twitter
    X
    Home ಚಲನಚಿತ್ರಗಳ ಒಳನೋಟ

    2022ರ ಕನ್ನಡ ಚಿತ್ರರಂಗದ 11 ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.

    Author Sowmya Bairappa | Published: Tuesday, December 27, 2022, 05:01 PM [IST]

    ಈ ವರ್ಷ ತೆರೆಕಂಡ ಹಲವಾರು ಕನ್ನಡ ಚಿತ್ರಗಳು ಬಾಕ್ಸಾಫೀಸ್ ವಿಚಾರವಾಗಿ ಹಾಗೂ ಕಂಟೆಂಟ್ ವಿಚಾರವಾಗಿ ಸದ್ದು ಮಾಡಿದವು.ಇನ್ನು ಹೆಸರಾಂತ ಐಎಂಡಿಬಿ ಬಿಡುಗಡೆ ಮಾಡಿದ ಜನಪ್ರಿಯ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಮೂರು ಕನ್ನಡದ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಹೆಮ್ಮೆ ತಂದವು. ಇಷ್ಟೆಲ್ಲಾ ಸಾಧನೆ ಮಾಡಿದ ಕನ್ನಡ ಚಿತ್ರರಂಗ ವಿವಾದಗಳಿಂದಲೂ ಸಹ ಈ ವರ್ಷ ಸಾಕಷ್ಟು ಸುದ್ದಿಗೆ ಒಳಗಾಗಿತ್ತು. ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆತದ ವಿವಾದವೂ ಸೇರಿದಂತೆ 2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ಉಂಟಾದ ವಿವಾದಗಳ ಪಟ್ಟಿ ಇಲ್ಲಿದೆ.

    cover image
    ದರ್ಶನ್ ಮೇಲೆ ಚಪ್ಪಲಿ ಎಸೆತ

    ದರ್ಶನ್ ಮೇಲೆ ಚಪ್ಪಲಿ ಎಸೆತ

    1

    ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಹೊಸಪೇಟೆಯಲ್ಲಿ ನಡೆದ 'ಕ್ರಾಂತಿ' ಸಿನಿಮಾದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಈ ಘಟನೆಯನ್ನು ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಶಿವರಾಜ್‌ಕುಮಾರ್, ಜಗ್ಗೇಶ್, ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಖಂಡಿಸಿ, ದರ್ಶನ್ ಬೆಂಬಲಕ್ಕೆ ನಿಂತಿದ್ದರು. ಈ ನಡುವೆ ಇದು ಪುನೀತ್ ಅಭಿಮಾನಿಗಳು ಮಾಡಿದ ಕೆಲಸ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದು, ದೊಡ್ಡ ಫ್ಯಾನ್ ವಾರ್ ಇಂದಿಗೂ ನಡೆಯುತ್ತಿದೆ.

     

    ಅದೃಷ್ಟ ದೇವತೆ ಬಗ್ಗೆ ಹೇಳಿಕೆ

    ಅದೃಷ್ಟ ದೇವತೆ ಬಗ್ಗೆ ಹೇಳಿಕೆ

    2

    ಕ್ರಾಂತಿ ಚಿತ್ರದ ಪ್ರಚಾರದ ಯುಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿದ್ದ ನಟ ದರ್ಶನ್, ಅದೃಷ್ಟ ದೇವತೆ ಯಾವಾಗಲೂ ಬಾಗಿಲು ತಟ್ಟುವುದಿಲ್ಲ. ಯಾವಾಗ ಆಕೆ ಬಾಗಿಲು ತಟ್ಟುತ್ತಾಳೋ ಆವಾಗ ಅವಳನ್ನು ಹಿಡಿದು ತಂದು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ  ಕೂರಿಸಬೇಕು ಎಂದು ಹೇಳಿದ್ದರು. ದರ್ಶನ್ ಅವರ ಈ ಹೇಳಿಕೆ ದೊಡ್ಡಮಟ್ಟದ ವಿವಾದವನ್ನು ಎಬ್ಬಿಸಿತ್ತು. ದರ್ಶನ್ ನೀಡಿದ ಈ ಹೇಳಿಕೆ ಹಲವಾರು ಹಿಂದೂ ಪರ ಹೋರಾಟಗಾರರನ್ನು ಕೆರಳಿಸಿತ್ತು.

