ಪ್ರೇಮ್ ನಿರ್ದೇಶನದ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾದ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಪ್ರೋಮೋನಲ್ಲಿ ಸಿನಿಮಾದ ಹೆಸರು ಘೋಷಣೆ ಮಾಡಲಾಗಿಲ್ಲವಾದರೂ, ಸಿನಿಮಾದ ಜಾನರ್ ಯಾವುದಾಗಿರಲಿದೆ ಎಂಬ ಸುಳಿವು ನೀಡಲಾಗಿದೆ. ಪ್ರೋಮೋ ನೋಡಿದವರಿಗೆ ಇದು ಪೌರಾಣಿಕ ಕಥೆಯಾಧಾರಿತವಾಗಿರಲಿದೆಯಾ ಎಂಬ ಅನುಮಾನ ಮೂಡಿದೆ.
ಪ್ರೋಮೋನಲ್ಲಿ ಆಂಜನೇಯನ ಗದೆ ಕಾಣುತ್ತದೆ. ಜೊತೆಗೆ ನನ್ನ ಕೊನೆ ಉಸಿರಿರೋ ವರೆಗೂ ಈ ಭೂಮಿ ಮೇಲೆ, ನಿನ್ನ ಒಂದ್ ಹನಿ ರಕ್ತಾನೂ ಸೋಕೋದಕ್ಕೆ ನಾನ್ ಬಿಡಲ್ಲ ಎಂದು ದರ್ಶನ್ರ ಹಿನ್ನೆಲೆ ಧ್ವನಿ ಕೇಳಿ ಬರುತ್ತದೆ. ಅದರ ಬೆನ್ನಲ್ಲೆ ಗಧೆ, ತ್ರಿಷೂಲ, ಭಗವಾ ಧ್ವಜ ಹಾರುತ್ತಿರುವ ಮಂದಿರ, ಚಿನ್ನದ ಬಣ್ಣದ ಅಲುಗಿನ ಭರ್ಜಿಗಳು ಕಾಣಿಸಿಕೊಳ್ಳುತ್ತವೆ. ಹಿನ್ನೆಲೆಯಲ್ಲಿ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬರುತ್ತದೆ. ಒಟ್ಟಾರೆ ಒಂದು ಪೌರಾಣಿಕ ಕಥೆಯನ್ನು ನೆನಪಿಸುವಂತಹ ಪ್ರೋಮೋ ಇದಾಗಿದ್ದು, ದರ್ಶನ್ ಆಂಜನೇಯನ ಅಥವಾ ಆಂಜನೇಯನ ಭಕ್ತನ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿರಬಹುದೆಂಬ ಊಹೆ ಮಾಡಬಹುದಾಗಿದೆ.
ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಿಂದ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಇತರೆ ಪಾತ್ರವರ್ಗ, ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ. ಈ ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರೋಮೋನಲ್ಲಿ ಹೇಳಲಾಗಿದೆ.