'ಪೋರಿ ಟಪೋರಿ' ಖ್ಯಾತಿಯ ಆರ್‌ಜೆ ರಚನಾ ಸಾವು: ಆರ್ ಜೆ ಗೆಳೆಯರು ಹೇಳಿದ ಮಾತೇನು?
ಬೆಂಗಳೂರು ಬ್ಯುಸಿ ಸಿಟಿ. ಇಲ್ಲಿನ ಜನರಿಗೆ ಒಂದೊಂದು ನಿಮಿಷವೂ ಮುಖ್ಯ. ಗಂಟೆಗಟ್ಟಲೆ ಬಸ್‌ನಲ್ಲಿ ಪ್ರಯಾಣ ಮಾಡುವವರಿಗೆ, ಕಿ.ಮೀ ಗಟ್ಟಲೆ ಕಾರ್ ಚಲಾಯಿಸುವವರಿಗೆ ಮಾತಿನ ಮೂಲಕವೇ ಹತ್ತಿರವಾಗತ್ತಿದ್ದವರು ಎಫ್ ಎಂ ರೇಡಿಯೋದ ಆರ್ ಜೆಗಳು. ಇಂದಿಗೂ ಇವರೆಲ್ಲರಿಗೂ ಪ್ರತಿಯೊಂದು ಎಫ್ ಎಂ ರೇಡಿಯೋದ ಆರ್‌ಜೆಗಳ ಹೆಸರು ಗೊತ್ತಿದೆ. ಇವರ ಮಾತಿಗಾಗಿ ಕಾದು ಕೂರುವ ಅಭಿಮಾನಿ ಬಳಗವಿದೆ. ಒಂದೂ ಒಂದೂವರೆ ದಶಕದ ಹಿಂದೆ ಎಫ್ ಎಂ ಪೀಕ್‌ನಲ್ಲಿತ್ತು. ಆಗ ಸಾಕಷ್ಟು ರೇಡಿಯೋ ಜಾಕಿಗಳು ಜನಪ್ರಿಯರಾಗಿದ್ದರು. ಇವರಲ್ಲಿ ರೇಡಿಯೋ ಮಿರ್ಚಿ ಹಾಗೂ ರೇಡಿಯೋ ಸಿಟಿಯಲ್ಲಿ ಆರ್ ಜೆ ಆಗಿದ್ದ ರಚನಾ ಕೂಡ ಒಬ್ಬರು.
Recommended Video
ನಿರರ್ಗಳವಾಗಿ, ತಡವರಿಸದೆ ಮಾತಾಡಬಲ್ಲ ರೇಡಿಯೋ ಜಾಕಿಗಳಲ್ಲಿ ಆರ್ ಜೆ ರಚನಾ ಹೆಸರು ಮೊದಲಿರುತ್ತೆ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡಬಲ್ಲ ರಚನಾಗೆ ಅವರದ್ದೇ ಆದ ಅಭಿಮಾನಿ ಬಳಗವೂ ಇತ್ತು. ಆದರೆ, ಕಳೆದ ಆರೇಳು ವರ್ಷಗಳಿಂದ ರೇಡಿಯೋ ಜಾಕಿ ಕೆಲಸಕ್ಕೆ ವಿದಾಯ ಹೇಳಿದ್ದರು. ಎಫ್ ಎಂ ರೇಡಿಯೋ ಸಮೂಹದಿಂದಲೇ ದೂರವಿದ್ದರು. ಇವರ ಧ್ವನಿಯನ್ನು ಕೇಳುಗ ವರ್ಗ ಇಷ್ಟು ಮಿಸ್ ಮಾಡಿಕೊಳ್ಳುತ್ತಲೇ ಇತ್ತು. ಈಗ ರಚನಾರನ್ನು ಕಳೆದುಕೊಂಡ ಅವರ ಅಭಿಮಾನಿಗಳು ಮತ್ತಷ್ಟು ದು:ಖಿತರಾಗಿದ್ದಾರೆ.

