ಬಹಿರಂಗವಾಗಿ ಕ್ಷಮೆ ಕೇಳಿ 'ಜಂಟಲ್‌ಮನ್' ಎನಿಸಿಕೊಂಡ ವಿಜಯ್
ತಮಿಳು ಸ್ಟಾರ್ ನಟ ವಿಜಯ್, ಭಾರತದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು. ಅವರ ಸಿನಿಮಾ ಕೆಲವೇ ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಬಲ್ಲದು ಅದು ವಿಜಯ್‌ರ ಬಾಕ್ಸ್ ಆಫೀಸ್ ತಾಕತ್ತು.
ವಿಜಯ್ ಇದೀಗ 'ಬೀಸ್ಟ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಭಾರತದಲ್ಲಿಯೇ ಯಾವ ನಟನೂ ಪಡೆಯದಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇಂತಿಪ್ಪ ವಿಜಯ್ ಇದೀಗ ಬಹಿರಂಗವಾಗಿ ಜನರ ಕ್ಷಮಾಪಣೆ ಕೇಳಿ ಸುದ್ದಿಯಾಗಿದ್ದಾರೆ.
ಮಹೇಶ್ ಬಾಬು, ವಿಜಯ್ ಅಭಿಮಾನಿಗಳ ವಾರ್: ನೆಪವಾಯ್ತು ಸಾಂಗ್ ರಿಲೀಸ್!
ಇದೀಗ ಚೆನ್ನೈ ಸೇರಿದಂತೆ ತಮಿಳುನಾಡಿನ ಇನ್ನೂ ಕೆಲವು ಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಮತ ಚಲಾವಣೆಯನ್ನು ಚಾಚು ತಪ್ಪದೆ ಮಾಡುವ ವಿಜಯ್, ನಿನ್ನೆ ಚುನಾವಣೆಗೆ ಮತ ಚಲಾವಣೆಗೆ ಬಂದಿದ್ದರು. ಈ ಸಮಯ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರಿಂದ ಅಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸಂಭಾವನೆ ಪಡೆಯುವುದರಲ್ಲಿ ದಾಖಲೆ ಬರೆದ ನಟ ವಿಜಯ್
ವಿಜಯ್ ಮತಗಟ್ಟೆಗೆ ಬಂದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ವಿಜಯ್ ಮತಗಟ್ಟೆಗೆ ಬರುವ ವೇಳೆ ಮತ ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ಜನರಿಗೆ ಕೈ ಮುಗಿದು ಕ್ಷಮೆ ಕೇಳುತ್ತಲೇ ಒಳಗೆ ಹೋದರು. ನಮ್ಮಿಂದ ಅವರಿಗೆ ಆಗುತ್ತಿರುವ ಸಮಸ್ಯೆಗೆ ವಿಜಯ್ ಈ ರೀತಿ ಕ್ಷಮೆ ಕೇಳಿದರು. ಅಲ್ಲದೆ ಮತಗಟ್ಟೆ ಒಳಗೆ ಹೋಗಿ ಸಹ ಅವರು ಮತಗಟ್ಟೆ ಸಿಬ್ಬಂದಿ ಬಳಿ ಕ್ಷಮೆ ಕೇಳಿದರು ಎನ್ನಲಾಗಿದೆ.
ವಿಜಯ್ ಕ್ಷಮೆ ಕೇಳಿರುವ ವಿಡಿಯೋದಲ್ಲಿಯೇ ವ್ಯಕ್ತಿಯೊಬ್ಬ ವಿಜಯ್‌ಗೆ 'ಜಂಟಲ್‌ಮನ್' ಎಂದು ಕರೆದಿರುವುದು ರೆಕಾರ್ಡ್ ಆಗಿದ್ದು ಇದು ವಿಜಯ್‌ರ ಅಭಿಮಾನಿಗಳ ಎದೆ ಉಬ್ಬುವಂತೆ ಮಾಡಿದೆ.
ವಿಜಯ್‌ಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ರಾಜಕೀಯವನ್ನು ಅಲುಗಾಡಿಸುವಷ್ಟು ಗಟ್ಟಿಯಾದ ಅಭಿಮಾನಿ ಬಳಗ ವಿಜಯ್ ಹೊಂದಿದ್ದಾರೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಿಂತಿದ್ದ ವಿಜಯ್‌ರ ಅಭಿಮಾನಿ ಸಂಘದ ಬೆಂಬಲಿತ ಬಹುತೇಕ ಅಭ್ಯರ್ಥಿಗಳು ಜಯ ಕಂಡಿರುವುದು ಇದಕ್ಕೆ ಉದಾಹರಣೆ. ವಿಜಯ್‌ಗಿರುವ ಜನಪ್ರಿಯತೆಯನ್ನು ರಾಜಕೀಯಕ್ಕೆ ಲಾಭಕ್ಕೆ ಬಳಸಿಕೊಳ್ಳಲು ಅವರ ತಂದೆಯೇ ಯತ್ನಿಸಿ, ವಿಜಯ್ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದರು. ಆದರೆ ವಿಜಯ್ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಲ್ಲದೆ, ತಂದೆಯ ವಿರುದ್ಧವೇ ಪ್ರಕರಣ ದಾಖಲಿಸಿದರು. ಕೊನೆಗೆ ವಿಜಯ್‌ರ ತಂದೆ ರಾಜಕೀಯ ಪಕ್ಷವನ್ನು ವಿಸರ್ಜಿಸಬೇಕಾಯಿತು.
ವಿಜಯ್ ಇದೀಗ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ಮಟ್ಟ ಹಾಕುವ ವಿಶೇಷ ದಳದ ಅಧಿಕಾರಿಯ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಭಾರಿ ಆಕ್ಷನ್ ದೃಶ್ಯಗಳನ್ನು ಹೊಂದಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್. ಸಿನಿಮಾದ ಹಾಡೊಂದು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿದೆ.


Click it and Unblock the Notifications











