ಬಿಗ್‌ಬಾಸ್ ನಿರೂಪಣೆಯಿಂದ ಹಿಂದೆ ಸರಿದ ಸ್ಟಾರ್ ನಟ: ಅಭಿಮಾನಿಗಳ ಬೇಸರ
ಬಿಗ್‌ಬಾಸ್ ಶೋ ಭಾರತದ ಕಿರುತೆರೆಯಲ್ಲಿ ಜನಪ್ರಿಯ ರಿಯಾಲಿಟಿ ಶೋ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬಂಗಾಳಿ ಭಾಷೆಗಳಲ್ಲಿ ಈ ಶೋ ಬಹುತೇಕ ಪ್ರತಿವರ್ಷ ಪ್ರದರ್ಶನ ಕಂಡು ಯಶಸ್ವಿಯಾಗುತ್ತಿದೆ.
ಅದರಲ್ಲಿಯೂ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಗ್‌ಬಾಸ್ ದೊಡ್ಡ ಹಿಟ್ ಆಗಿದೆ. ಜನರು ಬಿಗ್‌ಬಾಸ್ ಶೋದೊಂದಿಗೆ ಬಂಧವೊಂದನ್ನು ಏರ್ಪಡಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅದರ ಸ್ಟಾರ್ ನಿರೂಪಕರು.
ಕರ್ನಾಟಕದಲ್ಲಿ ಆಗುತ್ತಿರುವುದು ತಮಿಳುನಾಡಿನಲ್ಲಿ ಆಗುವುದು ಬೇಡ: ಕಮಲ್ ಹಾಸನ್
ಕನ್ನಡದಲ್ಲಿ ಸುದೀಪ್ ಬಿಗ್‌ಬಾಸ್‌ನ ನಿರೂಪಕರಾಗಿದ್ದಾರೆ. ಸುದೀಪ್ ಹೊರತಾಗಿ ಇನ್ನಾವುದೇ ನಿರೂಪಕರನ್ನು ಊಹಿಸಿಕೊಳ್ಳಲು ಸಹ ಅಸಾಧ್ಯ. ಹಾಗೆಯೇ ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಕಮಲ್ ಹಾಸನ್, ಮಲಯಾಳಂನಲ್ಲಿ ಮೋಹನ್‌ಲಾಲ್, ತೆಲುಗಿನಲ್ಲಿ ನಾಗಾರ್ಜುನ, ನಾನಿ, ಜೂ ಎನ್‌ಟಿಆರ್ ಅವರುಗಳು ಇದ್ದಾರೆ. ಆದರೆ ಇದೀಗ ತಮಿಳಿನ ಬಿಗ್‌ಬಾಸ್‌ನ ನಿರೂಪಕರಾಗಿದ್ದ ಕಮಲ್ ಹಾಸನ್ ಶೋನಿಂದ ಹೊರಗೆ ಬಂದಿದ್ದಾರೆ.
ಕಮಲ್ ಹಾಸನ್ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್ ನಿರೂಪಣೆ ಮಾಡಲಿರುವ ಸ್ಟಾರ್ ನಟಿ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸಿರುವ ಕಮಲ್ ಹಾಸನ್, ತಾವು ಇನ್ನು ಮುಂದೆ ಬಿಗ್‌ಬಾಸ್ ಶೋ ನಿರೂಪಣೆ ಮಾಡುವುವದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ: ಕಮಲ್ ಹಾಸನ್
ಸಾಮಾಜಿಕ ಜಾಲತಾಣದಲ್ಲಿ ಪತ್ರ ಪ್ರಕಟಿಸಿರುವ ಕಮಲ್ ಹಾಸನ್, ''ಲಾಕ್‌ಡೌನ್ ಹಾಗೂ ಇತರೆ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ 'ವಿಕ್ರಂ' ಸಿನಿಮಾದ ಚಿತ್ರೀಕರಣದಿಂದಾಗಿ ಇದೀಗ ಗೊಂದಲ ಏರ್ಪಟ್ಟಿದೆ. ಬಿಗ್‌ಬಾಸ್‌ಗೆ ನಾನು ಕೊಡಬೇಕಾಗಿರುವ ಸಮಯ ಹಾಗೂ 'ವಿಕ್ರಂ' ಸಿನಿಮಾಕ್ಕೆ ಕೊಟ್ಟಿದ್ದ ಸಮಯದ ನಡುವೆ 'ಕ್ಲ್ಯಾಶ್' ಆಗಿದೆ'' ಎಂದು ಮಾಹಿತಿ ನೀಡಿದ್ದಾರೆ ಕಮಲ್ ಹಾಸನ್.

