ಥಿಯೇಟರ್‌ನಲ್ಲಿ 350 ಕೋಟಿ ರೂ. ಬಾಚಿದ 'ವಿಕ್ರಂ' ಒಟಿಟಿಯಲ್ಲಿ ರಿಲೀಸ್ ಆಗೋದ್ಯಾವಾಗ?
'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡ ಸಿನಿಮಾ ಎಂಬ ಲಿಸ್ಟ್ ಸೇರಿದೆ. ಇನ್ನೊಂದ್ಕಡೆ ಕಮಲ್ ಹಾಸನ್‌ಗೆ ಹಿಂದೆಂದೂ ಸಿಗದ ಯಶಸ್ಸು ಸಿಕ್ಕಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ತಮಿಳರು 'ವಿಕ್ರಂ' ಸಿನಿಮಾ ನೋಡಿ ಬಹುಪರಾಕ್ ಎಂದಿದ್ದಾರೆ. ಈ ಮೂಲಕ ಕಾಲಿವುಡ್‌ನಲ್ಲಿ ಮತ್ತೆ ಹಬ್ಬದ ವಾತಾವರಣ ಮೂಡಿದೆ.
ಈ ಹಿಂದೆ ಬಿಡುಗಡೆಯಾದ ಕಮಲ್ ಹಾಸನ್ ಯಾವುದೇ ಸಿನಿಮಾ ಈ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಈ ಬಾರಿಗೆ ನಿಜಕ್ಕೂ ಕಮಲ್ ಹಾಸನ್ ಲಾಟರಿ ಹೊಡೆದಿದೆ. ಥಿಯೇಟರ್‌ನಲ್ಲಿ 'ವಿಕ್ರಂ' ಇನ್ನೂ ಸದ್ದು ಮಾಡುತ್ತಲೇ ಇದೆ. ಕೇವಲ ಮೂರು ಭಾಷೆಯಲ್ಲಿ ರಿಲೀಸ್ ಆಗಿದ್ದ ಸಿನಿಮಾ 350 ಕೋಟಿ ರೂ.ಗೂ ಅಧಿಕ ಹಣವನ್ನು ಬಾಚಿಕೊಂಡಿದೆ.
ತಮಿಳುನಾಡಿನಲ್ಲಿ 'ವಿಕ್ರಂ' ಸಿನಿಮಾ 'ಬಾಹುಬಲಿ 2' ದಾಖಲೆಯನ್ನು ಮುರಿದಿದೆ. ಇದು ಕಾಲಿವುಡ್ ಹೊಸ ಆಶಾಭಾವ ಮೂಡುವಂತೆ ಮಾಡಿದೆ. 2022ರಲ್ಲಿ ತಮಿಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತಂತಹ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ಕಮಲ್ ಹಾಸನ್ ಆ ದಾಖಲೆಯನ್ನು ನಿರ್ಮಿಸಿ, ತಮಿಳರ ಪಾಲಿಗೆ ಉಳಗನಾಯಗನ್ ಅನ್ನುವುದನ್ನು ಸಾಬೀತು ಮಾಡಿದ್ದಾರೆ. ಇದೇ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

'ವಿಕ್ರಂ' ಒಟಿಟಿ ರಿಲೀಸ್‌ಗೆ ರೆಡಿ
ಕಮಲ್ ಹಾಸನ್ ಸಿನಿಮಾ ಥಿಯೇಟರ್ ಇನ್ನೂ ಸದ್ದು ಮಾಡುತ್ತಿದೆ. ವಿಶ್ವದ ಹಲವಡೆ ಈ ಸಿನಿಮಾ ನೋಡುವವರ ಸಂಖ್ಯೆ ಇನ್ನೂ ಕುಗ್ಗಿಲ್ಲ. ಜೂನ್ 03ರಂದು ರಿಲೀಸ್ ಆಗಿದ್ದ ಸಿನಿಮಾ ಹೆಚ್ಚು ಕಡಿಮೆ ಮೂರು ವಾರಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ಥಿಯೇಟರ್ ರೆಸ್ಪಾನ್ಸ್ ಇನ್ನೂ ಉತ್ತಮವಾಗಿರುವಾಗಲೇ ಒಟಿಟಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಜುಲೈ 08ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

'ವಿಕ್ರಂ' ಯಾವ ಒಟಿಟಿಯಲ್ಲಿ ರಿಲೀಸ್ ?
ಕಮಲ್ ಹಾಸನ್ ಕರಿಯರ್‌ನ ಮೋಸ್ಟ್ ಸಕ್ಸಸ್‌ಫುಲ್ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ವೇದಿಕೆ ರೆಡಿ ಮಾಡುತ್ತಿದೆ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಕಮಲ್ ಹಾಸನ್ ಸಿನಿಮಾ ವಿಕ್ರಂ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಮಾಡಿಕೊಂಡು 5 ವಾರಗಳ ಅಗ್ರಿಮೆಂಟ್ ಪ್ರಕಾರ, 'ವಿಕ್ರಂ' ಸಿನಿಮಾ ಜುಲೈ 08ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಇದೂವರೆಗೂ ಸಿನಿಮಾ ನೋಡದೆ ಇರುವವರು ಹಾಗೂ ಮತ್ತೆ ನೋಡಬೇಕು ಅನ್ನುವವರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.

ಇನ್ನೂ ಅನೌನ್ಸ್ ಆಗಿಲ್ಲ
ಒಟಿಟಿ ವೇದಿಕೆ ಡಿಸ್ನಿ+ ಹಾಟ್‌ಸ್ಟಾರ್ 'ವಿಕ್ರಂ' ಸಿನಿಮಾ ಬಿಡುಗಡೆ ದಿನವನ್ನು ಅಧಿಕೃತವಾಗಿ ಇನ್ನೂ ಹೇಳಿಲ್ಲ. ಆದರೆ, ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಜುಲೈ 8ರಂದು 'ವಿಕ್ರಂ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ಒಟಿಟಿಯಲ್ಲೂ ವಿಕ್ರಂ ಸಿನಿಮಾ ಗೆಲ್ಲುತ್ತಾ? ಅನ್ನುವ ಕುತೂಹಲ ಕೆರಳಿಸಿದೆ.

'ವಿಕ್ರಂ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಕಮಲ್ ಹಾಸನ್ ಸಿನಿಮಾ 'ವಿಕ್ರಂ' ಬಾಕ್ಸಾಫೀಸ್‌ನಲ್ಲಿ ದೋಚುವುದನ್ನು ಇನ್ನೂ ನಿಲ್ಲಿಸಿಲ್ಲ. ಮೂಲಗಳ ಪ್ರಕಾರ, ವಿಶ್ವದಾದ್ಯಂತ 'ವಿಕ್ರಂ' ಸಿನಿಮಾದ ಕಲೆಕ್ಷನ್ 370 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. 19ನೇ ದಿನದಂದೂ ಈ ಸಿನಿಮಾ ಸುಮಾರು 3.75 ಕೋಟಿ ಕಲೆ ಹಾಕಿದೆ ಎನ್ನಲಾಗಿದೆ.


Click it and Unblock the Notifications











