ಅಪ್ಪ ವಿಜಯ್ ಸ್ಥಾನ ತುಂಬಲು ಸಜ್ಜಾದ ಜೇಸನ್ ಸಂಜಯ್; ಅಭಿಮಾನಿಗಳಿಗೆ ಗುಡ್‌ನ್ಯೂಸ್
ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶಿಸಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಗನ್' ಜುಲೈ 23ಕ್ಕೆ ತೆರೆಗೆ ಬರಲಿದೆ. ಬಳಿಕ ದಳಪತಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದ್ಕಡೆ ವಿಜಯ್ ಸಿಎಂ ಆದ್ರು ಎನ್ನುವ ಸಂತಸ, ಮತ್ತೊಂದು ಕಡೆ ಸಿನಿಮಾಗಳಿಂದ ದೂರಾಗುತ್ತಿದ್ದಾರೆ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ.
ಈಗಾಗಲೇ ವಿಜಯ್ ಪುತ್ರ ಜೇಸನ್ ಸಂಜಯ್ ಕೂಡ ಚಿತ್ರರಂಗ ಪ್ರವೇಶಿಸಿದ್ದಾರೆ. ಹೀರೊ ಆಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ ತಮ್ಮ ಸಿನಿಜರ್ನಿ ಆರಂಭಿಸಿದ್ದಾರೆ. ಸಂದೀಪ್ ಕಿಶನ್ ನಟನೆಯ 'ಸಿಗ್ಮಾ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜುಲೈ 31ರಂದು ಈ ಸಿನಿಮಾ ತೆರೆಗೆ ಬರಬೇಕಿದೆ. ಆದರೆ ವಾರಕ್ಕೂ ಮುನ್ನ ಅಪ್ಪ ನಟಿಸಿರುವ 'ಜನನಾಯಗನ್' ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಜೇಸನ್ ತಮ್ಮ ಸಿನಿಮಾ ಅದೇ ದಿನ ತೆರೆಗೆ ತರ್ತಾರಾ ಎನ್ನುವ ಅನುಮಾನ ಮೂಡಿದೆ.

ಸದ್ಯ ಜೇಸನ್ ಸಂಜಯ್ ಹೀರೊ ಆಗಿ ನಟಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ಮಗ ಸಂಜಯ್ ತೆರೆಮೇಲೆ ಅಪ್ಪನ ರೀತಿ ದರ್ಬಾರ್ ನಡೆಸಬೇಕು, ಅಪ್ಪನ ಸ್ಥಾನ ತುಂಬಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಜೇಸನ್‌ಗೆ ಬಣ್ಣ ಹಚ್ಚಿ ನಟಿಸುವ ಆಸೆ ಇದ್ಯಾ? ಇಲ್ವಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿತ್ತು. ಈ ಬಗ್ಗೆ ಆನಂದ ವಿಕಟನ್ ಮ್ಯಾಗಜೀನ್ ಸಂದರ್ಶನದಲ್ಲಿ ಸ್ವತಃ ವಿಜಯ್ ಮಗ ಮಾತನಾಡಿದ್ದಾರೆ. ಹೀರೊ ಆಗಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ.
"ನಿರ್ದೇಶಕನಾಗಿ ಸೆಟ್‌ನಲ್ಲಿ ಕಲಾವಿದರಿಗೆ ಒಂದು ದೃಶ್ಯವನ್ನು ವಿವರಿಸುವಾಗ ನನ್ನಲ್ಲೂ ಒಬ್ಬ ನಟ ಇರ್ತಾನೆ. ನನ್ನಲ್ಲೂ ಒಬ್ಬ ನಟ ಇದ್ದಾನೆ ಎಂದುಕೊಂಡಿದ್ದೀನಿ. ಆದ್ರೆ 'ಸಿಗ್ಮಾ' ಸಿನಿಮಾ ಬಿಡುಗಡೆ ಬಳಿಕ ಮುಂದೇನು ಎನ್ನುವುದು ಗೊತ್ತಾಗಲಿದೆ" ಎಂದು ತಾವು ನಿರ್ದೇಶನದ ಮೊದಲ ಸಿನಿಮಾ ಬಗ್ಗೆ ಜೇಸನ್ ಸಂಜಯ್ ಮಾತನಾಡಿದ್ದಾರೆ.

