"ಕಮಲ್ ಹಾಸನ್ ಕನ್ನಡದ ನೆಲದಲ್ಲಿ ಖ್ಯಾತಿ ಹಾಳ್ಮಾಡಿಕೊಂಡ್ರು, ಶಿವಣ್ಣ ಯಾಕೆ ಸುಮ್ಮನಿದ್ದಾರೆ?" ನೆಟ್ಟಿಗರ ಆಕ್ರೋಶ
ಕಮಲ್ ಹಾಸನ್ ಯಾಕೋ ಇತ್ತೀಚೆಗೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೋ, ಇಲ್ಲ ವಿವಾದಗಳೇ ಇವರನ್ನು ಹುಡುಕಿಕೊಂಡು ಬರುತ್ತಿದೆಯೋ ಗೊತ್ತಾಗುತ್ತಿಲ್ಲ. ಅದರಲ್ಲೂ ತಮ್ಮದೇ 'ಥಗ್ ಲೈಫ್' ಸಿನಿಮಾ ಬಿಡುಗಡೆ ವೇಳೆ ಇಂತಹ ವಿವಾದಗಳು ಅಗತ್ಯವಿತ್ತೇ ಎಂದು ಪ್ರಶ್ನೆ ಕೂಡ ಮೂಡುತ್ತದೆ. ಕಮಲ್ ಹಾಸನ್ ಈ ಸಿನಿಮಾದ ಪ್ರಚಾರ ಆರಂಭಿಸಿದ ದಿನದಿಂದಲೂ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ಒಬ್ಬ ಪ್ರಬುದ್ಧ ನಟ ಎಂದೇ ಗುರುತಿಸಿಕೊಂಡಿದ್ದಾರೆ. ಪ್ರಬುದ್ಧ ಪಾತ್ರಗಳಲ್ಲಿ ನಟಿಸುವುದಿರಲಿ, ಇಲ್ಲವೇ ಗಂಭೀರ ವಿಷಯಗಳಿಗೆ ಪ್ರತಿಕ್ರಿಯೆ ನೀಡುವುದಿರಲಿ, ಕಮಲ್ ಹಾಸನ್ ಉತ್ತರ ಅವರಷ್ಟೇ ಪ್ರಬುದ್ಧವಾಗಿ ಇರುತ್ತಿತ್ತು. ಆದರೆ, ಕೆಲವು ದಿನಗಳಿಂದ ಕಮಲ್ ಹಾಸನ್ ಕೊಡುತ್ತಿರುವ ಹೇಳಿಕೆಗಳು ವಿವಾದವನ್ನು ಸೃಷ್ಟಿಸುತ್ತಿವೆ.

ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವುದಕ್ಕೂ ಮುನ್ನ ಹಿಂದಿ ಭಾಷಿಗರನ್ನು ಕೆಣಕಿದ್ದರು. ಹಿಂದಿ ಕಲಿಯುವುದಕ್ಕೂ ಮುನ್ನ ಪಕ್ಕದ ರಾಜ್ಯದ ಭಾಷೆಗಳನ್ನು ಕಲಿಯಿರಿ ಎಂದಿದ್ದರು. ಇದರ ಬೆನ್ನಲ್ಲೇ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿದ್ದಾರೆ. ಇದು ಕನ್ನಡಿಗರ ನಿದ್ದೆ ಕೆಡಿಸಿದೆ. ರಾಜ್ಯದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ಶುರುವಾಗಿವೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಟ್ವಿಟರ್‌ನಲ್ಲೂ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ನೆಲದಲ್ಲಿ ಖ್ಯಾತಿ ಹಾಳು ಮಾಡಿಕೊಂಡ್ರು
"ಕಮಲ್ ಹಾಸನ್ ತಮ್ಮ ಖ್ಯಾತಿಯನ್ನು ಕನ್ನಡದ ನೆಲದಲ್ಲಿ ಹಾಳು ಮಾಡಿಕೊಂಡಿದ್ದಾರೆ. ಕನ್ನಡ ವಿಶ್ವಲಿಪಿಗಳ ರಾಣಿ, ಕನ್ನಡ ಯಾರಿಗೂ ಮಗಳಲ್ಲ ಅದು ಎಲ್ಲರಿಗೂ ತಾಯಿ ಅಷ್ಟೇ." ಎಂದು ನೆಟ್ಟಿಗರೊಬ್ಬರು ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಇಂಡಸ್ಟ್ರಿ ಗೋವಿಂದ
"ಈ ಅತಿಯಾದ ಗೌರವ ಕೊಟ್ಟು ತಲೆ ಮೇಲೆ ಕೂರಿಸಿಕೊಂಡಿರುವುದರಿಂದ ನಮ್ಮ ರಾಜ್ಯದಲ್ಲಿ ನಮ್ಮ ಸಿನಿಮಾಗಳಿಗೆ ಸಮಸ್ಯೆ ಆಗ್ತಿರೋದು. ಆದರೆ, ಈ ಸಿನಿಮಾ ಕರ್ನಾಟಕದಲ್ಲಿ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಹಿಂಗೇ ಹೋದ್ರೆ ಮುಂದೆ ಇಂಡಸ್ಟ್ರಿ ಗೋವಿಂದ" ಎಂದು ಮತ್ತೊಬ್ಬರು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಶಿವಣ್ಣ ಯಾಕೆ ಸುಮ್ಮನಿದ್ದಾರೆ?
