"ನಮ್ಮ ಫೋಟೋ-ವಿಡಿಯೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸೋದು ಒಪ್ಪೋದಿಲ್ಲ": ಸಪ್ತಮಿ ಗೌಡ ಅಭಿಯಾನ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಅದರ ಲಾಭ ಪಡೆದುಕೊಳ್ಳುತ್ತಿರುವುದು ಸಿನಿಮಾ ತಾರೆಯರೇ. ಹಾಗೇ ಅದರಿಂದ ಸಂಕಷ್ಟ ಎದುರಿಸುತ್ತಿರುವುದೂ ಕೂಡ ಅವರೇ. ಅದರಲ್ಲೂ ಇತ್ತೀಚೆಗೆ ಪಾಪರಾಜಿ ಸಂಸ್ಕೃತಿ ಬಂದ್ಮೇಲೆ ನಟಿಯರ ಖಾಸಗಿ ಬದುಕಿಗೆ ಪಟ್ಟು ಬಿದ್ದಂತೆ ಆಗಿದೆ. ಕೆಲವೊಮ್ಮೆ ಪ್ರಚಾರಕ್ಕಾಗಿ ಅವರೇ ಪಾಪರಾಜಿಗಳನ್ನು ಕರೆಸಿಕೊಂಡ ಉದಾಹರಣೆ ಕೂಡ ಇದೆ. ಇದು ಕೆಲ ನಟಿಯರಿಗೆ ಕಿರಿಕಿರಿ ಆಗಿದ್ದು ಕೂಡ ಇದೆ.
ಈಗ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಹೀಗೆ ನಟಿಯರ ಅಸಭ್ಯ ವಿಡಿಯೋಗಳನ್ನು ಮಾಡಿ, ಅದನ್ನು ಜೂಮ್ ಮಾಡಿ ಪ್ರಸಾರ ಮಾಡುವವರ ವಿರುದ್ಧ ತಿರುಗಿಬಿದ್ದಿದ್ದಾರೆ. ಸಪ್ತಮಿ ಗೌಡ ಇಂತಹವರ ವಿರುದ್ಧ ಅಭಿಯಾನವನ್ನೇ ಶುರು ಮಾಡಿದ್ದಾರೆ. ಸಪ್ತಮಿಗೌಡ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಥ್ ಕೊಡುತ್ತಿದ್ದಾರೆ.

ಪಾಪರಾಜಿಗಳ ಅಸಭ್ಯ ವಿಡಿಯೋ ಪೋಸ್ಟ್ ಗಳ ವಿರುದ್ಧ ಸಿಡಿದೆದ್ದ ನಟಿ ಸಪ್ತಮಿ ಗೌಡಗೆ ಸಿಕ್ಕಾಪಟ್ಟೆ ಒಳ್ಳೆಯ ಸಾಥ ಸಿಕ್ಕಿದೆ. ಕಲಾವಿದರನ್ನ ಕಲಾವಿದರಾಗಿ ನೋಡಬೇಕು. ಅದನ್ನು ಬಿಟ್ಟು ಅವರ ದೇಹವನ್ನ ಅಸಭ್ಯ ಕೋನಗಳಿಂದ ಶೂಟ್ ಮಾಡಿ ಪೋಸ್ಟ್ ಮಾಡುವುದನ್ನು ಪ್ರಶ್ನಿಸಿದ್ದಾರೆ. ಇದರ ವಿರುದ್ಧ ಅಭಿಯಾನ ಆರಂಭಿಸಿರುವ ಸಪ್ತಮಿ ಗೌಡಗೆ ಚಿತ್ರರಂಗದ ನಟಿಯರೆಲ್ಲಾ ಒಂದಾಗಿ ಪ್ರತಿಭಟಿಸುವ ನಿರ್ಧಾರ ಮಾಡಿದ್ದಾರೆ. ಸಪ್ತಮಿ ಗೌಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.
"ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ.
ಇಂತಹ ವರ್ತನೆ ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕೆಲಸಕ್ಕಾಗಿ ಬಂದಿದ್ದೇವೆ. ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಅಥವಾ ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ.

ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ನೀತಿ ಕಾಪಾಡಬೇಕು ಎಂದು ನಾವು ನಿಶ್ಚಯಿಸುತ್ತೇವೆ. ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ." ಎಂದು ಸಪ್ತಮಿ ಗೌಡ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಸಪ್ತಮಿ ಗೌಡ ಯಾಕಿ ಇಂತಹ ಅಭಿಯಾನ ಶುರು ಮಾಡಿದರು. ಅವರಿಗೆ ಇತ್ತೀಚೆಗೆ ಯಾವುದಾರೂ ಕಹಿ ಘಟನೆಗಳು ಆಯ್ತಾ? ಯಾವುದಾದರೂ ವಿಡಿಯೋ, ಇಲ್ಲವೇ ಫೋಟೋಗಳು ಅವರ ಮನಸ್ಸಿಗೆ ನೋವುಂಟು ಮಾಡಿದೆಯೇ? ಈ ಅಭಿಯಾನದಿಂದ ಎಲ್ಲವೂ ಸರಿ ಹೋಗುತ್ತಾ? ಮುಂದಿನ ಹೆಜ್ಜೆ ಏನು? ಅನ್ನೋದನ್ನು ಸಪ್ತಮಿ ಗೌಡ ಫಿಲ್ಮಿಬೀಟ್‌ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದರ ಲಿಂಕ್ ಇಲ್ಲಿದೆ.


Click it and Unblock the Notifications











