ಪ್ರಸಾರಕ್ಕೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದ ರಮ್ಯಾ ಕೃಷ್ಣ ರಿಯಾಲಿಟಿ ಶೋ;'ಸೆಕೆಂಡ್ ಲವ್' ಪ್ರೋಮೊಗೆ ಜನ ಸುಸ್ತಾಗಿದ್ದೇಕೆ?
ಕಿರುತೆರೆಗಳು ವೀಕ್ಷಕರನ್ನು ಸೆಳೆಯುವುದಕ್ಕೆ ಹೊಸ ಹೊಸ ಶೋಗಳನ್ನು ಪರಿಚಯ ಮಾಡುತ್ತಲೇ ಇರುತ್ತವೆ. ಅದರಲ್ಲೂ ಕ್ರಿಯೇಟಿವ್ ಆಗಿ ಹೊಸ ರಿಯಾಲಿಟಿ ಶೋಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡತ್ತಲೇ ಇರುತ್ತವೆ. ಅದರಲ್ಲೂ ಬಿಗ್ ಬಾಸ್ ಬಳಿಕ ಅದಕ್ಕೆ ಟಕ್ಕರ್ ಕೊಡುವಂತ ರಿಯಾಲಿಟಿ ಶೋ ಅನ್ನು ಕೊಡುವುದಕ್ಕೆ ಎಲ್ಲಾ ಭಾಷೆಯ ಕಿರುತೆರೆ ವಾಹಿನಿಗಳು ಪ್ರಯತ್ನ ಪಡುತ್ತಲೇ ಇವೆ. ಆದರೆ, ಗೆದ್ದಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ.
ಇಂತಹ ಪ್ರಯತ್ನ ಕೆಲವು ವಾಹಿನಿಗಳು ವೀಕ್ಷಕರ ಅಭಿರುಚಿಗೆ ವಿರುದ್ಧವಾಗಿ ರಿಯಾಲಿಟಿ ಶೋ ಅನ್ನು ವಿನ್ಯಾಸಗೊಳಿಸಿ ಇಕ್ಕಟ್ಟಿಗೆ ಸಿಲುಕಿದ್ದು ಇದೆ. ಆ ಶೋಗಳು ವಿವಾದಕ್ಕೆ ಸಿಲುಕಿ ದೊಡ್ಡ ಸಮಸ್ಯೆಯನ್ನೇ ತಂದೊಡ್ಡಿದ್ದ ಉದಾಹರಣೆಗಳು ಸಾಕಷ್ಟಿವೆ. ಈಗ ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣ ನಿರೂಪಣೆ ಮಾಡುವುದಕ್ಕೆ ಹೊರಟಿರೋ ಹೊಸ ರಿಯಾಲಿಟಿ ಶೋ ಕೂಡ ಅದೇ ರೀತಿ ಪೇಚಿಗೆ ಸಿಕ್ಕಿಕೊಂಡಿದೆ.

ಹೌದು, ಬಹುಭಾಷಾ ನಟಿ ರಮ್ಯಾ ಕೃಷ್ಣ 'ಸೆಕೆಂಡ್ ಲವ್' ಅನ್ನೋ ಹೊಸ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಆದರೆ, ಈ ಶೋನ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಗಾಗಿವೆ. ಅಷ್ಟಕ್ಕೂ ಈ ರಿಯಾಲಿಟಿ ಶೋ ವಿರುದ್ಧ ಜನರು ತಿರುಗಿಬಿದ್ದಿದ್ದೇಕೆ? ನೆಟ್ಟಿಗರ ವಾದವೇನು? ನೆಟ್ಟಿಗರು ವಾಹಿನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.
ಆರಂಭಕ್ಕೂ ಮುನ್ನವೇ ಆಕ್ರೋಶ
ತಮಿಳಿನ ವಿಜಯ ಟಿವಿಯಲ್ಲಿ ಈ ಹೊಸ ರಿಯಾಲಿಟಿ ಶೋ ಆರಂಭ ಆಗುತ್ತಿದೆ. ಅತೀ ಉತ್ಸಾಹದಲ್ಲಿ 'ಸೆಕೆಂಡ್ ಲವ್' ರಿಯಾಲಿಟಿ ಶೋ ಪ್ರೋಮೊವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಈ ರಿಯಾಲಿಟಿ ಶೋ ಆರಂಭಕ್ಕೂ ಮುನ್ನವೇ ತೀವ್ರ ವಿವಾದಕ್ಕೆ ಸಿಕ್ಕಿಕೊಂಡಿದೆ. ಈ ಕಾರ್ಯಕ್ರಮದ ಮೊದಲ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ನೆಟ್ಟಿಗರು ವಾಹಿನಿಯ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತೊದ್ದಾರೆ.
'ಸೆಕೆಂಡ್ ಲವ್' ಶೋ ಕಲ್ಪನೆ ಏನು?
'ಸೆಕೆಂಡ್ ಲವ್' ಕಿರುತೆರೆಯಲ್ಲಿ ಬಿಗ್ ಬಾಸ್ ಮಾದರಿಯಲ್ಲೇ ಮೂಡಿ ಬರಲಿರುವ ಒಂದು ವಿಭಿನ್ನ ಹಿನ್ನೆಲೆಯುಳ್ಳ ರಿಯಾಲಿಟಿ ಶೋ ಅನ್ನೋದು ನಿಜ. ಯಾಕಂದ್ರೆ, ಈ ಶೋನಲ್ಲಿ ಪ್ರೀತಿ ಮತ್ತು ವೈವಾಹಿಕ ಸಂಬಂಧಗಳಲ್ಲಿ ಸೋತಿರುವ ಆರು ಜೋಡಿಗಳನ್ನು ಆಯ್ಕೆ ಮಾಡಲಾಗಿದೆ. ಇವರನ್ನು ಒಂದೇ ಸೂರಿನಲ್ಲಿ ಒಟ್ಟಿಗೆ ಇರಿಸಿ, ಅದರಲ್ಲಿ ವಿಭಿನ್ನ ಟಾಸ್ಕ್‌ಗಳನ್ನು ನೀಡಲಾಗುತ್ತೆ. ಈ ಟಾಸ್ಕ್‌ನಲ್ಲಿ ಈ ಜೋಡಿಗಳು ಮತ್ತೆ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮತ್ತೊಮ್ಮೆ ಪ್ರೀತಿ ಮಾಡಲು ಮುಂದಾಗುತ್ತಾರಾ? ಅನ್ನೋದು ಈ ಕಾರ್ಯಕ್ರಮದ ಕಾನ್ಸೆಪ್ಟ್.

