ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದಿರುವ ಅಭಿ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ವಜ್ರೇಶ್ವರಿ ಕಂಬೈನ್ಸ್ ಅಡಿ ಪಾರ್ವತಮ್ಮ ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದರು.
ಒಂದೇ ಕಾಲೇಜಿಗೆ ಹೋಗುವ ಮತ್ತು ಮೊದಮೊದಲು ಒಬ್ಬರನೊಬ್ಬರ ಕಾಲೆಳೆಯುತ್ತಿದ್ದ ಅಭಿ ಮತ್ತು ಭಾನು ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ. ಇದರ ಬಗ್ಗೆ ತಿಳಿದ ಭಾನು ತಂದೆ ಅವಳನ್ನು ಹುಬ್ಬಳ್ಳಿಯ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಭಾನುವನ್ನು ಹುಬ್ಬಳ್ಳಿಗೆ ಹುಡುಕಿಕೊಂಡು ಹೋಗುವ ಅಭಿಗೆ ಮುಂದೆ ತನ್ನ ಜನ್ಮ ರಹಸ್ಯ ತಿಳಿಯುತ್ತದೆ.
ತಾನು ಪ್ರೀತಿಸುತ್ತಿರುವುದು ತನ್ನ ಸೋದರ ಮಾವನ ಮಗಳನ್ನೇ ಮತ್ತು ತನ್ನ ತಂದೆ-ತಾಯಿಯನ್ನು ಕೊಂದವರು ಅವರೇ ಎಂದು ತಿಳಿಯುತ್ತಾನೆ. ತನ್ನನ್ನು ಕೊಲ್ಲಲು ಪ್ರಯತ್ನಿಸುವ ಸೋದರಮಾವ ಮತ್ತು ತನ್ನ ಮೇಲೆ ಜೀವವನ್ನೇ ಇಟ್ಟುಕೊಂಡಿರುವ ಸೋದರಮಾವನ ಮಗಳು ಭಾನು, ಹೀಗೆ ಈ ಸನ್ನಿವೇಶವನ್ನು ಅಭಿ ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಕಥೆ.