ಎರಡು ವರ್ಷದ 'ಸೀತಾ ರಾಮ' ಜರ್ನಿಗೆ ಗುಡ್ ಬೈ ಹೇಳಿದ ವೈಷ್ಣವಿ ಗೌಡ; ಫ್ಯಾನ್ಸ್‌ಗೆ ನಟಿ ಕೊಟ್ಟ ಮಾತೇನು?
ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ 'ಸೀತಾ ರಾಮ' ಕೊನೆಯ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ. ಇತ್ತೀಚೆಗಷ್ಟೇ ಕೊನೆಯ ದಿನ ಶೂಟಿಂಗ್‌ನಲ್ಲಿ ಇಡೀ ತಂಡ ಭಾಗಿಯಾಗಿತ್ತು. ಆ ಹಿನ್ನೆಲೆಯಲ್ಲಿ ಈ ಧಾರಾವಾಹಿಯ ಕಲಾವಿದರು ಭಾವನಾತ್ಮಕವಾಗಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ನಟಿ ವೈಷ್ಣವಿ ಗೌಡ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
'ಸೀತಾ ರಾಮ' ಧಾರಾವಾಹಿ ಕಳೆದ ಎರಡು ವರ್ಷದಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿತ್ತು. ವೈಷ್ಣವಿ ಗೌಡ ಕಮ್ ಬ್ಯಾಕ್ ಸೀರಿಯಲ್‌ಗೆ ಅದ್ಧೂರಿ ಓಪನಿಂಗ್ ಕೂಡ ಸಿಕ್ಕಿತ್ತು. ಅದರಲ್ಲೂ ತಾಯಿ ಮಗಳ ಸಂಬಂಧವನ್ನು ಅದ್ಭುತವಾಗಿ ಕಟ್ಟಿ ಕೊಡಲಾಗಿತ್ತು. ಇತ್ತೀಚೆಗೆ ಈ ಧಾರಾವಾಹಿಯ ಸಮಯವನ್ನು ಬದಲಾವಣೆ ಮಾಡಲಾಗಿತ್ತು. ಹೀಗಾಗಿ ಟಿಆರ್‌ಪಿಯಲ್ಲಿ ಏರಿಳಿತವಾಗಿತ್ತು ಎನ್ನಲಾಗಿದೆ.

ಇನ್ನೊಂದು ವೈಷ್ಣವಿ ಗೌಡ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಿಶ್ವಿತಾರ್ಥವನ್ನು ಮಾಡಿಕೊಂಡಿದ್ದರು. ಇದೇ ವೇಳೆನೇ ವೈಷ್ಣವಿ ಗೌಡ ನಟಿಸುತ್ತಿದ್ದ ಧಾರಾವಾಹಿ ಕೂಡ ಅಂತ್ಯ ಕಾಣುತ್ತಿದೆ. ಹೀಗಾಗಿ ವೈಷ್ಣವಿ ಗೌಡ ಈ ಗ್ಯಾಪ್‌ನಲ್ಲಿ ಮದುವೆ ಅಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದ್ದು, ಮತ್ತೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರಾ? ಎನ್ನುವ ಪ್ರಶ್ನೆ ಎದುರಾಗಿದೆ. ಇದೇ ವೇಳೆ ಧಾರಾವಾಹಿ ಅಂತ್ಯ ಕಾಣುತ್ತಿರುವ ಬೆನ್ನಲ್ಲೇ ಭಾವನಾತ್ಮಕವಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
'ಸೀತಾ ರಾಮ' ಧಾರಾವಾಹಿ ಮರಾಠಿಯ 'ಮುಜಿ ತುಜಿ ರೇಶಿಮಗಾಡ' ಸೀರಿಯಲ್‌ನ ರಿಮೇಕ್. ಸೀತಾ ರಾಮ ಹಾಗೂ ಸಿಹಿಯ ಈ ಮೂವರ ವಿಭಿನ್ನ ಸನ್ನಿವೇಶಗಳನ್ನು ಇಟ್ಟುಕೊಂಡು ಕಿರುತೆರೆಯಲ್ಲಿ ವೀಕ್ಷಕರನ್ನು ರಂಜಿಸಲಾಗಿತ್ತು. ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಹೋಮ್ಲಿ ಪಾತ್ರದ ಮೂಲಕ ವೀಕ್ಷಕರಿಗೆ ತುಂಬಾನೇ ಹತ್ತಿರ ಆಗಿದ್ದರು. ಆದ್ರೀಗ ಈ ಧಾರಾವಾಹಿ ಅಂತ್ಯ ಕಾಣುತ್ತಿದ್ದು, ಅವರ ಅಭಿಮಾನಿಗಳಿಗೆ ಬೇಸರವನ್ನು ತರಿಸಿದೆ.
ಮದುವೆ ನಂತರ ವಿದೇಶದಲ್ಲಿ ಸೆಟಲ್ ಆಗ್ತಾರಾ ವೈಷ್ಣವಿ ಗೌಡ ? ಎರಡು ರಿಂಗ್ ರಹಸ್ಯವೇನು ?