    ವರಾಹ ರೂಪಂ ಹಾಡಿನ ವಿವಾದ

    ವರಾಹ ರೂಪಂ ಹಾಡಿನ ವಿವಾದ

    3

    ಈ ವರ್ಷದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರದ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಮಲಯಾಳಂನ ನವರಸಮ್ ಎಂಬ ಆಲ್ಬಂ ಹಾಡಿನಿಂದ ಕದಿಯಲಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್ ಆರೋಪ ಮಾಡಿತ್ತು. ಈ ಕುರಿತಾಗಿ ಕೇರಳ ಸ್ಥಳೀಯ ನ್ಯಾಯಾಲಯ ವರಾಹ ರೂಪಂ ಹಾಡನ್ನು ಬಳಸುವಂತಿಲ್ಲ ಎಂದು ತಡೆ ನೀಡಿತ್ತು. ನಂತರ ಓಟಿಟಿಯಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ರಾಗ ಬದಲಾಗಿತ್ತು ಹಾಗೂ ಯುಟ್ಯೂಬ್‌ನಿಂದಲೂ ಸಹ ಹಾಡನ್ನು ತೆಗೆಯಲಾಗಿತ್ತು. ಇಷ್ಟೆಲ್ಲಾ ಆದ ಬಳಿಕ ಕೇರಳ ಹೈಕೋರ್ಟ್ ವರಾಹ ರೂಪಂ ಹಾಡನ್ನು ಕೃತಿಚೌರ್ಯ ಮಾಡಿ ರಚಿಸಿಲ್ಲ ಎಂದು ತೀರ್ಪನ್ನು ನೀಡಿತು. ಹೊಂಬಾಳೆ ಫಿಲ್ಮ್ಸ್ ಮತ್ತೆ ತನ್ನ ಹಾಡನ್ನು ಪಡೆದುಕೊಂಡಿತು.

     

    ಜೇಮ್ಸ್‌ಗೆ ಚಿತ್ರಮಂದಿರದ ಸಮಸ್ಯೆ

    ಜೇಮ್ಸ್‌ಗೆ ಚಿತ್ರಮಂದಿರದ ಸಮಸ್ಯೆ

    4

    ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಬಿಡುಗಡೆ ಬಳಿಕ ಎರಡನೇ ವಾರಕ್ಕೆ ಆರ್ ಆರ್ ಆರ್ ಚಿತ್ರದಿಂದ ಚಿತ್ರಮಂದಿರದ ಸಮಸ್ಯೆಯನ್ನು ಎದುರಿಸಿತ್ತು. ಇದು ವಿವಾದ ಎಬ್ಬಿಸಿತ್ತು. ಚಿತ್ರದ ನಿರ್ಮಾಪಕ ಕಿಶೋರ್ ಹಾಗೂ ನಿರ್ದೇಶಕ ಚೇತನ್ ಚಿತ್ರವನ್ನು ತೆಗೆಯಬೇಡಿ ಎಂದು ಮನವಿ ಇಟ್ಟಿದ್ದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿವರಾಜ್‌ಕುಮಾರ್ ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಿದರು. ಜೇಮ್ಸ್ ಚಿತ್ರಕ್ಕೆ ತನ್ನ ಚಿತ್ರಮಂದಿರಗಳು ವಾಪಸ್ ಲಭಿಸಿದವು.

    ದರ್ಶನ್‌ರಿಂದ ಬೆದರಿಕೆ ಕರೆ

    ದರ್ಶನ್‌ರಿಂದ ಬೆದರಿಕೆ ಕರೆ

    5

    ಆಗಸ್ಟ್ ತಿಂಗಳಿನಲ್ಲಿ ಭರತ್ ವಿಷ್ಣುಕಾಂತ್ ಎಂಬ ನಿರ್ಮಾಪಕ ನಟ ದರ್ಶನ್ ತಮಗೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೊ ಬಿಡುಗಡೆ ಮಾಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಧೃವನ್ ಎಂಬ ನಟನಿಗೆ ಚಿತ್ರ ಮಾಡಲು ಮುಂದಾಗಿದ್ದೆ. ಇದಕ್ಕೆ ಮಧ್ಯ ಪ್ರವೇಶಿಸಿದ್ದ ದರ್ಶನ್ ಬೇರೆ ಕತೆ ಸೂಚಿಸಿ, ಇದನ್ನು ಧೃವನ್ಗೆ ಮಾಡು ಎಂದಿದ್ದರು. ಹೀಗಾಗಿ ಕತೆ ಹಾಗೂ ನಿರ್ದೇಶಕರ ಬದಲಾವಣೆ ಆಯಿತು. ಆದರೆ ಚಿತ್ರ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಧೃವನ್ ದರ್ಶನ್ ಅವರಿಂದ ಕರೆ ಮಾಡಿಸಿ ಬೆದರಿಕೆ ಹಾಕಿಸಿದರು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಧೃವನ್ ಇದೆಲ್ಲಾ ಸುಳ್ಳು, ಅದೊಂದು ಫೇಕ್ ಆಡಿಯೊ ಎಂದು ಹೇಳಿಕೆ ನೀಡಿದ್ದರು.

    ಹೆಡ್ ಬುಷ್

    ಹೆಡ್ ಬುಷ್

    6

    ಡಾಲಿ ಧನಂಜಯ್ ನಟಿಸಿದ್ದ ಡಾನ್ ಜಯರಾಜ್ ಬಯೋಪಿಕ್ ಚಿತ್ರ ಹೆಡ್ ಬುಷ್‌ನಲ್ಲಿ ವೀರಗಾಸೆಗೆ ಅವಮಾನ ಮಾಡಿದ್ದಾರೆ ಹಾಗೂ ಕರಗದ ಬಗ್ಗೆ ಹಗುರವಾಗಿ ಮಾತನಾಡಿ ಹೀಯಾಳಿಸಿದ್ದಾರೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆ ಮಾಡಲಾಗಿತ್ತು. ಚಿತ್ರದ ಪೋಸ್ಟರ್ ಹಾಗೂ ಕಟ್ ಔಟ್‌ಗಳನ್ನು ಧ್ವಂಸ ಮಾಡಲಾಗಿತ್ತು.

    ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾದ

    ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾದ

    7

    ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾದ ಎರಡು ರಾಜ್ಯಗಳಲ್ಲೂ ಸಂಚಲನ ಸೃಷ್ಟಿಸಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿದ ಈ ಆರೋಪ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದಾದ ಬಳಿಕ ಮೈಸೂರಿನ ಹೋಟೆಲ್ ಒಂದರಲ್ಲಿ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಇದ್ದರು. ಆಗ ಅಲ್ಲಿಗೆ ಹೋಗಿದ್ದ ಪತ್ನಿ ರಮ್ಯಾ ರಘುಪತಿ ರಂಪಾಟ ಮಾಡಿದ್ದರು. ಈ ವೇಳೆ ಪವಿತ್ರಾ ಲೋಕೇಶ್‌ಗೆ ನರೇಶ್ ಪತ್ನಿ ರಮ್ಯಾ ರಘುಪತಿ ಚಪ್ಪಲಿ ತೋರಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ನರೇಶ್ ಜೊತೆಗಿನ ವಿವಾದದ ಬಳಿಕ ನಟಿ ಪವಿತ್ರಾ ಲೋಕೇಶ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸಿದ್ದರು. 

    ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ವಿವಾದ

    ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ವಿವಾದ

    8

    ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ್ ವಿರುದ್ಧ ಅವರ ನೆರೆಮನೆಯ ನಿವಾಸಿಗಳಾದ ರಜತ್ ಗೌಡ ಹಾಗೂ ಪತ್ನಿ ಅನ್ನಪೂರ್ಣ ಕೊಲೆ ಬೆದರಿಕೆ, ಹಲ್ಲೆ ಹಾಗೂ ಅತ್ಯಾಚಾರ ಬೆದರಿಕೆ ದೂರನ್ನು ದಾಖಲಿಸಿದ್ದರು. ಈ ಹಿಂದೆಯೂ ಇದೇ ರೀತಿ ಹಲ್ಲೆ ನಡೆಸಿದ ಎಂಬ ದೂರು ಸ್ನೇಹಿತ್ ವಿರುದ್ಧ ಕೇಳಿಬಂದಿತ್ತು. ಹೀಗೆ ಎರಡನೇ ಬಾರಿ ಸ್ನೇಹಿತ್ ವಿರುದ್ಧ ಆರೋಪ ಕೇಳಿಬಂದದ್ದು ವಿವಾದವನ್ನು ಎಬ್ಬಿಸಿತ್ತು. ಕನ್ನಡದ ಕೆಲ ನಟರು ಸ್ನೇಹಿತ್ ಒಳ್ಳೆಯ ಹುಡುಗ ಎಂದು ಬ್ಯಾಟ್ ಬೀಸಿದ್ದರು ಹಾಗೂ ಸ್ನೇಹಿತ್ ತಂದೆ ತಾಯಿ ಈ ಕುರಿತು ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಿದ್ದರು.

