಾಹಸ ನಿರ್ದೇಶನವಿದೆ. ಇನ್ನು ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರೊಬ್ಬರು ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ.
ಎರಡು ವರ್ಷಗಳ ಹಿಂದೆ ಈ ಸಿನಿಮಾದ ಮುಹೂರ್ತ ಆಗಿತ್ತು. ಅಲ್ಲಿಂದಲೂ ಓಂ ಪ್ರಕಾಶ್ ರಾವ್ ಶೂಟಿಂಗ್ ಮಾಡುತ್ತಲೇ ಇದ್ದಾರೆ. ಸಾಮಾನ್ಯವಾಗಿ ಬೇಗ ಬೇಗ ಶೂಟಿಂಗ್ ಮುಗಿಸುವ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಬಾರಿ ನಿಧಾನವಾಗಿ ಶೂಟಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಿದೆ. ಓಂ ಪ್ರಕಾಶ್ ರಾವ್ ರೀಮೆಕ್ ಸಿನಿಮಾವನ್ನು ಬಿಟ್ಟು ಸ್ವಮೇಕ್ ಸಿನಿಮಾ ಮಾಡುತ್ತಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದ್ದು, ಶೂಟಿಂಗ್ ಕೊನೆಯ ಹಂತದಲ್ಲಿ ಇದೆ.


Click it and Unblock the Notifications











