ನಟ ಧನಂಜಯ್ ಅವರ ಡಾಲಿ ಪಿಕ್ಚರ್ಸ್‌ನ ನಾಲ್ಕನೇ ಸಿನಿಮಾ 'ವಿದ್ಯಾಪತಿ'. ಈ ಚಿತ್ರವನ್ನು ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸಿನಿಮಾ ಕಥೆಯನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.
ನಟ ನಾಗಭೂಷಣ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮಲೈಕಾ ಟಿ ವಸುಪಾಲ್ ಕಾಣಿಸಿಕೊಂಡಿದ್ದು, ಉಳಿದಂತೆ ರಂಗಾಯಣ ರಘು, ಕಾರ್ತಿಕ್ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಹಾಗೂ ಅರ್ಜುನ್ ಮಾಸ್ಟರ್ ಆಕ್ಷನ್ ಈ ಸಿನಿಮಾಕ್ಕಿದೆ.
ವಿದ್ಯಾಪತಿ ಕಥೆ
ಸೂಪರ್‌ಸ್ಟಾರ್ ವಿದ್ಯಾಗೆ (ಮಲೈಕಾ) ಸುಳ್ಳಿನ ಕಂತೆಗಳನ್ನು ಹೇಳಿ ಮದುವೆಯಾಗುವ ಸಿದ್ದು (ನಾಗಭೂಷಣ್) ಬಡ ಕುಟುಂಬದಿಂದ ಬಂದವನು. ಹುಟ್ಟು ಸೋಮಾರಿಯಾಗಿರುವ ಸಿದ್ದು ವಿದ್ಯಾಳನ್ನು ಪ್ರೀತಿ ಮಾಡಿ, ಆಕೆಯ ಮನಸ್ಸನ್ನು ಗೆದ್ದು ಮದುವೆಯಾಗುತ್ತಾನೆ. ಪತ್ನಿಯ ದುಡ್ಡಿನಲ್ಲಿ ಮಜಾ ಮಾಡಿಕೊಂಡಿದ್ದ ಸಿದ್ದು ಸುಳ್ಳಿನ ಸತ್ಯ ಹೊರಬೀಳುತ್ತೆ. ಐಷಾರಾಮಿ ಜೀವನ ನಡೆಸುತ್ತಿದ್ದ ಸಿದ್ದು ಬಾಳಲ್ಲಿ ಜಗ್ಗು (ಗರುಡ ರಾಮ್) ಎಂಟ್ರಿ ಆಗಿ ಕಾಡುವುದಕ್ಕೆ ಶುರು ಮಾಡುತ್ತಾನೆ. ಇಲ್ಲಿಂದ ವಿದ್ಯಾಳ ಪತಿಯ ಗೋಳಾಟ, ಪರದಾಟ ಶುರುವಾಗತ್ತೆ. ದೈತ್ಯ ಜಗ್ಗು ಜೊತೆ ವಿದ್ಯಾಪತಿ ಹೇಗೆ ಹೋರಾಡುತ್ತಾನೆ? ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಅನ್ನೋದೇ ಸಿನಿಮಾ ಕತೆ.
ಬಿಡುಗಡೆ:ವಿದ್ಯಾಪತಿ 2025ರ ಏಪ್ರಿಲ್ 10ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.