Ghost Box office: ಬಾಕ್ಸಾಫೀಸ್‌ನಲ್ಲಿ 'ಘೋಸ್ಟ್' ಚೇತರಿಕೆ.. ಮೊದಲ ದಿನಕ್ಕಿಂತ 2ನೇ ದಿನ ದುಪ್ಪಟ್ಟು ಕಲೆಕ್ಷನ್..
ದಸರಾ ಹಬ್ಬದ ಸಂಭ್ರಮದ ಬೆನ್ನಲ್ಲೇ ರಿಲೀಸ್ ಆಗಿರುವ ಕನ್ನಡ ಸಿನಿಮಾ 'ಘೋಸ್ಟ್'. ಶಿವಣ್ಣ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಂದುಕೊಂಡಂತೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿರಲಿಲ್ಲ.
'ಲಿಯೋ' ಹಾವಳಿ ಮುಂದೆ ಕರ್ನಾಟಕದಲ್ಲಿ 'ಘೋಸ್ಟ್' ಹವಾ ನಡೆಯಲಿಲ್ಲ ಅಂತ ಸಿನಿಪ್ರಿಯರ ಬೇಸರ ವ್ಯಕ್ತ ಪಡಿಸಿದ್ದರು. ಆದರೆ, ಮೌತ್ ಪಬ್ಲಿಸಿಟಿ ಆ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ. ನಿಧಾನವಾಗಿ ಜನರು ಲಿಯೋ ಬಿಟ್ಟು 'ಘೋಸ್ಟ್' ಕಡೆಗೆ ವಾಲುತ್ತಿದ್ದಾರೆ.

'ಘೋಸ್ಟ್' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್‌ಗೆ ಹೋಲಿಕೆ ಮಾಡಿದರೆ, ಎರಡನೇ ದಿನದ ಗಳಿಕೆ ದುಪ್ಪಟ್ಟು ಹೆಚ್ಚಾಗಿದೆ ಎಂದು ವಿತರಕರು ಲೆಕ್ಕ ಹಾಕಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 2ನೇ ದಿನ 'ಘೋಸ್ಟ್' ಕಲೆಕ್ಷನ್‌ನಲ್ಲಿ 100% ಏರಿಕೆ ಕಂಡಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಶಿವಣ್ಣನ 'ಘೋಸ್ಟ್' ಸಿನಿಮಾ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಘೋಸ್ಟ್'ಗೆ ಎಲ್ಲೆಲ್ಲೆ ಹೇಗಿದೆ ರೆಸ್ಪಾನ್ಸ್?
'ಘೋಸ್ಟ್' ಸಿನಿಮಾ ಬಾಕ್ಸಾಫೀಸ್ ಬಗ್ಗೆ ಬೇರೆನೇ ಲೆಕ್ಕಚಾರ ಹಾಕಲಾಗಿತ್ತು. ಆದರೆ, ಮೊದಲ ದಿನ ಅಂದುಕೊಂಡಷ್ಟು ಕಲೆಕ್ಷನ್ ಮಾಡಿರಲಿಲ್ಲ. 2ನೇ ದಿನದಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಎರಡನೇ ದಿನ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಕುಂದಾಪುರ ಭಾಗಗಳಲ್ಲಿ 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನಲ್ಲಿ 49% ಆಕ್ಯೂಪೆನ್ಸಿ, ಮೈಸೂರು 33%, ಶಿವಮೊಗ್ಗದಲ್ಲಿ 58%, ಕುಂದಾಪುರ 33%, ತುಮಕೂರು 60.50%, ಮಣಿಪಾಲ್‌ನಲ್ಲಿ 23% ಆಕ್ಯೂಪೆನ್ಸಿ ಇತ್ತೆಂದು sacnilk ವರದಿ ಮಾಡಿದೆ.

'ಘೋಸ್ಟ್' ಎರಡನೇ ದಿನದ ಗಳಿಕೆ ಎಷ್ಟು?
ಬೆಂಗಳೂರಿನಲ್ಲಿ ನಿನ್ನೆ (ಅಕ್ಟೋಬರ್ 20) ರಾತ್ರಿ ಶೋದಿಂದ 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಬಹುತೇಕ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಕರ್ನಾಟಕದ ವಿತರಕರ ಪ್ರಕಾರ, 'ಘೋಸ್ಟ್' ಎರಡನೇ ದಿನ 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (Gross) ಆಗಿದೆ. 1.40 ಕೋಟಿ ರೂಪಾಯಿ ನೆಟ್ (Net) ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ. ಮೊದಲ ದಿನ 1.40 ಕೋಟಿ ರೂಪಾಯಿ ಗ್ರಾಸ್ (Gross) ಕಲೆಕ್ಷನ್ ಆಗಿದೆ ಎಂದು ವರದಿಯಾಗಿತ್ತು.
ವೀಕೆಂಡ್ ಮೇಲೆ ಹೆಚ್ಚಿದ ನಿರೀಕ್ಷೆ
ಶಿವಣ್ಣನ ಮಾಸ್ ಲುಕ್, ವಿಭಿನ್ನ ಶೇಡ್‌ಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಶ್ರೀನಿಯ ಫಾಸ್ಟ್ ಸ್ಕ್ರೀನ್ ಪ್ಲೇ ಕಿಕ್ ಕೊಟ್ಟಿದೆ. ಹೀಗಾಗಿ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಮತ್ತಷ್ಟು ಏರಿಕೆ ಆಗುವ ನಿರೀಕ್ಷೆಯಿದೆ. ಅಲ್ಲದೆ ದಸರಾ ರಜೆಗಳಿದ್ದು, ಪ್ರೇಕ್ಷಕರು ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುತ್ತಾರೆಂಬ ನಿರೀಕ್ಷೆಯಿದೆ. ಮೊದಲ ವೀಕೆಂಡ್ ಹಾಗೂ ದಸರಾ ರಜೆ ಬೆನ್ನಲ್ಲೇ 10 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಾಣಬಹುದು ಎಂದು ಲೆಕ್ಕಚಾರ ಹಾಕಲಾಗಿದೆ.
'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ
ದಳಪತಿ ವಿಜಯ್ ಸಿನಿಮಾ 'ಲಿಯೋ'ಗೆ ಮೊದಲ ದಿನ ಕರ್ನಾಟಕದಲ್ಲಿ 'ಘೋಸ್ಟ್'ಗಿಂತ ಹೆಚ್ಚು ಶೋಗಳು ಸಿಕ್ಕಿದ್ದವು. ಕನ್ನಡದ ಕೆಲವು ಥಿಯೇಟರ್‌ಗಳಲ್ಲಿ ಎರಡು ಶೋಗಳನ್ನಷ್ಟೇ ನೀಡಿದ್ದರು. ಈಗ 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಹೆಚ್ಚು ಶೋಗಳನ್ನು ನೀಡುತ್ತಿದ್ದಾರೆ. ಸಿನಿಪ್ರಿಯರು ಕೂಡ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಧಾವಿಸುತ್ತಿದ್ದಾರೆ.


Click it and Unblock the Notifications