    ಅಶ್ಲೀಲ ವಿಡಿಯೊ ಆರೋಪ

    ಅಶ್ಲೀಲ ವಿಡಿಯೊ ಆರೋಪ

    9

    ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಚಲನಚಿತ್ರ ನಟ ಡಿಂಗ್ರಿ ನಾಗರಾಜ್ ವಿರುದ್ಧ ನಟಿ ರಾಣಿ ಅಶ್ಲೀಲ ವಿಡಿಯೊ ಕಳುಹಿಸಿದ ಆರೋಪ ಮಾಡಿದ್ದರು. ಈ ಆರೋಪ ಸಹ ಎರಡ್ಮೂರು ದಿನಗಳ ಕಾಲ ವಿವಾದವನ್ನು ಎಬ್ಬಿಸಿತ್ತು.

    ಶ್ರೀಲೀಲಾ ತಾಯಿ ವಿವಾದ

    ಶ್ರೀಲೀಲಾ ತಾಯಿ ವಿವಾದ

    10

    ಮಧುಕರ್ ಅಂಗೂರ್ ಹಾಗೂ ಶ್ರೀಲೀಲಾ ತಾಯಿ ಸ್ವರ್ಣಲತಾ ಹಲವಾರು ಬೌನ್ಸರ್ಸ್ ಜತೆ ಸೆಪ್ಟೆಂಬರ್ 10ರಂದು ಅಲಯನ್ಸ್ ಕಾಲೇಜಿಗೆ ನುಗ್ಗಿ ಮುಂದಿನ ಚ್ಯಾನ್ಸಲರ್ ನಾವೇ ಎಂದು ಸಿಬ್ಬಂದಿಗೆ ಗದರಿದ ಘಟನೆ ನಡೆದಿದೆ ಎಂದು ಅಲ್ಲಿನ ಸಿಬ್ಬಂದಿ ನಿವೇದಿತಾ ಜೈನ್ ಎಂಬುವವರು ಆನೇಕಲ್ ಪೊಲೀಸರಿಗೆ ದೂರು ನೀಡಿದ್ದರು. ಶ್ರೀಲೀಲಾ ತಾಯಿ ಯೂನಿವರ್ಸಿಟಿ ಕ್ಯಾಂಪಸ್ ಒಳಗೆ ನುಗ್ಗಿ ಸಿಬ್ಬಂದಿಗೆ ಹೊಡೆದು ದಾಂಧಲೆ ಮಾಡಿದ್ದ ದೃಶ್ಯಗಳೂ ಸಹ ಹರಿದಾಡಿದ್ದವು.

    ಚೇತನ್ ಬಂಧನ

    ಚೇತನ್ ಬಂಧನ

    11

    ಚೇತನ್ ನ್ಯಾಯಾಧೀಶರವನ್ನು ನಿಂದಿಸಿದ ಕಾರಣಕ್ಕಾಗಿ ಬಂಧನಕ್ಕೊಳಗಾಗಿದ್ದರು. ಯಾವುದೇ ನೋಟಿಸ್ ನೀಡದೇ ಚೇತನ್ ಮನೆಗೆ ನುಗ್ಗಿದ್ದ ಪೊಲೀಸರು ಚೇತನ್ ಅವರನ್ನು ಠಾಣೆಗೆ ಎಳೆದೊಯ್ದಿದ್ದರು. ಈ ಘಟನೆ ನಡೆದ ಬಳಿಕ ಚೇತನ್ ಪತ್ನಿ ಫೇಸ್‌ಬುಕ್ ಲೈವ್ ಬಂದು ಕಿಡಿಕಾರಿದ್ದರು. ಇದಷ್ಟೇ ಅಲ್ಲದೇ ಚೇತನ್ ಅವರ ಇನ್ನಷ್ಟು ಹೇಳಿಕೆಗಳೂ ಸಹ ಈ ವರ್ಷ ವಿವಾದ ಹುಟ್ಟುಹಾಕಿದ್ದವು.

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X