"ಇಲ್ಲಿಗೆ ಬಂದು ಕ್ಷಮೆ ಕೇಳದೆ 'ಥಗ್ ಲೈಫ್' ರಿಲೀಸ್ ಆದರೆ ಬೆಂಗಳೂರು ಬಂದ್; ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ
ಕಮಲ್ ಹಾಸನ್ ಕೊಟ್ಟ ವಿವಾದಾತ್ಮಕ ಹೇಳಿಕೆ ಕರ್ನಾಟಕದಲ್ಲಿ ಕಿಚ್ಚು ಹಚ್ಚಿದೆ. ಕನ್ನಡ ಪರ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಕಮಲ್ ಹಾಸನ್ ಬೆಂಗಳೂರಿಗೆ ಬಂದು ಕನ್ನಡಿಗರಿಗೆ ಕ್ಷಮೆಯನ್ನು ಕೇಳಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಈ ಮಧ್ಯೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿತ್ತು. ಇದನ್ನು ಕಂಡ ಕೂಡ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದರು.
ನೆಟ್ಟಿಗರಿಂದ, ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಕ್ಟರ್ ಸಿನಿಮಾಸ್ ಮಾಲೀಕರು ಯೂಟರ್ನ್ ಹೊಡೆದಿದ್ದರು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಗೂ ಅವರ ಬೆಂಬಲಿಗರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದರು. ಬಳಿಕ ಚಿತ್ರಮಂದಿರದ ಮಾಲೀಕರೊಂದಿಗೆ ಚರ್ಚೆ ಮಾಡಿದ್ದರು. ಥಿಯೇಟರ್ ಓನರ್ ಕೂಡ ಕ್ಷಮೆ ಕೇಳದ ಹೊರತು ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾಗಿ ಹೇಳಿದ್ದಾರೆ.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಒಂದು ವೇಳೆ ಕಮಲ್ ಹಾಸನ್ ಬೆಂಗಳೂರಿಗೆ ಬಂದು ಕ್ಷಮೆಯನ್ನು ಕೇಳದೇ ಥಗ್ ಲೈಫ್ ಸಿನಿಮಾ ಬಿಡುಗಡೆಯಾದರೆ, ಬೆಂಗಳೂರು ಬಂದ್ ಮಾಡುವ ಆಲೋಚನೆ ಕೂಡ ನಡೆಯುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗೇ ಸಿನಿಮಾ ಪ್ರದರ್ಶನ ಮುಂದಾದರೆ, ಮುಂದಾಗುವ ಘಟನೆಗಳಿಗೆ ಹೊಣೆ ನಾವಲ್ಲ ಎಂದೂ ಹೇಳಿದ್ದಾರೆ.
"ಇವತ್ತು ವಿಕ್ಟರಿ ಸಿನಿಮಾಸ್‌ನಲ್ಲಿ ಥಗ್ ಲೈಫ್ ಸಿನಿಮಾವನ್ನು ಪ್ರಸಾರ ಮಾಡುತ್ತೇವೆ ಎನ್ನುವ ಟ್ವೀಟ್ ಅನ್ನು ನೋಡಿದ್ದೇವೆ. ಅದಾದ್ಮೇಲೆ ಅದರ ಮಾಲೀಕರು ನಾರಾಯಣ ಸ್ವಾಮಿಯವರು ಕನ್ನಡದವರೇ ಆಗಿದ್ದರಿಂದ ಅವರೂ ಸಹ ನಾನು ಹಾಕುವುದಿಲ್ಲ ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. ಈ ಚಿತ್ರಮಂದಿರದ ಮಾಲೀಕರು ಕೂಡ ವಾಣಿಜ್ಯ ಮಂಡಳಿಯ ಸದಸ್ಯರು ಆಗಿದ್ದಾರೆ. ವಾಣಿಜ್ಯ ಮಂಡಳಿ ಕೂಡ ಯಾವುದೇ ಕಾರಣಕ್ಕೆ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಾನ್ಯ ಶಿವರಾಜ್ ತಂಗಡಗಿ ಕೂಡ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಕೊಡುವುದಿಲ್ಲ. ಸರ್ಕಾರದಿಂದಲೇ ತಡೆಯುತ್ತೇವೆ ಎನ್ನುವ ಮಾತನ್ನು ಹೇಳಿದ್ದಾರೆ." ಎಂದು ಥಿಯೇಟರ್ ಮಾಲೀಕರು ಹೇಳಿದ್ದಾಗಿ ಕರವೇ ಪ್ರವೀಣ್ ಶೆಟ್ಟಿ ಹೇಳಿಕೆ ಕೊಟ್ಟಿದ್ದಾರೆ.
