ಸೂರ್ಯವಂಶ (1999)(U)
ಸೂರ್ಯವಂಶ ಕಥೆ
ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ ಸೂರ್ಯವಂಶ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಇದು 1997 ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ಸೂರ್ಯವಂಶಂ ಚಿತ್ರದ ರಿಮೇಕ್. ಈ ಚಿತ್ರವನ್ನು ಹೆಚ್.ಡಿ.ಕುಮಾರಸ್ವಾಮಿ ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. ಇಷಾ ಕೊಪ್ಪಿಕರ್, ವಿಜಯಲಕ್ಷ್ಮಿ ನಾಯಕಿಯರ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರಕ್ಕೆ ವಿ ಮನೋಹರ್ ಅದ್ಭುತ ಸಂಗೀತ ನೀಡಿದ್ದರು. ಅಭೂತಪೂರ್ವ ಪ್ರದರ್ಶನ ಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸುಮಾರು 20 ಕೋಟಿ ಗಳಿಕೆ ಕಂಡಿತು.
ಸತ್ಯಮೂರ್ತಿ (ವಿಷ್ಣುವರ್ಧನ್) ಸುತ್ತೆಲ್ಲ ಊರಿನಲ್ಲಿ ಗೌರವಿಸುವ ಶ್ರೀಮಂತ ಮತ್ತು ಸ್ನೇಹಪರ ವ್ಯಕ್ತಿ. ತನ್ನ ಮೂವರು ಮಕ್ಕಳಲ್ಲಿ ಕೊನೆಯ ಮಗನಾದ ಕನಕಮೂರ್ತಿ ಎಷ್ಟೇ ಪ್ರಯತ್ನ ಪಟ್ಟರೂ ವಿದ್ಯಭ್ಯಾಸ ಮಾಡದೇ ಇರುವುದು, ಮತ್ತು ತಾನು ನಿಶ್ಚಯಿಸಿದ ಹುಡುಗಿಯನ್ನು ಮದುವೆಯಾಗದ ಕಾರಣ, ತಂದೆಗೆ ಮಗನ ಮೇಲೆ ಮುನಿಸು. ಹಾಗೇ ತಾನು ಬೇಡವೆಂದರೂ, ಮದುವೆ ಮನೆಯಿಂದ ಪ್ರೀತಿಸಿದ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗುವ ಕನಕನನ್ನು ತಂದೆ ಮನೆಯಿಂದ ಹೊರೆಗೆ ಹಾಕುತ್ತಾರೆ. ಮುಂದೆ ತನ್ನ ಪರಿಶ್ರಮದಿಂದ ಮೇಲೆ ಬರುವ ಕನಕಮೂರ್ತಿ ತನ್ನ ತಂದೆಯ ಹೆಸರನ್ನು ಹೇಗೆ ಉನ್ನತ ಮಟ್ಟಕ್ಕೆ ಒಯ್ಯುತ್ತಾನೆ ಮತ್ತು ತಂದೆಯ ಪ್ರೀತಿಯನ್ನು ಹೇಗೆ ಸಂಪಾದಿಸುತ್ತಾನೆ ಎಂಬುದು ಚಿತ್ರದ ಮುಂದಿನ ಕಥೆ.