'ಸಿಗ್ಮಾ' ಚಿತ್ರದ ಪ್ರಮೋಷನಲ್ ಸಾಂಗ್‌ನಲ್ಲಿ ಜೇಸನ್ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ "ನಾನು ನಟನಾಗಿ ನನ್ನನ್ನು ಪರಿಚಯಿಸಿಕೊಳ್ಳಲು ಪ್ರಚಾರದ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ. ಈ ಹಾಡು ಇಡೀ ಸಿನಿಮಾ, ಪಾತ್ರವರ್ಗ ಮತ್ತು ಅದರ ಶೈಲಿಯನ್ನು ಪರಿಚಯಿಸುತ್ತದೆ. ಹಾಗಾಗಿ ಕಾಣಿಸಿಕೊಂಡಿದ್ದೀನಿ ಎಂದಿದ್ದಾರೆ. 'ಸಿಗ್ಮಾ' ಸಿನಿಮಾ ರಿಲೀಸ್ ಬಳಿಕ ನಾನು ನಟನೆಯನ್ನು ಮುಂದುವರಿಸಬೇಕೆ? ಅಥವಾ ನಿರ್ದೇಶನದಲ್ಲೇ ಮುಂದುವರೆಯಬೇಕೆ? ಎಂದು ತೀರ್ಮಾನಿಸುತ್ತೇನೆ ಎಂದು ಜೇಸನ್ ತಿಳಿಸಿದ್ದಾರೆ.
ವಿಜಯ್ ವೈಯಕ್ತಿಕ ಜೀವನದಲ್ಲಿ ವಿವಾದ ಸೃಷ್ಟಿಯಾಗಿರುವುದು ಗೊತ್ತೇಯಿದೆ. ಈಗಾಗಲೇ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಗ ಹಾಗೂ ಮಗಳು ಅಮ್ಮನ ಬೆಂಬಲಕ್ಕೆ ನಿಂತಿದ್ದಾರೆ. ಅಪ್ಪನಿಂದ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ. ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೂ ಮಕ್ಕಳು ಹಾಜರಾಗಲಿಲ್ಲ. ಆ ಮೂಲಕ ಅಮ್ಮನಿಗೆ ನಮ್ಮ ಬೆಂಬಲ ಎಂದು ಸಾರಿ ಹೇಳಿದಂತಿತ್ತು.
ಒಟ್ಟಾರೆ ಜೇಸನ್ ಹೀರೊ ಆಗಿ ನಟಿಸುವ ಬಗ್ಗೆ ಸುಳಿವು ನೀಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈಗಾಗಲೇ ಕೆಲ ನಿರ್ದೇಶಕರು ಕಥೆಗಳನ್ನು ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಜುಲೈ 31ಕ್ಕೆ 'ಸಿಗ್ಮಾ' ಸಿನಿಮಾ ಬಿಡುಗಡೆ ಆಗುವ ಬಗ್ಗೆ ಗೊಂದಲ ಮೂಡಿದೆ. 'ಜನನಾಯಗನ್' ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ 'ಸಿಗ್ಮಾ' ಚಿತ್ರತಂಡ ಸೈಲೆಂಟ್ ಆಗಿಯೇ ಇದೆ. ಅಪ್ಪನ ಸಿನಿಮಾ ಎದುರು ಜೇಸನ್ ತಾವು ನಿರ್ದೇಶಿಸಿರುವ ಚೊಚ್ಚಲ ಸಿನಿಮಾ ಬಿಡುಗಡೆ ಮಾಡ್ತಾರಾ? ಕಾದು ನೋಡಬೇಕಿದೆ.


Click it and Unblock the Notifications