ಇದೇ ವೇಳೆ ಕಮಲ್ ಹಾಸನ್ ಕ್ಷಮೆ ಕೇಳದ ಹೊರತೂ ಥಗ್ ಲೈಫ್ ರಿಲೀಸ್ ಆದರೆ, ಬೆಂಗಳೂರು ಬಂದ್ ಮಾಡುವ ಬಗ್ಗೆನೂ ಆಲೋಚನೆ ಮಾಡುತ್ತಿದ್ದೇವೆಂದು ಹೇಳಿದ್ದಾರೆ. "ಎಲ್ಲಾ ಕನ್ನಡಪರ ಸಂಘಟನೆಗಳು ಒಂದು ತೀರ್ಮಾನವನ್ನು ಮಾಡಿದ್ದೇವೆ. ಒಂದು ಪಕ್ಷ ಸಿನಿಮಾ ಬೆಂಗಳೂರಿಗೆ ಬಂದು ಕ್ಷಮೆ ಕೇಳದೆ ಬಿಡುಗಡೆಯಾದರೆ, ಬೆಂಗಳೂರು ಬಂದ್ ಸಹ ಆಗಬಹುದು. ಎಲ್ಲಾ ಸಂಘಟನೆಗಳು ಸೇರಿ ಅದನ್ನೂ ಕೂಡ ಮಾಡಬೇಕಾಗುತ್ತೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಇಂತಹ ದುರಹಂಕಾರಿಗಳು ಕನ್ನಡದ ಇತಿಹಾಸ ಗೊತ್ತಿಲದೇ ತಮಿಳಿನಿಂದ ಕನ್ನಡ ಹುಟ್ಟಿತು ಅನ್ನೋದನ್ನು ಯಾರಿಂದಲೂ ತಡೆಯುವುದಕ್ಕೆ ಆಗುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಬಂದು ಬೇಷರತ್ತಾಗಿ ಕ್ಷಮೆಯನ್ನು ಕೇಳುವ ಮೂಲಕ ಸಿನಿಮಾ ಪ್ರಸಾರ ಮಾಡಬೇಕಾಗುತ್ತೆ." ಎಂದಿದ್ದಾರೆ.
ಇಷ್ಟೇ ಅಲ್ಲದೆ ಎಚ್ಚರಿಕೆ ನೀಡಿದ ಹೊರತಾಗಿಯೂ ಚಿತ್ರಮಂದಿರದ ಮಾಲೀಕರು 'ಥಗ್ ಲೈಫ್' ಬಿಡುಗಡೆ ಮಾಡಿದೆ, ಥಿಯೇಟರ್‌ನಲ್ಲಾಗುವ ಅನಾಹುತಕ್ಕೆ ಹೊಣೆ ನಾವಲ್ಲ ಅಂತಾನೂ ಹೇಳಿದ್ದಾರೆ. "ಕ್ಷಮೆ ಕೇಳದೆ ಮಾಡಿದರೆ, ಆಗುವಂತಹ ಅನಾಹುತಕ್ಕೆ, ಥಿಯೇಟರ್‌ಗಳಲ್ಲಿ ಆಗುವ ಗಲಾಟೆಗಳಿಗೆ, ಪರದೆಗಳಿಗೆ ಬೀಳುವ ಬ್ಲೇಡ್‌ಗಳಿಗೆ ನಾವು ಹೊಣೆಗಾರರಲ್ಲ. ಸಿನಿಮಾ ಬಿಡುಗಡೆಯಾದರೆ, ಎಲ್ಲರೂ ಸಿನಿಮಾ ಟೆಂಟ್ ಒಳಗೆ ಇರುತ್ತೇವೆ. ಎನ್ನುವ ಹೇಳಿಕೆಯನ್ನು ಈಗಲೂ ಸಹ ಕೊಡುತ್ತಿದ್ದೇವೆ." ಎಂದು ಎಚ್ಚರಿಸಿದ್ದಾರೆ.
ಹಾಗೇ ವಿಕ್ಟರಿ ಸಿನಿಮಾ ಕನ್ನಡಿಗರದ್ದೇ ಚಿತ್ರಮಂದಿರ. ನಮ್ಮವರ ವಿರುದ್ಧವೇ ನಾನು ತಿರುಗಿಬೀಳುವುದು ಬೇಡ ಎಂದಿದ್ದಾರೆ. "ನಮ್ಮವರ ವಿರುದ್ಧವೇ ನಾವು ತಿರುಗಿಬೀಳುವುದು ಬೇಡ. ಅದಕ್ಕಿಂತ ಮುಂಚಿತವಾಗಿ ನಾವು ಜಾಗೃತರಾಗಿ ಇಲ್ಲಿಗೆ ಬಂದಿದ್ದೇವೆ. ಅವರು ಕೂಡ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಪೊಲೀಸರು ಕೂಡ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ವಾಣಿಜ್ಯ ಮಂಡಳಿ, ಕನ್ನಡ ಹೋರಾಟಗಾರರ ಒಪ್ಪಿಗೆ ಇಲ್ಲದೆ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕನ್ನಡ ಪರ ಹೋರಾಟಗಾರರು ಸಿಡಿದೆದ್ದರೆ, ಹೇಗೆ ಬೇಕಾದರೂ ಸಿಡಿದೇಳುತ್ತಾರೆ ಅನ್ನೋ ಹಲವು ಉದಾಹರಣೆಗಳಿವೆ." ಎಂದಿದ್ದಾರೆ.


Click it and Unblock the Notifications