ಪಿಯುಸಿಯಲ್ಲಿ ಟಾಪರ್ ಆರ್ ಜೆ ರಚನಾ
ರಚನಾ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಬೆಳೆದವರು. ಇಲ್ಲಿನ ಜೈನ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದರು. ಮೊದಲಿನಿಂದಲೂ ಪಟ ಪಟ ಅಂತ ಮಾತಾಡುವುದು ರಚನಾ ವ್ಯಕ್ತಿತ್ವ. ಇದೇ ಕಾರಣಕ್ಕೆ ಅವರಿಗೆ ಎಫ್ ಎಂ ರೇಡಿಯೋದಲ್ಲಿ ಆರ್‌ಜೆ ಆಗುವ ಅವಕಾಶ ಸಿಕ್ಕಿತ್ತು. ರಚನಾ ಶಿಕ್ಷಣದಲ್ಲೂ ಮುಂದಿದ್ದರು. ಸ್ನೇಹಿತರು ಹೇಳುವ ಪ್ರಕಾರ, ರಚನಾ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದರು. ಆದರೂ, ಮಾತನ್ನೇ ಬಂಡವಾಳವಾಗಿಟ್ಟುಕೊಂಡು ಎಫ್ ಎಂ ರೇಡಿಯೋಗೆ ಸೇರಿಕೊಂಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ರಚನಾ ಉತ್ತಮ ಗಾಯಕಿಯೂ ಆಗಿದ್ದರು ಅಂತ ನೆನಪಿಸಿಕೊಳ್ಳುತ್ತಾರೆ.
ರೇಡಿಯೋ ಜಾಕಿ ರಚನಾ ಫೇಮಸ್
ರಚನಾ ರೇಡಿಯೋ ಜಾಕಿಯಾಗಿ ಹೆಸರು ಮಾಡಿದ್ದರು. ಇವರ ಮಾತಿಗೆ ಬೆಂಗಳೂರಿನಲ್ಲಿ ಮರುಳಾಗದವರೇ ಇಲ್ಲ. ಎಫ್ ಎಂ ರೇಡಿಯೋ ಬಗ್ಗೆ ಕ್ರೇಜ್ ಇದ್ದ ಕಾಲದಲ್ಲಿ ರಚನಾ ರೇಡಿಯೋ ಜಾಕಿ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್ ಆಗಿದ್ದವರು. 'ಪೋರಿ ಟಪೋರಿ', ' ಮಕ್ಕಳೊಂದಿಗಿನ ಕಾರ್ಯಕ್ರಮ, ಸಿನಿಮಾ ತಾರೆಯರೊಂದಿಗೆ ಸಂದರ್ಶನ ಎಲ್ಲವನ್ನೂ ಆರಾಮಾಗಿ ನಿಭಾಯಿಸಿಬಿಡುತ್ತಿದ್ದರು. ಕನ್ನಡದ ಸಿನಿಮಾ ತಾರೆಯರಿಗೂ ರಚನಾ ತುಂಬಾನೇ ಚಿರಪರಿಚಿತರಾಗಿದ್ದರು. ರಚನಾ, ಪ್ರಣವ್ ಎಂಬುವವರನ್ನು ವಿವಾಹವಾಗಿದ್ದರು ಎಂಬುದಷ್ಟೇ ಮಾಹಿತಿ ಲಭ್ಯವಾಗಿದ್ದು, ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಜೆಪಿ ನಗರ ಫ್ಲ್ಯಾಟ್‌ನಲ್ಲಿ ವಾಸವಿದ್ದ ಆರ್ ಜೆ ರಚನಾ
ಜೆ ಪಿ ನಗರದ ಫ್ಲ್ಯಾಟ್‌ನಲ್ಲಿ ಆರ್ ಜೆ ರಚನಾ ಪತಿ, ಮಾವ ಹಾಗೂ ಮಗಳೊಂದಿಗೆ ವಾಸವಿದ್ದರು ಎಂದು ಆಪ್ತರು ಮಾಹಿತಿ ನೀಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಆರ್ ಜೆ ವೃತ್ತಿಯಿಂದ ದೂರಾನೇ ಇದ್ದರು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆರ್ ಜೆ ವಲಯದ ಸ್ನೇಹಿತರೊಂದಿಗೂ ಹೆಚ್ಚು ಸಂಪರ್ಕವಿಟ್ಟುಕೊಂಡಿರಲಿಲ್ಲ ಎನ್ನಲಾಗಿದೆ. ಸದಾ ಫಿಟ್ನೆಸ್ ಬಗ್ಗೆ ಯೋಚಿಸುತ್ತಿದ್ದ ರಚನಾಗೆ ಅದೇ ಮುಳುವಾಗಿರಬಹುದೆಂಬ ಆತಂಕ ವ್ಯಕ್ತಪಡಿಸುತ್ತಾರೆ.

