Leo-Box Office: ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ₹129 ಕೋಟಿ ಕೊಳ್ಳೆ ಹೊಡೆದ 'ಲಿಯೋ'.. ಕರ್ನಾಟಕದ ಪಾಲೆಷ್ಟು?
ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾ 'ಲಿಯೋ' ಅಕ್ಟೋಬರ್ 19ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋನೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೇನು ಹಿಂದೆ ಬಿದ್ದಿಲ್ಲ.
'ಲಿಯೋ' ವಿಜಯ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಅದೇ ಸಾಮಾನ್ಯ ಪ್ರೇಕ್ಷಕರಿಗೆ ಸೆಕೆಂಡ್ ಹಾಫ್ ಇಷ್ಟ ಆಗಿಲ್ಲ. ಆದರೂ, ವಿಶ್ವದಾದ್ಯಂತ ಸಿನಿಮಾದ ಕಲೆಕ್ಷನ್ ಅದ್ಭುತವಾಗಿದ್ದು, ಹೊಸ ದಾಖಲೆಗಳನ್ನು ಬರೆದಿದೆ. 'ಲಿಯೋ' ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು.

ದಳಪತಿ ವಿಜಯ್ ಸಿನಿಮಾ 'ಲಿಯೋ' ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಡ್ವಾನ್ಸ್ ಬುಕಿಂಗ್‌ನಿಂದಲೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಮೊದಲ ದಿನವೇ 129 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ 'ಲಿಯೋ' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? 129 ಕೋಟಿಯಲ್ಲಿ ಕರ್ನಾಟಕದ ಪಾಲೆಷ್ಟು? ತಿಳಿಯಲು ಮುಂದೆ ಓದಿ..
ಮೊದಲ ದಿನವೇ 'ಲಿಯೋ' ದಾಖಲೆ
ಶಾರುಖ್ ಖಾನ್ ಸಿನಿಮಾ 'ಜವಾನ್' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಅದನ್ನು ದಳಪತಿ ವಿಜಯ್ ಸಿನಿಮಾ 'ಲಿಯೋ' ಬ್ರೇಕ್ ಮಾಡಿದೆ ಎನ್ನಲಾಗಿದೆ. ಮೊದಲ ದಿನವೇ ಈ ಸಿನಿಮಾ 129 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತಕ್ಕಿಂತ ಹೆಚ್ಚಾಗಿ ವಿದೇಶದಲ್ಲಿಯೇ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದ್ಹಾಗೆ ಭಾರತದಲ್ಲಿ 63 ಕೋಟಿ ರೂಪಾಯಿ, ವಿದೇಶದಿಂದ 66 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಟ್ಟು 129 ಕೋಟಿ ರೂಪಾಯಿ ಎಂದು Sacnilk ವರದಿ ಮಾಡಿದೆ.
'ಲಿಯೋ' ಕರ್ನಾಟಕದ ಕಲೆಕ್ಷನ್ ಎಷ್ಟು?
'ಲಿಯೋ' ಕರ್ನಾಟಕದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರದರ್ಶನ ಕಂಡಿದೆ. ಕರ್ನಾಟಕದಲ್ಲಿ 'ಘೋಸ್ಟ್'ಗಿಂತಲೂ ಹೆಚ್ಚು ಶೋಗಳನ್ನು ನೀಡಲಾಗಿತ್ತು. ಸುಮಾರು 1000ಕ್ಕೂ ಅಧಿಕ ಶೋ ನೀಡಲಾಗಿದೆ ಎಂದು ವರದಿಯಾಗಿತ್ತು. ಅಲ್ಲದೆ ಟಿಕೆಟ್ ಬೆಲೆ ಕೂಡ ದುಬಾರಿ ಇತ್ತು. ಇದೆಲ್ಲವನ್ನೂ ಲೆಕ್ಕ ಹಾಕಿ ಟ್ರೇಡ್ ಎಕ್ಸ್‌ಪರ್ಟ್ಸ್ ನೀಡಿರುವ ವರದಿ ಪ್ರಕಾರ, ಕರ್ನಾಟಕದಲ್ಲಿ ಮೊದಲ ದಿನವೇ 14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು 'ಘೋಸ್ಟ್'ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?
ಭಾರತದಾದ್ಯಂತ 'ಲಿಯೋ' ಕಲೆಕ್ಷನ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಹಾಗೂ ಉತ್ತರ ಭಾರತದಲ್ಲಿ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಹಾಗಿದ್ದರೆ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ.
*ಕರ್ನಾಟಕ - 14 ಕೋಟಿ ರೂ.
*ತಮಿಳುನಾಡು - 28 ಕೋಟಿ ರೂ.
*ಕೇರಳ - 8 ಕೋಟಿ ರೂ.
*ಆಂಧ್ರ-ತೆಲಂಗಾಣ - 14 ಕೋಟಿ ರೂ.
*ಉತ್ತರ ಭಾರತ - 2 ಕೋಟಿ ರೂ.
*ಒಟ್ಟು - 66 ಕೋಟಿ ರೂ.
'ಲಿಯೋ' ಬರೆದ ದಾಖಲೆಗಳೇನು?
ಕನ್ನಡಿಗರ ತೀವ್ರ ವಿರೋಧದ ಹೊರತಾಗಿಯೂ 'ಲಿಯೋ' ಸಿನಿಮಾ ಕರ್ನಾಟಕದಲ್ಲಿಯೇ ದಾಖಲೆ ಗಳಿಕೆ ಕಂಡಿದೆ. ಹಾಗೇ ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಮೊದಲ ತಮಿಳು ಸಿನಿಮಾ ಎನಿಸಿಕೊಂಡಿದೆ. ತೆಲಂಗಾಣ, ಆಂಧ್ರ ಪ್ರದೇಶ, ಕೇರಳದಲ್ಲಿಯೂ ಮೊದಲ ದಿನ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎಂಬ ದಾಖಲೆ ಬರೆದಿದೆ. ಮಿಶ್ರ ಪ್ರತಿಕ್ರಿಯೆ ಬಳಿಕ ಎರಡನೇ ದಿನದ ಕಲೆಕ್ಷನ್ ಹೇಗಿರುತ್ತೆ? ಅನ್ನೋ ಕುತೂಹಲ ಹುಟ್ಟಿದೆ.


Click it and Unblock the Notifications











