ತಮಿಳರಿಂದಲೂ ಬ್ಯಾನ್.. ಭಾರತವನ್ನೇ ತೊರೆಯುತ್ತೇನೆ ಎಂದಿದ್ದ ಕಮಲ್ ಹಾಸನ್: ಅಹಂ ತೋರಿಸಿದ್ದು ಇದೇ ಮೊದಲೇನಲ್ಲ!
ಕಮಲ್ ಹಾಸನ್ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಬೇಡದ ವಿಷಯಕ್ಕೆ ಹಲವು ಬಾರಿ ವಿವಾದಗಳಲ್ಲಿ ಸಿಕ್ಕಿಕೊಂಡಿದ್ದು ಇದೆ. ಆಗಲೂ ತನ್ನ ಅಹಂ ಅನ್ನು ಬಿಟ್ಟುಕೊಟ್ಟಿರಲಿಲ್ಲ. ಹಿಂದೊಮ್ಮೆ ದೇಶವನ್ನೇ ತೊರೆಯುವುದಾಗಿ ಕಮಲ್ ಹಾಸನ್ ಹೇಳಿದ್ದರು. ಈಗ ಕನ್ನಡ ಭಾಷೆಯ ಬಗ್ಗೆ ವಿವಾದ ಎಬ್ಬಿಸಿ, ಕ್ಷಮೆ ಕೇಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ದೇಶ ತೊರೆಯುತ್ತೇನೆ ಎಂದಿದ್ದ ಕಮಲ್ ಹೇಳಿಕೆಯ ಬಗ್ಗೆ ಚರ್ಚೆಯಾಗುತ್ತಿದೆ.
'ಥಗ್ ಲೈಫ್' ಇವೆಂಟ್‌ನಲ್ಲಿ ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿಕೆ ಕೊಟ್ಟಿದ್ದ ಕಮಲ್ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಹೋರಾಟಗಾರರು ತಿರುಗಿಬಿದ್ದಿದ್ದಾರೆ. 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಕನ್ನಡ ಹೋರಾಟಗಾರರ ಪಟ್ಟು. ಹೈಕೋರ್ಟ್ ಸಹ ಕ್ಷಮೆ ಕೇಳುವಂತೆ ಸಲಹೆ ನೀಡಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತ್ತು.

ಭಾಷೆ, ನೆಲ, ಜಲ ವಿಷಯದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಮಾಡಬಾರದು ಎಂದು ಹೈಕೋರ್ಟ್ ನ್ಯಾಯಾಧೀಶರು ವಿಚಾರಣೆ ವೇಳೆ ಹೇಳಿದ್ದಾರೆ. ಹೀಗಿದ್ದರೂ ಕಮಲ್ ಹಾಸನ್ ಮೊಂಡುವಾದವನ್ನು ಬಿಡುತ್ತಿಲ್ಲ. ಹಾಗಂತ ಕಮಲ್ ಹಾಸನ್ ಅನ್ನು ಕನ್ನಡಿಗರಷ್ಟೇ ಅಲ್ಲ. ತಮಿಳುನಾಡಿನಲ್ಲಿಯೂ ಬ್ಯಾನ್ ಮಾಡಿದ್ದರು. ಆಗ ಕಮಲ್ ಹಾಸನ್ ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹಾಗಿದ್ದರೆ, ಏನಿದು ಘಟನೆ? ಕಮಲ್ ಹಾಸನ್ ಯಾವ ಸಂದರ್ಭದಲ್ಲಿ ಹೇಳಿದ್ದರು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹೈಲೈಟ್ಸ್
ತಮಿಳು ನಟ ಕಮಲ್ ಹಾಸನ್ ವಿವಾದಗಳು
ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದ ಕಮಲ್
ಕನ್ನಡ ಭಾಷೆ ವಿವಾದದ ಬಗ್ಗೆ ಮೊಂಡುತನ
ಹೌದು, ಕಮಲ್ ಹಾಸನ್‌ಗೆ ವಿವಾದಗಳೇನು ಹೊಸದಲ್ಲ. ಇವರು ತಮ್ಮ ಸಿನಿಮಾಗಳಲ್ಲಿ ತೋರಿಸಿದ ಪ್ರಬುದ್ಧತೆ ರಿಯಲ್ ಲೈಫ್ ತೋರಿಸುವಲ್ಲಿ ವಿಫಲರಾಗಿದ್ದಾರೆ. ಕಮಲ್ ಹಾಸನ್ ಅಂತಹ ನಟ ವಿವಾದಗಳಿಂದ ದೂರವಿರುವುದಕ್ಕೆ ಯತ್ನಿಸಬೇಕು. ಆದರೆ, ವಿವಾದಗಳನ್ನು ಬೇಕು ಅಂತಲೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ಕನ್ನಡ ಭಾಷೆಯ ಬಗ್ಗೆ ಬೇಕಿಲ್ಲದ ಹೇಳಿಕೆ ಕೊಟ್ಟು ಕನ್ನಡಿಗರನ್ನು ಕೆಣಕಿದ್ದೇ ಇದಕ್ಕೆ ಸಾಕ್ಷಿ.

