"ರಾಜ್‌ಕುಮಾರ್ ಸ್ವರೂಪದಲ್ಲಿರುವ ಶಿವಣ್ಣನ ಎದುರಲ್ಲೇ ಕನ್ನಡಕ್ಕೆ ಅವಮಾನ; ಕ್ಷಮೆ ಕೇಳಿದ್ರೆ ಸಿನಿಮಾ ರಿಲೀಸ್ ಕರವೇ ಪ್ರವೀಣ್ ಶೆಟ್ಟ
ಸುಮ್ಮನಿರಲಾರದೇ ಕಮಲ್ ಹಾಸನ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅದರಲ್ಲೂ ಶಿವಣ್ಣನನ್ನು ಕರೆಸಿ, ಅವರ ಮುಂದೇನೆ ಕನ್ನಡ ಭಾಷೆಗೆ ಅವಮಾನ ಆಗುವ ಹಾಗೆ ಮಾತಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿರುವ ಕಮಲ್ ಹಾಸನ್ ಹೇಳಿಕೆಗೆ ವ್ಯಾಪಕ ಖಂಡನೆಯಾಗುತ್ತಿದೆ. ಈಗ ಕನ್ನಡ ಪರ ಸಂಘಟನೆಗಳು ಅಖಾಡಕ್ಕೆ ಇಳಿದಿವೆ.
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾದ ಇವೆಂಟ್‌ಗೆ ಶಿವಣ್ಣ ವಿಶೇಷ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಶಿವಣ್ಣ ತಮ್ಮ ನೆಚ್ಚಿನ ನಟ ಕಮಲ್ ಹಾಸನ್ ಬಗ್ಗೆ ಒಳ್ಳೊಳ್ಳೆ ಮಾತಗಳನ್ನು ಆಡಿದ್ದರು. ಅವರನ್ನು ಮೊದಲ ಬಾರಿ ಅಪ್ಪಿಕೊಂಡಿದ್ದು, ಅವರ ಸಿನಿಮಾಗಳು, ನಟನೆಯ ಬಗ್ಗೆ ತಮಿಳು ಭಾಷೆಯಲ್ಲಿಯೇ ಮಾತಾಡಿದ್ದರು. ಅದಕ್ಕೆ ಪ್ರತಿಯಾಗಿ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕಮಲ್ ಹಾಸನ್ ಕೂಡ ಒಳ್ಳೆಯ ಮಾತಗಳನ್ನೇ ಆಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ವೇದಿಕೆ ಮೇಲೆ ಆಗಿದ್ದೇ ಬೇರೆ.

ಇನ್ನು ಕನ್ನಡಿಗರು ಆಕ್ರೋಶಗೊಂಡಿದ್ದರೂ, ಕಮಲ್ ಹಾಸನ್ ಇನ್ನೂ ಸ್ಪಷ್ಟನೆ ಕೊಡುವ ಮನಸ್ಸು ಕೂಡ ಮಾಡಿಲ್ಲ. ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಕಮಲ್ ಸಿನಿಮಾವನ್ನು ಬ್ಯಾನ್ ಮಾಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಶಿವಣ್ಣನ ಮುಂದೆಯೇ ಕನ್ನಡಕ್ಕೆ ಅವಮಾನ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಕ್ಷಮೆ ಕೇಳದೆ ಹೋದರೆ, ಮಾಲ್ ಹಾಗೂ ಥಿಯೇಟರ್‌ಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.
ಕ್ಷಮೆ ಕೇಳಬೇಕು.. ಇಲ್ಲ ಬ್ಯಾನ್ ಮಾಡಬೇಕು
ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿಯೇ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಇಲ್ಲವಾದರೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. "ಕನ್ನಡ ಚಿತ್ರರಂಗದ ಪರವಾಗಿ ಮಧ್ಯಸ್ಥಿಕೆಯನ್ನು ವಹಿಸಿಕೊಂಡು ಕಮಲ್ ಹಾಸನ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ಒತ್ತಾಯವನ್ನು ಮಾಡುತ್ತಿದ್ದೇವೆ. ಬ್ಯಾನ್ ಮಾಡಿಲ್ಲ ಅಂದರೆ, ಯಾವುದೇ ಮಾಲ್‌ಗಳಲ್ಲಿ, ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಅವಕಾಶವನ್ನು ಕೊಡುವುದಿಲ್ಲ" ಎಂದು ಕರವೇ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ.

