ಕಮಲ್ ಹಾಸನ್ ವಿರುದ್ಧ ಕಿಡಿ.. ಸಾಹಿತಿ ವೈರಮುತ್ತು ವಿರುದ್ದ ಕ್ರಮ: ಸಿಎಂ ಸ್ಟಾಲಿನ್ ಬಳಿ ಗಾಯಕಿ ಮನವಿ
ಮೀಟೂ ಅಭಿನಯಾನದ ವೇಳೆ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ್ ಸಂಚಲನ ಸೃಷ್ಟಿಸಿದ್ದರು. ದಕ್ಷಿಣ ಭಾರತದ ಜನಪ್ರಿಯರ ಗಾಯಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿರೋ ಚಿನ್ಮಯಿ ಮಾಡಿದ ಲೈಂಗಿಕ ಆರೋಪಗಳು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದವು.
ತಮಿಳು ಚಿತ್ರರಂಗದ ಜನಪ್ರಿಯ ಸಾಹಿತಿ ವೈರಮುತ್ತು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಚಿನ್ಮಯಿ ಅವರನ್ನು ತಮಿಳು ಚಿತ್ರರಂಗ ಬ್ಯಾನ್ ಮಾಡಿತ್ತು. ಆದರೂ, ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಸ್ವಲ್ಪ ದಿನ ಸೈಲೆಂಟ್ ಆಗಿದ್ದ ನಟಿ ಮತ್ತೆ ತಿರುಗಿಬಿದ್ದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳನ್ನು ಬೆಂಬಲಿಸಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದರು. ಕಮಲ್ ಹಾಸನ್ ಅವರ ಈ ಟ್ವೀಟ್ ಬಗ್ಗೆ ಪ್ರಶ್ನೆ ಮಾಡಿದ್ದರು. ಜೊತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧವೂ ವಾಗ್ದಾಳಿ ನಡೆಸಿ, ಅವರ ಗೆಳೆಯ ವೈರಮುತ್ತು ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಮಲ್ ಹಾಸನ್ ವಿರುದ್ಧ ಕಿಡಿ
ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಹಾಗೂ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಾನಸಿಕ ಮತ್ತು ಲೈಂಗಿಕವಾಗಿ ನಿಂದಿಸಿದ ಆರೋಪವಿದೆ. ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಇದಕ್ಕೆ ಸ್ಪಂದಿಸದ ಕಾರಣ ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಪ್ರತಿಭಟನೆಗೂ ಮುಂದಾಗಿದ್ದರು.
ಈ ವೇಳೆ ಕುಸ್ತಿಪಟುಗಳು ಮತ್ತು ಪೊಲೀಸರ ನಡುವೆ ತೀವ್ರ ತಿಕ್ಕಾಟ ನಡೆದಿತ್ತು. ಆಗ ಕುಸ್ತಿಪಟುಗಳನ್ನು ಬೆಂಬಲಿಸಿ ಕಮಲ್ ಹಾಸನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಳಿಕ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ."ಮಹಿಳೆಯರಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಹೆಸರಿಸಿದ್ದಾಗಿ ತಮಿಳು ಚಿತ್ರರಂಗದಿಂದ 5 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಈ ಘಟನೆ ಕಣ್ಣೆದುರೇ ನಡೆದರೂ, ಕವಿಯ ಬಗ್ಗೆ ಗೌರವವಿದ್ದ ಕಾರಣ ಯಾರೂ ಮಾತನಾಡಲಿಲ್ಲ. ತಮ್ಮ ಮೂಗಿನ ಕೆಳಗೆ ಇಂತಹ ಘಟನೆ ನಡೆದಾಗ ಸುಮ್ಮನಿದ್ದರು. ಈಗ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಇಂತಹ ರಾಜಕಾರಣಿಗಳನ್ನು ನಾವು ಹೇಗೆ ನಂಬುವುದು? ಜಸ್ಟ್ ಆಸ್ಕಿಂಗ್" ಎಂದು ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.
