'ಕಥೆಯೊಂದು ಶುರುವಾಗಿದೆ' ಸಿನಿಮಾದ ನಾಯಕ ತರುಣ್ (ದಿಗಂತ್) ಕಥೆ ಶುರುವಾಗುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಫಾರಿನ್ ನಲ್ಲಿ ಒಳ್ಳೆಯ ಕೆಲಸ, ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ಅದೇ ಕೆಲಸ ಮಾಡಿ ರೊಬೋಗಳ ರೀತಿ ಆಗಿದ್ದೇನೆ ಎಂದು ಕೆಲಸ ಬಿಟ್ಟು ತನ್ನೂರಿಗೆ ಬರುತ್ತಾನೆ. ಫಾರಿನ್ ನಲ್ಲಿಯೇ ಬದುಕಬೇಕು ಎನ್ನುವ ಪ್ರೇಯಸಿಯನ್ನು ಕೂಡ ಇದೇ ಕಾರಣಕ್ಕೆ ದೂರ ಮಾಡಿಕೊಳ್ಳುತ್ತಾನೆ. ಬಳಿಕ ತನ್ನ ಊರಿಗೆ ಬಂದು ತನ್ನದೇ ಆದ ರೆಸಾರ್ಟ್ ತೆರೆಯುತ್ತಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ, ಬರು ಬರುತ್ತಾ ರೆಸಾರ್ಟ್ ಖಾಲಿ ಆಗುತ್ತದೆ. ಸಂಪಾದನೆ ಕೂಡ ಕರಗುತ್ತದೆ.
ಈ ವೇಳೆಗೆ ಆತನ ರೆಸಾರ್ಟ್ ಗೆ ನಾಯಕಿ ತಾನಿಯಾ (ಪೂಜಾ ದೇವಾರಿಯಾ) ಬರುತ್ತಾಳೆ. ಇಲ್ಲಿಂದ ಇಬ್ಬರ ನಾಲ್ಕು ದಿನದ ಕಥೆ ಶುರು ಆಗುತ್ತದೆ.ತಾನಿಯಾ ತನ್ನ ಗಂಡನ ಜೊತೆಗೆ ರೆಸಾರ್ಟ್ ಗೆ ಬರಬೇಕಿರುತ್ತದೆ. ತನ್ನ ರೆಸಾರ್ಟ್ ಗೆ ಬರುತ್ತಿರುವ ಹೊಸ ಅತಿಥಿಗಳನ್ನು ಕರೆದುಕೊಂಡು ಬರಲು ಏರ್ ಪೋರ್ಟ್ ಗೆ ತರುಣ್ ಹೋಗುತ್ತಾನೆ. ಕಾರಿನಲ್ಲಿ ಬರುವಾಗ ತಾನಿಯಾ ತನ್ನ ಗಂಡ ಸತ್ತು ಹೊದ ಎಂದು ಕಣ್ಣೀರು ಹಾಕುತ್ತಾಳೆ. ಈ ರೀತಿ ಇರುವ ಕಥೆಯಲ್ಲಿ ಬರು ಬರುತ್ತಾ ತಾನಿಯಾ ಹಾಗೂ ತರುಣ್ ಹತ್ತಿರ ಆಗುತ್ತಾರೆ. ಇನ್ನೂ ಮದುವೆ ಆಗದೇ ಇರುವ ತರುಣ್ ತಾನಿಯಳನ್ನು ಇಷ್ಟ ಪಡಲು ಶುರು ಮಾಡುತ್ತಾನೆ. ಹೀಗಿರುವ ಕಥೆ ಒಂದು ದೊಡ್ಡ ತಿರುವು ಪಡೆದುಕೊಳ್ಳುತ್ತದೆ. ಅದೇ ಇಡೀ ಚಿತ್ರದ ಹೈಲೆಟ್ ಆಗಿದೆ.