ಇತ್ತೀಚೆಗೆ 'ಸೀತಾ ರಾಮ' ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಕೂಡ ಮುಗಿದೆ ಎನ್ನಲಾಗಿದೆ. ಆದರೆ, ಇನ್ನು ಕೆಲವು ದಿನಗಳ ಕಾಲ ಈ ಸೀರಿಯಲ್‌ನ ಎಪಿಸೋಡ್‌ಗಳು ಪ್ರಸಾರ ಆಗಲಿವೆ. ಧಾರಾವಾಹಿ ಅಂತ್ಯ ಕಂಡ ಬೆನ್ನಲ್ಲೇ ವೈಷ್ಣವಿ ಗೌಡ ಸೀರಿಯಲ್ ತಂಡದೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡು, ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಮತ್ತೊಂದು ಅದ್ಭುತ ಪ್ರಾಜೆಕ್ಟ್‌ನೊಂದಿಗೆ ಮರಳುವುದಾಗಿ ಹೇಳಿದ್ದಾರೆ.
"ಈ ಕೊನೆ ಮತ್ತೊಂದು ಅತ್ಯುತ್ತಮವಾದುದರ ಆರಂಭ. ನನ್ನ ವೃತ್ತಿ ಬದುಕಿನಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಪ್ರಾಜೆಕ್ಟ್‌ಗಳಲ್ಲಿ ಇದೂ ಒಂದು. ಇದನ್ನು ಸಾಧ್ಯವಾಗಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಈ ಪ್ರೀತಿಗೆ ಎಲ್ಲರಿಗೂ ಧನ್ಯವಾದಗಳು. ಸೀತಾಗಳಾಗಿ ಗುಡ್‌ಬೈ ಹೇಳುತ್ತಿದ್ದೇನೆ. ಇನ್ನೊಂದು ಅದ್ಭುತ ಪ್ರಾಜೆಕ್ಟ್‌ನೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ನಿಮಗೆ ಪ್ರಾಮಿಸ್ ಮಾಡುತ್ತೇನೆ." ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ವೈಷ್ಣವಿ ಗೌಡ ಮದುವೆ ಆಗುತ್ತಿರುವುದರಿಂದಲೇ 'ಸೀತಾ ರಾಮ' ಧಾರಾವಾಹಿಯನ್ನು ತೊರೆಯುತ್ತಿದ್ದಾರೆಂದು ಅಂದಾಜಿಸಲಾಗಿತ್ತು. ಆದರೆ, ಮದುವೆ ಬಳಿಕವೂ ವೈಷ್ಣವಿ ಗೌಡ ನಟನೆ ಮಾಡುತ್ತಾರೆಯಂದು ಈ ಪೋಸ್ಟ್ ಮೂಲಕ ಸುಳಿವನ್ನು ನೀಡಿದ್ದಾರೆ. ಮತ್ತೊಂದು ಅದ್ಭುತ ಪ್ರಾಜೆಕ್ಟ್‌ಗಳೊಂದಿಗೆ ಕಿರುತೆರೆ ಅಥವಾ ಸಿನಿಮಾಗೆ ಮರಳಬಹುದೆಂದು ಸುಳಿವನ್ನು ನೀಡಿದ್ದು ಅವರ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ.
ಇನ್ನು ವೈಷ್ಣವಿ ಗೌಡ ಇತ್ತೀಚೆಗೆ ತಮ್ಮ ಆಸೆಯಂತೆಯೇ ಅದ್ಧೂರಿಯಾಗಿ ಅನುಕೂಲ್ ಮಿಶ್ರಾ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನುಕೂಲ್ ಮಿಶ್ರಾ ಏರ್‌ಫೋರ್ಸ್‌ನಲ್ಲಿ ಉತ್ನತ ಹುದ್ದೆಯಲ್ಲಿ ಇದ್ದಾರೆಂದು ವರದಿಯಾಗಿದೆ. ಈಗಾಗಲೇ ವೈಷ್ಣವಿ ಗೌಡ ಕೂಡ ತಮ್ಮ ಭಾವಿ ಪತಿಯನ್ನು ಪರಿಚಯ ಕೂಡ ಮಾಡಿಕೊಟ್ಟಿದ್ದಾರೆ. ಆದರೆ, ಇನ್ನೂ ಮದುವೆ ಯಾವಾಗ ಅನ್ನೋದನ್ನು ಬಹಿರಂಗಪಡಿಸಿಲ್ಲ. ಇನ್ನೇ ಸೀತಾ ರಾಮ ಸೀರಿಯಲ್ ಮುಗಿಯುತ್ತಿದ್ದಂತೆ ಮದುವೆ ಬಗ್ಗೆ ಸಿದ್ಧತೆಗಳು ಶುರುವಾಗಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.


Click it and Unblock the Notifications