ವೈರಮುತ್ತು ವಿರುದ್ಧ ಕ್ರಮಕ್ಕೆ ಸಿಎಂಗೆ ಮನವಿ
ಇದೇ ಕುಸ್ತಿಪಟುಗಳಿಗೆ ಬೆಂಬಲಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಟ್ವೀಟ್ ಮಾಡಿದ್ದರು. ಹೀಗಾಗಿ ಗಾಯಕಿ ಚಿನ್ಮಯಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಗೆಳೆಯ ವೈರಮುತ್ತು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. "ಚಿತ್ರರಂಗದಲ್ಲಿ 17ಕ್ಕೂ ಅಧಿಕ ಮಹಿಳೆಯರು ನಿಮ್ಮ ಗೆಳೆಯ/ಬೆಂಬಲಿಗ ವೈರಮುತ್ತು ವಿರುದ್ಧ ಇದೇ ಆರೋಪ ಮಾಡಿದ್ದರು. ವೈರಮುತ್ತು ನಿಮಗೆ ಚೆನ್ನಾಗಿ ಬೇಕಾದ ವ್ಯಕ್ತಿಯಾಗಿರುವುದರಿಂದ ಆತನಿಂದ ಕಿರುಕುಳಕ್ಕೊಳಗಾದ ಮಹಿಳೆಯರು ಹೊರಗೆ ಬಂದು ಮಾತನಾಡಲು ಸಾಧ್ಯವಾಗುತ್ತಿಲ್ಲ. ತಮಿಳುನಾಡಿನ ಇತರ ರಾಜಕಾರಣಿಗಳಂತೆ ನಿಮ್ಮ ಪಕ್ಷವೂ ಅವರ ಬೆಂಬಲಕ್ಕೆ ನಿಂತಿದೆ." ಎಂದು ಆರೋಪಿಸಿದ್ದಾರೆ.
ಅನೇಕ ಕ್ಷೇತ್ರಗಳಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಯಲು ICC ಅಥವಾ POCSO ನಂತಹ ಯಾವುದೇ ಕಾನೂನುಗಳಿಲ್ಲ. ಅದರಲ್ಲೂ ಚಿತ್ರರಂಗದಲ್ಲಿ ಇಲ್ಲ. ಹೀಗಾಗಿ ಸಿನಿಮಾರಂಗಕ್ಕೆ ತಗೆದುಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ.
20 ವರ್ಷ ಆದರೂ ಹೋರಾಟ ಮಾಡುತ್ತೇನೆ
"ಸುಮಾರು ಐದು ವರ್ಷಗಳಿಂದ ತಮಿಳುನಾಡು ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಲಾಗಿದೆ. ಈ ಪ್ರಕರಣದ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇನೆ. ಆ ಹೋರಾಟಕ್ಕೆ ಅಂತ್ಯವಿಲ್ಲ. ಇನ್ನೂ 20 ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ನನ್ನಲ್ಲಿದೆ." ಎಂದು ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಮನವಿ ಮಾಡಿದ್ದಾರೆ.
"ವೈರಮುತ್ತು ಅವರಿಗೂ, ಬ್ರಿಜ್ ಭೂಷಣ್ ಅವರಿಗೂ ಕಾನೂನು ಒಂದೇ ಆಗಬಾರದು. 17ಕ್ಕೂ ಹೆಚ್ಚು ಮಹಿಳೆಯರು ನಿಮ್ಮ ಪಕ್ಷಕ್ಕೆ ಆತ್ಮೀಯರಾಗಿರುವ ವೈರಮುತ್ತು ವಿರುದ್ಧ ಆರೋಪಿಸಿದ್ದರು. ಆದರೆ, ನೀವೆಲ್ಲರೂ ಅದನ್ನು ಮುಚ್ಚಿ ಹಾಕಿದ್ದೀರಿ. ಪ್ರತಿಭಾವಂತ ಮಹಿಳೆಯರ ಭವಿಷ್ಯ ಮತ್ತು ಕನಸುಗಳನ್ನು ನಾಶಪಡಿಸಿದರು. ದಯವಿಟ್ಟು ಸಹಾಯ ಮಾಡಿ. ಉದ್ಯಮವನ್ನು ICC ಮತ್ತು POSCO ಕಾನೂನುಗಳ ಅಡಿಯಲ್ಲಿ ತನ್ನಿ" ಎಂದು ಚಿನ್ಮಯಿ ಬರೆದಿದ್ದಾರೆ.


Click it and Unblock the Notifications











