ರಜನಿಕಾಂತ್ ಜೊತೆ ಕಮಲ್ ಹಾಸನ್ ಸಿನಿಮಾ: ಅಬುಧಾಬಿಯಲ್ಲಿ ಸುಳಿವು ಕೊಟ್ಟ ಉಳಗನಾಯಗನ್
ದಕ್ಷಿಣ ಭಾರತದ ಇಬ್ಬರು ಮಹಾನ್ ನಟರು ಯಾರು ಅಂತ ಹೇಳಬೇಕಿಲ್ಲ. ಉಳಗನಾಯಗನ್ ಕಮಲ್ ಹಾಸನ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್. ಇಬ್ಬರೂ ಹೆಚ್ಚು ಕಡಿಮೆ ಒಟ್ಟಿಗೆ ಸಿನಿಮಾ ಜರ್ನಿಯನ್ನು ಆರಂಭಿಸಿದ್ದರು. ಒಬ್ಬರೂ ಒಟ್ಟಿಗೆ ಸ್ಟಾರ್ ಪಟ್ಟಕ್ಕೇರಿದರು.
ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ಇಬ್ಬರೂ ಉತ್ತಮ ಗೆಳೆಯರು. ಮತ್ತೆ ಈ ಜೋಡಿ ಒಟ್ಟಿಗೆ ನಟಿಸಬೇಕು ಅನ್ನೋದು ಇಬ್ಬರ ಅಭಿಮಾನಿಗಳ ಆಸೆ. ಆದರೆ, ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಟ್ಟಿಗೆ, ಒಂದೇ ಸಿನಿಮಾದಲ್ಲಿ ನಟಿಸದೇ ಹಲವು ವರ್ಷಗಳೇ ಕಳೆದಿವೆ.

ಸದ್ಯ ಕಾಲಿವುಡ್‌ನಲ್ಲಿ ಕಮಲ್ ಹಾಸನ್ ಹಾಗೂ ರಜನಿಕಾಂತ್ ಇಬ್ಬರೂ ಒಟ್ಟಿಗೆ, ಒಂದೇ ಸಿನಿಮಾಗೆ ಕೆಲಸ ಮಾಡುತ್ತಾರೆ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಕಮಲ್ ಹಾಸನ್ ಕೂಡ ಸುಳಿವು ನೀಡಿದ್ದಾರೆ. ಆದರೆ, ಈ ಸುದ್ದಿಯಲ್ಲಿ ಚಿಕ್ಕದೊಂದು ಟ್ವಿಸ್ಟ್ ಇದೆ.
ರಜನಿ-ಕಮಲ್ ಇಬ್ಬರೂ ಬ್ಯುಸಿ
ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಸದ್ಯಕ್ಕೆ ಬ್ಯುಸಿ. ಕಮಲ್ ಹಾಸನ್ 'ಇಂಡಿಯನ್ 2' ಸಿನಿಮಾದಲ್ಲಿ ನಟಿಸುತ್ತಿದ್ದರೆ, ಇನ್ನೊಂದು ಕಡೆ ರಜನಿಕಾಂತ್ 'ಜೈಲರ್', 'ಲಾಲ್ ಸಲಾಂ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಆದರೂ, ಇಬ್ಬರೂ ಒಂದು ಸಿನಿಮಾಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಆದರೆ, ಕಮಲ್ ಹಾಸನ್ ಹಾಗೂ ರಜನಿಕಾಂತ್ ಇಬ್ಬರೂ ಒಟ್ಟಿಗೆ ನಟಿಸುವುದಿಲ್ಲ. ಕಮಲ್ ಹಾಸನ್ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಐಫಾ ಸಮಾರಂಭಕ್ಕೆ ತೆರಳಿದ್ದ ವೇಳೆ ಸ್ವತ: ಕಮಲ್ ಹಾಸನ್ ಅವರೇ ಸುಳಿವು ಕೊಟ್ಟಿದ್ದಾರೆ." ರಜನಿಕಾಂತ್ ಜೊತೆ ಸಿನಿಮಾ ಮಾಡುವ ಚರ್ಚೆ ನಡೆಯುತ್ತಿರೋದು ನಿಜ" ಎಂದು ಹೇಳಿದ್ದಾರೆ.
ಲೋಕೇಶ್ ಕನಗರಾಜ್ ಡೈರೆಕ್ಷನ್
ಕಳೆದ ಕೆಲವು ದಿನಗಳಿಂದ ಲೋಕೇಶ್ ಕನಗರಾಜ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಅದ್ಯಾಕೋ ಈಗ ನಿಜ ಅಂತ ಅನಿಸುತ್ತಿದೆ. ರಜನಿಕಾಂತ್ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಿದರೆ, ಆ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.
ಕಾಲಿವುಡ್ ಮೂಲಗಳ ಪ್ರಕಾರ, ಇನ್ನು ಎರಡು ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ. ಆಗಸ್ಟ್ ಇಲ್ಲವೇ ಸೆಪ್ಟೆಂಬರ್ ವೇಳೆ ಸಿನಿಮಾದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬಹುದು ಎಂಬ ಸುದ್ದಿ ಓಡಾಡುತ್ತಿದೆ. ಅಲ್ಲದೆ ಈ ಸಿನಿಮಾ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆಂದು ವರದಿಯಾಗಿದೆ.
ಕಮಲ್ ಹಾಸನ್ ಫುಲ್ ಬ್ಯುಸಿ
'ವಿಕ್ರಂ' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ ಬಳಿಕ ಕಮಲ್ ಹಾಸನ್ ಫುಲ್ ಆಕ್ಟಿವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಸಿಂಬು ಹಾಗೂ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಮಣಿರತ್ನಂ ಸಿನಿಮಾಗೂ ಕಮಲ್ ಹಾಸನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ತಾತ್ಕಾಲಿಕವಾಗಿ 'KH 234' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಶುರುವಾಗಬೇಕಿದ್ದು, ತ್ರಿಶಾ ಹೀರೊಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ತ್ರಿಶಾ ಅಂಬು ಮತ್ತು ತೂಂಗಾವನಂ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.


Click it and Unblock the Notifications