ವಿವಾದಕ್ಕೆ ಏನು ಕಾರಣ?
'ಸೆಕೆಂಡ್ ಲವ್' ರಿಯಾಲಿಟಿ ಶೋನ ಆಶಯ ಚೆನ್ನಾಗಿಯೇ ಇದ್ದರೂ, ಪ್ರೋಮೋದಲ್ಲಿ ಹೈಲೈಟ್ ಮಾಡಲಾದ ಕೆಲವು ಅಂಶಗಳು ವೀಕ್ಷಕರ ಕಣ್ಣುಗಳನ್ನು ಕೆಂಪಾಗಿಸಿವೆ. ಈ ಪ್ರೋಮೊದಲ್ಲಿ ಸ್ಪರ್ಧಿಯೊಬ್ಬರು "18+ ಸವಾಲುಗಳು ಇದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳಿದ್ದಾರೆ. ಅದಕ್ಕೆ ಮತ್ತೊಬ್ಬ ಸ್ಪರ್ಧಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರೋಮೊ ನೋಡುತ್ತಿದ್ದಂತೆ ಕಿರುತೆರೆ ವೀಕ್ಷಕರು ರಿಯಾಲಿಟಿ ಶೋನ ಘನತೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ರಮ್ಯಾ ಕೃಷ್ಣ ನಿರೂಪಣೆ
ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣನ್ ಈ ವಿವಾದಾತ್ಮಕ ರಿಯಾಲಿಟಿ ಶೋಗೆ ನಿರೂಪಣೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಟೀಕೆ ವ್ಯಕ್ತವಾಗಿದ್ದರೂ ಕೆಲವರು ನಟಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ರಮ್ಯಾ ಕೃಷ್ಣನ್ ನಿರೂಪಣೆ ಮಾಡುತ್ತಿರೋದ್ರಿಂದ ಈ ರಿಯಾಲಿಟಿ ಶೋ ಗಂಭೀರವಾಗಿರಲಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಆದರೂ, ನೆಟ್ಟಿಗರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುವುದನ್ನು ನಿಲ್ಲಿಸಿಲ್ಲ. "ಬಿಗ್ ಬಾಸ್ ಕಾರ್ಯಕ್ರಮದ ಕೇವಲ ಲವ್ ಟ್ರ್ಯಾಕ್ ಅನ್ನು ಮಾತ್ರ ಇಟ್ಕೊಂಡು ಶೋ ಮಾಡಲಾಗಿದೆ" ಎಂದು ಟೀಕಿಸುತ್ತಿದ್ದಾರೆ. ಇನ್ನೊಂದು ಕಡೆ "ಇಂತಹ ಶೋಗಳನ್ನು ಕುಟುಂಬದೊಂದಿಗೆ ಕುಳಿತು ವೀಕ್ಷಿಸಲು ಸಾಧ್ಯವೇ?" ಎಂದೂ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.


Click it and Unblock the Notifications