ಕರವೇ ಕೈ ಕಟ್ಟಿ ಕೂರಲ್ಲ
"ನಿನ್ನೆಯೂ ಅಷ್ಟೇ ಕಾರ್ಯಕ್ರಮದ ಸಮಯವನ್ನು ಬದಲಾವಣೆ ಮಾಡಿ ನಮಗೆ ದಾರಿ ತಪ್ಪಿಸುವಂತಹ ಕೆಲಸ ಮಾಡಿದ್ದಾರೆ. ಇಲ್ಲಾ ಅಂದಿದ್ದರೆ, ನಿನ್ನೆನೇ ತಕ್ಕ ಶಾಸ್ತಿಯನ್ನು ಮಾಡುತ್ತಿದ್ದಿ. ಈ ನೆಲದಲ್ಲಿ ಬಂದು, ಇಲ್ಲಿಯ ಹಣವನ್ನು ಸಂಪಾದನೆ ಮಾಡಿ, ದೋಚಿ, ತಮಿಳಿನಲ್ಲಿ ಸೋತವರಿಗೆ ಕನ್ನಡದಲ್ಲಿ ಹೆಸರು ಮಾಡಿಕೊಟ್ಟಿದ್ದೇವೆ. ಹೀಗಿದ್ದೂ ಕನ್ನಡಿಗರ ಮೇಲೆ ದಾಳಿ ಮಾಡುತ್ತಿರುವಾಗ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ಕೈ ಕಟ್ಟಿ ಕೂರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ." ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶಿವಣ್ಣನ ಎದುರನ್ನೇ ಈ ಮಾತು ಹೇಳಿದ್ದೀರಲ್ಲ
"ಕನ್ನಡ ಸಿನಿಮಾ ಸೊರಗಿ ಹೋಗುತ್ತಿದ್ದರೂ ಬೇರೆ ಭಾಷೆಯ ಸಿನಿಮಾಗಳನ್ನು ಕರ್ನಾಟಕದೊಳಗೆ ಬಿಟ್ಟುಕೊಂಡಿದ್ದೇವೆ. ಸರ್ಕಾರ ಮತ್ತು ವಾಣಿಜ್ಯ ಮಂಡಳಿ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು. ಯಾವುದೇ ಕಾರಣಕ್ಕೂ ಅವರು ಕನ್ನಡಿಗರ ಬಳಿ ಕ್ಷಮೆ ಕೇಳಬೇಕು. ಯಾಕೆ ನೀವು ಬೇರೆ ಭಾಷೆಯವರೊಂದಿಗೆ ಹೋಲಿಸುತ್ತೀರ. ಕನ್ನಡಿಗರು ಯಾವತ್ತಾದರೂ ನಿಮಗೆ ದ್ರೋಹ ಮಾಡಿದ್ದಾರಾ? ತಮಿಳುನಾಡಿನಲ್ಲಿ ನಿಮ್ಮ ಸಿನಿಮಾ ಓಡದೇ ಇದ್ದಾಗ ಕರ್ನಾಟಕದಲ್ಲಿ ಬೆಂಬಲ ಕೊಟ್ಟು ಸಿನಿಮಾ ಓಡುವಂತೆ ಮಾಡಿದ್ದು ಕನ್ನಡಿಗರು. ರಾಜಕೀಯದ ಅಸ್ಥಿರತೆ ಕಂಡುಕೊಂಡಿದ್ದೀರ, ಸಿನಿಮಾ, ವೈಯಕ್ತಿಕ ಜೀವನದಲ್ಲೂ ನಿಮಗೆ ಸ್ಥಿರವಿಲ್ಲ. 2 ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡದ ಬಗ್ಗೆ ರಾಜ್‌ಕುಮಾರ್ ಅವರ ಸ್ವರೂಪದಲ್ಲಿ ನೋಡುತ್ತಿರುವ ಶಿವಣ್ಣನ ಎದುರಿನಲ್ಲಿಯೇ ಈ ಮಾತನ್ನು ಹೇಳಿದ್ದೀರ." ಎಂದು ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಲ್ಲಿ ಕ್ಷಮೆ ಕೇಳಬೇಕು
"ಬೆಂಗಳೂರಿಗೆ ಬಂದು ಕ್ಷಮೆ ಕೇಳಬೇಕು. ಸರ್ಕಾರವಿದೆ. ವಾಣಿಜ್ಯ ಮಂಡಳಿ ಇದೆ. ಸಾಹಿತ್ಯ ಪರಿಷತ್ತು ಇದೆ. ಎಲ್ಲರೂ ಸಹ ಧ್ವನಿ ಎತ್ತಬೇಕು. ಕನ್ನಡಿಗರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅವಕಾಶಗಳಿಲ್ಲ. ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿದ್ದಾರೆ. ಎರಡು ವಾರ ಆಯ್ತು ಅಂದರೆ, ಸಿನಿಮಾವನ್ನು ಎತ್ತಾಕುತ್ತಿದ್ದಾರೆ. ಇದನ್ನೆಲ್ಲ ಕೇಳುವವರು ಯಾರು? ಬರೀ ಮಾತಿನಲ್ಲಿ ಹೇಳಿದರೆ ಆಗಲ್ಲ. ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯ ಮಾಡುತ್ತಿದ್ದೇನೆ." ಎಂದು ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