ಕಮಲ್ ಹಾಸನ್ ಈ ವಿವಾದದ ಬಗ್ಗೆ ಟೈಮ್ಸ್ ನೌಗೆ ತೆಲಂಗಾಣದ ಮಾಜಿ ಗವರ್ನರ್ ಡಾ. ತಮಿಳಿಸೈ ಸೌಂದರರಾಜನ್ ಪ್ರತಿಕ್ರಿಯಿಸಿದ್ದಾರೆ. ಕಮಲ್ ಹಾಸನ್ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ. ತಮ್ಮ ಭಾಷೆಯನ್ನು ದೇವರಂತೆ ಕಂಡರೂ, ನಮ್ಮ ಸಹೋದರ ಭಾಷೆಯ ಭಾವನೆಗಳಿಗೆ ನೋವುಂಟು ಮಾಡಬಾರದು. ಆದರೆ, ಕಮಲ್ ಹಾಸನ್ ಅದನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ 2013ರಲ್ಲಿ 'ವಿಶ್ವರೂಪಂ' ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ಕೊಟ್ಟಿದ್ದ ಹೇಳಿಕೆಯನ್ನು ಡಾ. ತಮಿಳಿಸೈ ಸೌಂದರರಾಜನ್ ನೆನಪಿಸಿಕೊಂಡಿದ್ದಾರೆ. "ವಿಶ್ವರೂಪಂ ವಿವಾದದ ವೇಳೆ ಮಾಧ್ಯಮದವರ ಮುಂದೆ ಕಮಲ್ ಹಾಸನ್ ಅವರು ತಮ್ಮ ಸಿನಿಮಾ ಒಗ್ಗಟ್ಟನ್ನು ಒಡೆಯುತ್ತೆ ಎಂದು ಹೇಳಿದರೆ. ನನ್ನ ಆಸ್ತಿಯನ್ನೆಲ್ಲ ಮಾರಿಕೊಂಡು ನಾನು ದೇಶವನ್ನೇ ತೊರೆಯುತ್ತೇನೆ ಎಂದಿದ್ದರು. ಆ ಸಮಯದಲ್ಲಿ ಅವರು ಕೇವಲ ನಟನಾಗಿದ್ದರು. ಅವರಿಗೆ ಕರ್ನಾಟಕ, ತಮಿಳುನಾಡಿ, ಕೇರಳ, ತೆಲಂಗಾಣ ಹಾಗೂ ಆಂಧ್ರದಲ್ಲಿ ಬ್ಯುಸಿನೆಸ್ ಬೇಕಾಗಿತ್ತು. ಆದರೆ, ಈಗ ರಾಜ್ಯಸಭೆ ಸೀಟ್ ಕೊಟ್ಟಿರುವ ಡಿಎಂಕೆಯ ಮನವೊಲಿಸುವುದಕ್ಕೆ ಇಂತಹದ ಸಂಚಲ ಸೃಷ್ಟಿಸುವಸ ವಿಷಯವನ್ನು ತೆಗೆದುಕೊಂಡಿದ್ದಾರೆ" ಎಂದು ಡಾ. ತಮಿಳಿಸೈ ಸೌಂದರರಾಜನ್ ಆರೋಪಿಸಿದ್ದಾರೆ.


Click it and Unblock the Notifications











