"ಲೋಕೇಶ್ ಕನಗರಾಜ್ ಸಿನಿಮಾದಲ್ಲಿ ಬರೀ ಡ್ರಗ್ಸ್, ಹಿಂಸೆ, ರಕ್ತವೇ ಇರುತ್ತೆ" 'ಲಿಯೋ' ನಿರ್ದೇಶಕನ ವಿರುದ್ಧ ಆರೋಪ
ತಮಿಳು ಚಿತ್ರರಂಗದ ಟಾಪ್ ಡೈರೆಕ್ಟರ್ ಪಟ್ಟಿಯಲ್ಲಿ ಲೋಕೇಶ್ ಕನಗರಾಜ್ ಇದ್ದಾರೆ. ಇದೂವರೆಗೂ ಲೋಕೇಶ್ ನಿರ್ದೇಶಿದ ಒಂದೇ ಒಂದು ಸಿನಿಮಾ ಕೂಡ ಸೋತಿಲ್ಲ. ಮೊದಲ ಸಿನಿಮಾದಿಂದ ಇಲ್ಲಿವರೆಗೂ ಲೋಕೇಶ್ ಕನಗರಾಜ್ ಗೆಲುವಿನ ನಗೆಯನ್ನೇ ಬೀರಿದ್ದಾರೆ.
ತಮಿಳು ಚಿತ್ರರಂಗಕ್ಕೆ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿರುವ ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡುವುದಕ್ಕೆ ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳಿನ ವಿಮರ್ಶಕರೊಬ್ಬರು ಲೋಕೇಶ್ ಕನಗರಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದಳಪತಿ ವಿಜಯ್ ನಟಿಸಿರುವ 'ಲಿಯೋ' ಸಿನಿಮಾಗೆ ಲೋಕೇಶ್ ಕನಗರಾಜ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಇದೇ ತಿಂಗಳ 19ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ವೇಳೆನೇ ತಮಿಳು ವಿಮರ್ಶಕ ಬ್ಲ್ಯೂ ಸೆಟ್ಟೈ ಮಾರನ್ ಗಂಭೀರ ಆರೋಪ ಮಾಡಿದ್ದಾರೆ.

ಲೋಕೇಶ್ ಕನಗರಾಜ್ ಸ್ಟಾರ್ ಡೈರೆಕ್ಟರ್
ಸಿನಿಮಾ ಪ್ರಿಯರಿಗೆ ಲೋಕೇಶ್ ಕನಗರಾಜ್ ಯಾರು ಅನ್ನೋದನ್ನು ಹೇಳಬೇಕಿಲ್ಲ. 'ಮಾನಗರಂ' ಅನ್ನೋ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು, ಮೊದಲ ಸಿನಿಮಾದಲ್ಲಿಯೇ ಯಶಸ್ಸು ಸಿಕ್ಕಿತ್ತು. ಇಲ್ಲಿಂದ ಲೋಕೇಶ್ ಕನಗರಾಜ್ ಕಥೆ ಹೇಳುವ ಪರಿಗೆ, ಸಿನಿಮಾ ಮೇಕಿಂಗ್‌ಗೆ ಜನರು ಫಿದಾ ಆಗಿದ್ದರು. ಅಲ್ಲಿಂದ 'ಲಿಯೋ' ವರೆಗೂ ಜರ್ನಿ ಮುಂದುವರೆದಿದ್ದು, ಕಡಿಮೆ ಸಮಯದಲ್ಲಿಯೇ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ.
ಬ್ಯಾಕ್ ಟು ಬ್ಯಾಕ್ ಹಿಟ್
'ಮಾನಗರಂ' ಬಳಿಕ ಕಾರ್ತಿ ಜೊತೆ 'ಕೈತಿ' ಅನ್ನೋ ಸಿನಿಮಾ ಮಾಡಿದ್ದರು. ಆ ಸಿನಿಮಾ ಲೋಕೇಶ್‌ಗೆ ಹೊಸ ಇಮೇಜ್ ಅನ್ನೇ ಕೊಟ್ಟಿತ್ತು. ಮೊದಲ ಎರಡೂ ಸಿನಿಮಾವೂ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಬೆನ್ನಲ್ಲೇ ದಳಪತಿ ವಿಜಯ್ ಜೊತೆ 'ಮಾಸ್ಟರ್' ಸಿನಿಮಾಗೆ ಕೈ ಹಾಕಿದ್ದರು. ಅದೂ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಕಮಲ್ ಹಾಸನ್ ನಟಿಸಿದ 'ವಿಕ್ರಮ್' ಸಿನಿಮಾಗೂ ಇವರೇ ನಿರ್ದೇಶನ ಮಾಡಿದ್ದರು. ಅದೂ ಕೂಡ ಮೆಗಾ ಹಿಟ್ ಆಗಿತ್ತು. ಈಗ 'ಲಿಯೋ' ರಿಲೀಸ್‌ಗೆ ರೆಡಿಯಾಗಿದೆ.

