ರೋಗಿಗಳಿಗಾಗಿ ನನ್ನ ಮನೆಯನ್ನೇ ತಗೊಂಡು ಆಸ್ಪತ್ರೆ ಮಾಡಿ ಎಂದ ಕಮಲ ಹಾಸನ್
ಕೊರೊನಾ ವೈರಸ್ ಹಾವಳಿಯಿಂದ ಇಡೀ ಭಾರತವೇ ಬಹುತೇಕ ಬಂದ್ ಆಗಿದೆ. ಚಿತ್ರರಂಗ ಕೂಡ ಯಾವುದೇ ಚಟುವಟಿಕೆ ನಿಂತಿದೆ. ಈ ನಡುವೆ ಸೆಲೆಬ್ರಿಟಿಗಳು ಸರ್ಕಾರದ ಪರಿಹಾರ ನಿಧಿ ಹಾಗೂ ಸಿನಿಮಾ ರಂಗದ ಕಾರ್ಮಿಕರಿಗೆ ಧನ ಸಹಾಯ ಮಾಡಲು ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಮನೆಯನ್ನೇ ಆಸ್ಪತ್ರೆಯನ್ನಾಗಿ ಬೇಕಾದರೆ ಪರಿವರ್ತಿಸಿಕೊಳ್ಳಿ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಸರ್ಕಾರಕ್ಕೆ ಹೇಳಿದ್ದಾರೆ. ಸರ್ಕಾರ ಯಾವಾಗ ಅನುಮತಿ ನೀಡುತ್ತದೆಯೋ ಆಗ ತಮ್ಮ ಮನೆಯನ್ನು ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ಬಿಟ್ಟುಕೊಡಲು ಸಿದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.

ಆಸ್ಪತ್ರೆ ಮಾಡಲು ಸಿದ್ಧ
ಕಮಲ್ ಹಾಸನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ತಮ್ಮ ಮಕ್ಕಳ್ ನೀದಿ ಮಯ್ಯಮ್ (ಎಂಎನ್‌ಎಂ) ಪಕ್ಷದ ವೈದ್ಯರ ನೆರವಿನಿಂದ ಒಂದು ಕಾಲದಲ್ಲಿ ತಾವು ವಾಸಿಸುತ್ತಿದ್ದ ಕಟ್ಟಡವನ್ನು ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಬಯಸಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಹೊಗಳಿದ ಕಮಲ್
ಬಡವರಲ್ಲಿಯೇ ಬಡವರಿಗೆ ಸಹಾಯ ಮಾಡಲು ಮುಂದಾಗಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಕಮಲ ಹಾಸನ್ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಜೀವನೋಪಾಯದ ನೆಲೆಯನ್ನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಭಯದಿಂದ ಅದರ ಕುರಿತು ಪ್ರಧಾನಿಗೆ ಪತ್ರ ಬರೆಯುವಂತಾಗಿತ್ತು. ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅವರಿಗೆ ಬೆಂಬಲ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಕಮಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಲ್ವರು ನಾಲ್ಕು ದಿಕ್ಕು
ಕಮಲ ಹಾಸನ್, ಅವರ ಪತ್ನಿ ಸಾರಿಕಾ, ಮಕ್ಕಳಾದ ಅಕ್ಷರ ಹಾಸನ್ ಮತ್ತು ಶ್ರುತಿ ಹಾಸನ್, ನಾಲ್ವರೂ ಪ್ರತ್ಯೇಕ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಸಾರಿಕಾ ಮತ್ತು ಶ್ರುತಿ ಹಾಸನ್ ಮುಂಬೈನ ಎರಡು ಬೇರೆ ಮನೆಗಳಲ್ಲಿ ಇದ್ದರೆ, ಕಮಲ ಹಾಸನ್ ಮತ್ತು ಅಕ್ಷರ ಹಾಸನ್ ಚೆನ್ನೈನ ಎರಡು ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಶ್ರುತಿ ಹಾಸನ್
ಲಂಡನ್‌ಗೆ ತೆರಳಿದ್ದ ಶ್ರುತಿ ಹಾಸನ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಅವರು ಮುಂಬೈನ ಮನೆಯಲ್ಲಿ ಕ್ವಾರೆಂಟೀನ್ ಆಗಿದ್ದಾರೆ. ತಾವು ಸುರಕ್ಷಿತವಾಗಿದ್ದು, ಎಲ್ಲರೂ ಮನೆಯೊಳಗೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











