ಶ್ರೀದೇವಿ ಜೊತೆ ಕಮಲ್ ಹಾಸನ್ ಪ್ರೀತಿಯಲ್ಲಿ ಬಿದ್ದಿದ್ದರೇ? ಯಾರೂ ನಂಬುವುದಿಲ್ಲ ಎಂದಿದ್ದೇಕೆ ಉಳಗನಾಯಗನ್?
ತಮಿಳು ನಟ ಕಮಲ್ ಹಾಸನ್ ಸಿನಿಮಾಗಳು ಎಲ್ಲರಿಗೂ ಇಷ್ಟ. ಅವರ ವೃತ್ತಿ ಬದುಕಿನಲ್ಲಿ ಬಹುತೇಕ ಎಲ್ಲಾ ಪ್ರಮುಖ ಸಿನಿಮಾಗಳಲ್ಲಿ ನಟಿಸಿ ಸೂಪರ್‌ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಗಿಂತ ವಿವಾದದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಷ್ಟೇ. ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದೆ ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಕಮಲ್ ಗುರಿಯಾಗಿದ್ದರು. ಹೀಗಾಗಿ ಅವರ 'ಥಗ್ ಲೈಫ್' ಸಿನಿಮಾ ರಿಲೀಸ್ ಆಗಿರಲಿಲ್ಲ.
ವಿವಾದಗಳನ್ನು ಹೊರತು ಪಡಿಸಿದರೆ, ನಟನೆ ವಿಷಯದಲ್ಲಿ ಕಮಲ್ ಹಾಸನ್ ಅದ್ಭುತ ನಟ. ಕಮಲ್ ತಮ್ಮ 6ನೇ ವಯಸ್ಸಿನಲ್ಲಿಯೇ ಬಾಲ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಅವರ ಸಿನಿಮಾ ಜರ್ನಿ ಶುರುವಾಗಿತ್ತು. ಕೇವಲ ಬಾಲ ನಟನಾಗಿ ಅಷ್ಟೇ ಅಲ್ಲ, ನಾಯಕನಾಗಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇಂದಿಗೂ ಕಮಲ್ ಹಾಸನ್ ನಟಿಸಿದ ಕೆಲವು ಸಿನಿಮಾಗಳು ಕ್ಲಾಸಿಕಲ್ ಲಿಸ್ಟ್‌ನಲ್ಲಿವೆ. ಕೆಲವು ಲವ್ ಸ್ಟೋರಿಗಳಿಗೆ ಇಂದಿಗೂ ಮರುಳಾಗುವವರು ಇದ್ದಾರೆ.

ಅದರಲ್ಲೂ ಕಮಲ್ ಹಾಸನ್ ಹಾಗೂ ಶ್ರೀದೇವಿ ಕೆಮಿಸ್ಟ್ರಿ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಿತ್ತು. ಇಬ್ಬರೂ ನಿಜಕ್ಕೂ ಪ್ರೀತಿ ಮಾಡುತ್ತಿದ್ದಾರೇನೋ ಎಂದು ನಂಬುವಷ್ಟು ಸಹಜವಾಗಿ ನಟಿಸುತ್ತಿದ್ದರು. ಇದೇ ವೇಳೆ ಕಮಲ್ ಹಾಸನ್ ಹಾಗೂ ಶ್ರೀದೇವಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಕಮಲ್ ಹಾಸನ್ ಸಂದರ್ಶನವೊಂದರಲ್ಲಿ ಓಪನ್ ಆಗಿ ಮಾತಾಡಿದ್ದರು. ಅದೀಗ ಮತ್ತೆ ಟ್ರೆಂಡಿಂಗ್‌ನಲ್ಲಿದೆ.
ಕಮಲ್ ಹಾಸನ್ ಇದೂವರೆಗೂ ಸಾಕಷ್ಟು ನಟಿಯೊಂದಿಗೆ ನಟಿಸಿದ್ದಾರೆ. ತೆರೆಮೇಲೆ ಇವರ ರೊಮ್ಯಾಂಟಿಕ್ ಕೆಮಿಸ್ಟ್ರಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಕಮಲ್ ಹಾಸನ್ ದಾಂಪತ್ಯ ಜೀವನದಲ್ಲಿ ಸೋತಿದ್ದರೂ, ತೆರೆಮೇಲೆ ಮಿಂಚಿದ್ದಾರೆ. ಕಮಲ್ ಯಾವ ನಟಿಯೊಂದಿಗೆ ನಟಿಸಿದರೂ ಅವರೊಂದಿಗೆ ಗಾಸಿಪ್‌ಗೆ ಸಿಕ್ಕಿಕೊಳ್ಳುತ್ತಿದ್ದರು. 'ಥಗ್ ಲೈಫ್' ನಿರೀಕ್ಷೆಯಷ್ಟು ಯಶಸ್ವಿಯಾಗದೇ ಇದ್ದರೂ ಅಭಿರಾಮಿ ಹಾಗೂ ತ್ರಿಶಾ ಜೊತೆಗಿನ ಚುಂಬನದ ದೃಶ್ಯಗಳು ಸದ್ದು ಮಾಡಿದ್ದವು. ಈ ವೇಳೆ ತಮಿಳು ಪ್ರೇಕ್ಷಕರಿಂದಲೇ ಟೀಕೆ ಗುರಿಯಾಗಿದ್ದರು.
ಹೀಗೆ ಕಮಲ್ ಹಾಸನ್ ಹಾಗೂ ಶ್ರೀದೇವಿ ಬಗ್ಗೆ ಗಾಳಿ ಸುದ್ದಿಗಳು ಹಬ್ಬಿದ್ದವು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶ್ರೀದೇವಿ ಜೊತೆ ಕಮಲ್ ಹಾಸನ್ ಮದುವೆ ಆಗಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇವರಿಬ್ಬರ ಸಂಬಂಧದ ಬಗ್ಗೆ ಕೆಲವು ವರ್ಷಗಳ ಹಿಂದೆ ಕಮಲ್ ಹಾಸನ್ ನೀಡಿದ್ದ ಸಂದರ್ಶನವೊಂದರಲ್ಲಿ ಅಸಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ನಮ್ಮಿಬ್ಬರ ಬಗ್ಗೆ ಗಾಳಿ ಸುದ್ದಿಗಳು ಹಬ್ಬಿದ್ದವು. ಆದರೆ, ಅದ್ಯಾವುದೂ ನಿಜವಲ್ಲ. ಶ್ರೀದೇವಿ ಮತ್ತು ನಾನು ಸಹೋದರ ಸಹೋದರಿ ಇದ್ದಂತೆ ಎಂದು ಕಮಲ್ ಹಾಸನ್ ಹೇಳಿದ್ದರು. ಶ್ರೀವಿದ್ಯಾ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದೇನೊ ಅದೇ ರೀತಿಯಲ್ಲಿ ಶ್ರೀದೇವಿಯೊಂದಿಗೆ ನಡೆಯುತ್ತಿದ್ದೆ ಎಂದೂ ಹೇಳುತ್ತಾರೆ. ಆದರೆ, ಅದ್ಯಾವುದೂ ನಿಜವಲ್ಲ ಎಂದು ಕಮಲ್ ಹಾಸನ್ ಹೇಳಿದ್ದರು.