ತಮಿಳರು ಜನರು ದೇವರು ಭೂಮಿಗೆ ಬರುವುದಕ್ಕಿಂತಲೂ ಮೊದಲು ತಮಿಳು ಭಾಷೆ ಹುಟ್ಟಿತ್ತು ಎಂದು ಹೇಳಿದರೂ ಅಚ್ಚರಿ ಪಡಬೇಕಿಲ್ಲ. ಕಮಲ್ ಹಾಸನ್‌ನಂತಹ ಹುಚ್ಚ ಅವರಿಗೆ ಏನು ಖುಷಿ ಕೊಡುತ್ತೋ ಹಾಗೆ ಮಾತಾಡುತ್ತಲೇ ಇರುತ್ತಾರೆ. ಶಿವಣ್ಣ ಯಾಕೆ ಈ ಬಗ್ಗೆ ಸೈಲೆಂಟ್ ಆಗಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಮಲ್ ಹಾಸನ್ ಕೊಟ್ಟ ಹೇಳಿಕೆಯನ್ನು ಖಂಡಿಸಿದ್ದಾರೆ.
ಬೇಗ ಹುಷಾರಾಗಿ ಕಮಲ್ ಹಾಸನ್
"Get Well Soon Dummy Hassan ತಮಿಳ್ ಇಂದ ಕನ್ನಡ ಹುಟ್ಟಿಲ್ಲರಿ ಅಯೋಗ್ಯ. ಕನ್ನಡಕ್ಕೆ ತನ್ನದೇ ಆದ ಸ್ವಂತ ಲಿಪಿ ಇದೆ. ಸಾವಿರಾರು ವರ್ಷಗಳ ಇತಿಹಾಸ ಇದೆ. ನಾಲಾಯಕ್ ತಿಳಿದುಕೊಳ್ಳದೆ ಏನೇನೋ ಮಾತಾಡಬೇಡ. ಶಿವಣ್ಣ ನೀನು ಅದನ್ನು ಕೇಳಿ ಸುಮ್ಮನೆ ಇರಬಾರದಿತ್ತು" ಎಂದು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದಷ್ಟೇ ಅಲ್ಲದೆ, ಶಿವಣ್ಣನ ಮೇಲೂ ಬೇಸರ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ಕನ್ನಡ ವಿವಾದ ಕರ್ನಾಟಕದಲ್ಲಿ ವಿವಾದವನ್ನು ಹುಟ್ಟಾಕಿದೆ. ಕನ್ನಡ ಪರ ಸಂಘಟನೆಗಳು ಆಕ್ರೋಶವನ್ನು ಹೊರಹಾಕಿದೆ. 'ಥಗ್ಸ್ ಲೈಫ್' ಸಿನಿಮಾ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕಮಲ್ ಹಾಸನ್ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆಂದು ಕನ್ನಡ ಪರ ಹೋರಾಟಗಾರರು ಕಿಡಿಕಾರಿದ್ದಾರೆ. ಇದೇ ವೇಳೆ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದು ಕಮಲ್ ಹಾಸನ್ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕಾಗುತ್ತೆ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