ಆರ್ ಜೆ ರಚನಾ ಫಿಟ್ನೆಸ್ ಫ್ರೀಕ್
ರೇಡಿಯೋ ಜಾಕಿ ಆಗಿದ್ದಾಗಿನಿಂದಲೂ ಆರ್ ಜೆ ರಚನಾ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು. ಸದಾ ಡಯೇಟ್ ಮಾಡುತ್ತಿದ್ದರು. ಆರೋಗ್ಯದ ಬಗ್ಗೆನೇ ಗಮನ ಹರಿಸುತ್ತಿದ್ದರು ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಕೇವಲ 39ನೇ ವಯಸ್ಸಿನಲ್ಲಿಯೇ ಕಾರ್ಡಿಯಾಕ್ ಅರೆಸ್ಟ್ ಆಗಿದ್ದಕ್ಕೆ ಇದೂ ಒಂದು ಕಾರಣವಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ ಅವರ ಆಪ್ತರು. ಆದರೆ, ಎಫ್ ಎಂ ಕೆಲಸ ತ್ಯಜಿಸಿದ ಬಳಿಕ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದರಾ ಅನ್ನುವ ಬಗ್ಗೆನೂ ಮಾಹಿತಿ ಇಲ್ಲ.

ಖಿನ್ನತೆಯಿಂದ ಬಳಲುತ್ತಿದ್ರಾ ಆರ್ ಜೆ ರಚನಾ?
ಆರ್ ಜೆ ರಚನಾಗೆ ಎಫ್ ಎಂ ಕ್ಷೇತ್ರದಲ್ಲಿ, ನಿರೂಪಣೆಯಲ್ಲಿ ಒಳ್ಳೆಯ ಹೆಸರಿತ್ತು. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯ ತಂಗಿಯಾಗಿ ನಟಿಸಿದ್ದರು. ವೃತ್ತಿ ಜೀವನದಲ್ಲಿ ಒತ್ತಡಗಳಿದ್ದವು ಅನ್ನುವ ಬಗ್ಗೆ ಆಪ್ತರಿಗೂ ಗೊತ್ತಿಲ್ಲ. ಅವರ ವೈಯಕ್ತಿಕ ಜೀವನದಲ್ಲಿಯೇ ಏನಾದರೂ ಸಮಸ್ಯೆ ಇದ್ದಿರಬಹುದು. ಈ ಕಾರಣಕ್ಕೆ ಅವರು ಖಿನ್ನತೆಗೆ ಜಾರಿರುವ ಸಾಧ್ಯತೆಗಳಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ. ಅವರಿಗೆ ಆರೋಗ್ಯ ಸಮಸ್ಯೆಗಳಿತ್ತು ಎನ್ನುವ ಬಗ್ಗೆನೂ ಸ್ನೇಹಿತರಿಗೆ ಮಾಹಿತಿ ಇಲ್ಲ.


Click it and Unblock the Notifications