ಇದೇ ಸಂದರ್ಶನದಲ್ಲಿ ಕಮಲ್ ಹಾಸನ್ ನಾನು ಶ್ರೀದೇವಿ ಹತ್ತಿರ ಹೋಗಿ ಮುಟ್ಟಿದರೆ ಸಾಕಿತ್ತು ಅವಳು ಹೆದರುತ್ತಿದ್ದಳು. ನಾವು ಶೂಟಿಂಗ್ ಮಾಡುವ ಸಮಯದಲ್ಲಿ ಶ್ರೀದೇವಿ ನನ್ನನ್ನು ಸರ್ ಎಂದೇ ಕರೆಯುತ್ತಿದ್ದಳು. ಹೀಗಿದ್ದರೂ, ನಾವಿಬ್ಬರೂ ಗಂಡ ಹೆಂಡತಿ ಎಂದು ಅನೇಕ ವರದಿಗಳನ್ನು ಮಾಡಲಾಯಿತು. ನಾವು ಹಾಗಿರಲಿಲ್ಲ ಎಂದು ಎಷ್ಟು ಹೇಳಿದರೂ ಯಾರೂ ಅದನ್ನು ನಂಬಲಿಲ್ಲ ಎಂದು ಕಮಲ್ ಹಾಸನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.
ಕಮಲ್ ಹಾಸನ್ ಏನೂ ಇಲ್ಲ ಎಂದರೂ, ನಟಿ ಕುಟ್ಟಿಪದ್ಮಿನಿ ಇವರಿಬ್ಬರ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿ ಹಾಗೂ ಕಮಲ್ ಹಾಸನ್ ಒಳ್ಳೆಯ ಜೋಡಿ. ಕಮಲ್ ಹಾಸನ್ ಜೊತೆ ನಟಿಸಿದ ಶ್ರೀದೇವಿಗೆ ವಿಶೇಷವಾದ ಪ್ರೀತಿಯಿತ್ತು. ಆ ವೇಳೆ ಕಮಲ್ ಹಾಗೂ ರೇಖಾ ಅವರ ಬಗ್ಗೆ ಗಾಸಿಪ್ ಹಬ್ಬಿತ್ತು. ಈ ಸುದ್ದಿಯನ್ನು ಕೇಳಿ ಶ್ರೀದೇವಿ ಹಲವು ಬಾರಿ ನನ್ನೊಂದಿಗೆ ಬೇಸರವನ್ನು ತೋಡಿಕೊಂಡಿದ್ದರು. ಇನ್ನು ಕಮಲ್ ಹಾಸನ್ ಜೊತೆ ನಟಿಸಿದ ನಟಿಯರು ಅವರನ್ನು ಪ್ರೀತಿಸುತ್ತಿದ್ದರು. ಏಕೆಂದರೆ, ಕಮಲ್ ಸುಂದರ ಹಾಗೂ ಅದ್ಭುತ ನಟನಾಗಿದ್ದರು. ಹೀಗೇ ಶ್ರೀದೇವಿ ಕೂಡ ಕಮಲ್‌ರನ್ನು ಪ್ರೀತಿಸುತ್ತಿದ್ದರು. ಆದರೆ, ಕಮಲ್ ಹಾಸನ್ ಕೊನೆಯಲ್ಲಿ ವಾಣಿ ಗಣಪತಿಯನ್ನು ಮದುವೆಯಾದ್ದರು ಎಂದು ಹೇಳಿದ್ದರು.


Click it and Unblock the Notifications