''ಅತ್ಯುತ್ತಮ ನಟ, ತಂತ್ರಜ್ಞರನ್ನು ಕಾಯಿಸಲಾಗದು''
''ನನ್ನ ಹಾಗೂ ಸಿನಿಮಾದ ಇತರೆ ಪ್ರಮುಖ ನಟರ ನಡುವಿನ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಬೇಕಾಗಿದ್ದು, ನನಗೆ ಡೇಟ್ಸ್ ಹೊಂದಾಣಿಕೆ ಆಗಲಿಲ್ಲವೆಂದು ಪ್ರಮುಖ ನಟರು, ತಂತ್ರಜ್ಞರನ್ನು ನನಗಾಗಿ ಕಾಯಿಸುವುದು ಸೂಕ್ತವಲ್ಲ. ಅವರೆಲ್ಲ ಅತ್ಯುತ್ತಮ ನಟರು, ತಂತ್ರಜ್ಞರಾಗಿದ್ದಾರೆ. ನನಗಾಗಿ ಅವರ ಸಮಯವನ್ನು ವ್ಯರ್ಥ ಮಾಡುವುದು ಸೂಕ್ತವಲ್ಲ'' ಎಂದಿದ್ದಾರೆ ಕಮಲ್.

ಬಿಗ್‌ಬಾಸ್‌ನಿಂದ ಹೊರಗೆ: ಕಮಲ್ ಹಾಸನ್
''ಸಮಯದ ಅಭಾವದಿಂದ 'ವಿಕ್ರಂ' ಹಾಗೂ 'ಬಿಗ್‌ಬಾಸ್' ಎರಡನ್ನೂ ಒಟ್ಟಿಗೆ ಮ್ಯಾನೇಜ್ ಮಾಡುವುದು ಅಸಾಧ್ಯವಾಗುತ್ತಿದೆ. ಹಾಗಾಗಿ ಬಿಗ್‌ಬಾಸ್‌ನ ಈ ಸೀಸನ್‌ನಿಂದ ನಾನು ಹೊರಗುಳಿಯಲು ತೀರ್ಮಾನಿಸಿದ್ದೇನೆ'' ಎಂದಿದ್ದಾರೆ ಕಮಲ್. ತಮ್ಮ ಸ್ಥಾನಕ್ಕೆ ಇನ್ಯಾರು ಬರಲಿದ್ದಾರೆ ಎಂಬ ಮಾಹಿತಿಯನ್ನು ಕಮಲ್ ಹಾಸನ್ ನೀಡಿಲ್ಲ. ಆದರೆ ಕಮಲ್‌ರ ಈ ನಿರ್ಣಯದ ಬಗ್ಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್‌ಗೆ ಹೆಸರು, ಜನಪ್ರಿಯತೆ, ಪ್ರಶಸ್ತಿಗಳು, ಅಭಿಮಾನಿಗಳು ಎಲ್ಲವನ್ನೂ ತಂದುಕೊಟ್ಟಿದ್ದು ಸಿನಿಮಾ, ಹಾಗಾಗಿ ಕಮಲ್ ಹಾಸನ್ ಅವರು ಮೊದಲು ತಮ್ಮ ಸಿನಿಮಾದ ಬಗ್ಗೆ ಗಮನ ಹರಿಸಬೇಕು ಎಂದು ಕಮಲ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ವಿಕ್ರಂ' ಸಿನಿಮಾ ಮೇಲೆ ಭಾರಿ ನಿರೀಕ್ಷೆ
ಕಮಲ್ ಹಾಸನ್ 'ವಿಕ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಕಮಲ್ ಜೊತೆಗೆ ದೈತ್ಯ ಪ್ರತಿಭೆಗಳಾದ ವಿಜಯ್ ಸೇತುಪತಿ ಹಾಗೂ ಮಲಯಾಳಂನ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜನ್ ನಿರ್ದೇಶನದ ಈ ಸಿನಿಮಾವು ಗ್ಯಾಂಗ್‌ಸ್ಟರ್ ಕತೆಯನ್ನು ಹೊಂದಿದೆ. ಸಿನಿಮಾವನ್ನು ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣ ಮಾಡಿದ್ದು, ಅನಿರುದ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ನಾಯಕಿಯರೇ ಇಲ್ಲ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಕಮಲ್ ಹಾಸನ್, ಶಂಕರ್ ನಿರ್ದೇಶನದ 'ಇಂಡಿಯನ್ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವಿಜಯ್ ಸೇತುಪತಿ-ಫಹಾದ್ ಫಾಸಿಲ್‌ರ ಹೊಸ ಸಿನಿಮಾಕ್ಕಾಗಿ ಕತೆ ರಚಿಸುತ್ತಿದ್ದಾರೆ. ನಿರ್ಮಾಣವೂ ಅವರದ್ದೆ. ಜೊತೆಗೆ, 'ಪಾಪನಾಸಂ 2', 'ತೇವರ್ ಮಗನ್ 2', 'ತಲೈವನ್ ಇರುಕ್ಕಿಂಡ್ರನ್' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ.


Click it and Unblock the Notifications