ಡ್ರಗ್ಸ್, ಹಿಂಸೆ ರಕ್ತಪಾತದ ಆರೋಪ
ಇದೂವರೆಗೂ ಲೋಕೇಶ್ ಕನಗರಾಜ್ ನಿರ್ದೇಶಿಸಿದ ಸಿನಿಮಾದ ಕಥೆಗಳಲ್ಲಿ ಹಿಂಸೆ ಇದ್ದೇ ಇರುತ್ತೆ. ಕೆಲವು ಸಿನಿಮಾಗಳಲ್ಲಿ ಡ್ರಗ್ಸ್, ರಕ್ತಪಾತ ಕಾಮನ್. 'ಕೈತಿ' ಸಿನಿಮಾ ಬಂದಲ್ಲಿಂದ ಈ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇತ್ತು. 'ಮಾಸ್ಟರ್', 'ವಿಕ್ರಮ್' ಬಂದಾಗಲೂ ಅಷ್ಟೇ ಡ್ರಗ್ಸ್, ಹಿಂಸೆ, ರಕ್ತಪಾತ ಇದ್ದೇ ಇತ್ತು. ಈಗ ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿರುವ 'ಲಿಯೋ'ದಲ್ಲೂ ಡ್ರಗ್ಸ್ ಬಗ್ಗೆನೇ ಇದೆ ಎಂಬ ಟೀಕೆ ಕೇಳಿ ಬಂದಿದೆ. ಈ ಬಗ್ಗೆ ತಮಿಳು ವಿಮರ್ಶಕ ಬ್ಲ್ಯೂ ಸೆಟ್ಟೈ ಮಾರನ್ ಕೂಡ ಇದೇ ಆರೋಪ ಮಾಡಿದ್ದಾರೆ
ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ
ಲೋಕೇಶ್ ಕನಗರಾಜ್ ಡ್ರಗ್ಸ್, ಹಿಂಸೆ ಇಲ್ಲದೆ ಸಿನಿಮಾವನ್ನೇ ಮಾಡುವುದಿಲ್ಲ. ಇಂತಹ ಅಂಶಗಳು ಸಮಾಜದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹಲವರು ಹೇಳುತ್ತಿದ್ದಾರೆ. ವಿಮರ್ಶಕ ಬ್ಲೂ ಶರ್ಟ್ ಮಾರನ್ ಕೂಡ ಎಕ್ಸ್ ಸೈಟ್‌ನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಜುನ್ ಸರ್ಜಾ ಧೂಮಪಾನ ಮಾಡುವ ಫೋಟೊ ಹಾಕಿ, "ಲೋಕೇಶ್ ಕನಗರಾಜ್ ಸಿನಿಮಾಗಳಲ್ಲಿ ಡ್ರಗ್ಸ್, ಗಾಂಜಾ, ಹಿಂಸಾಚಾರ, ರಕ್ತ, ಚಾಕು, ಬಂದೂಕುಗಳನ್ನು ಕಾಮನ್ ಆಗಿರುತ್ತೆ. ವಿಜಯ್, ಅರ್ಜುನ್ ಸಮಾಜದ ಮೇಲೆ ಪರಿಣಾಮ ಬೀರುವ ಬಗ್ಗೆ ಚಿಂತಿಸುವುದಿಲ್ಲ." ಎಂದು ಅವರು ಹೇಳಿದ್ದಾರೆ.


Click it and Unblock the Notifications











